ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯದ 14 ಕ್ಷೇತ್ರಗಳಲ್ಲಿ ಮೇ 7ರ ನಾಳೆ 2ನೇ ಹಂತದ ಲೋಕಸಭಾ ಚುನಾವಣೆ #Lok Sabha Election ನಡೆಯಲಿದ್ದು, ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತ ಚಲಾಯಿಸಲು ಅವಕಾಶವಿರಲಿದೆ.
ಭಾನುವಾರ ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದ್ದು, ಸೋಮವಾರ ಅಭ್ಯರ್ಥಿಗಳು ಮನೆ-ಮನೆ ಪ್ರಚಾರ ನಡೆಸಿ ಮತಯಾಚನೆ ಮಾಡಲಿದ್ದಾರೆ.
ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಬಿಜಾಪುರ(ಎಸ್ಸಿ ಮೀಸಲು), ಕಲಬುರಗಿ(ಎಸ್ಸಿ), ರಾಯಚೂರು(ಎಸ್ಟಿ ಮೀಸಲು), ಬೀದರ್, ಕೊಪ್ಪಳ, ಬಳ್ಳಾರಿ(ಎಸ್ಟಿ), ಹಾವೇರಿ, ಧಾರವಾಡ, ಉತ್ತರಕನ್ನಡ, ದಾವಣಗೆರೆ, ಶಿವಮೊಗ್ಗ ಸೇರಿದಂತೆ ಒಟ್ಟು 14 ಲೋಕಸಭಾ ಕ್ಷೇತ್ರಗಳಿಗೆ ನಾಳೆ ಮತದಾನ ನಡೆಯಲಿದೆ.
ಅಭ್ಯರ್ಥಿಗಳನ್ನು ಹೊರತುಪಡಿಸಿ ಕ್ಷೇತ್ರಕ್ಕೆ ಸಂಬಂಧಪಡದ ವ್ಯಕ್ತಿಗಳು ಕ್ಷೇತ್ರದಲ್ಲಿ ಕಾಣಿಸಿಕೊಳ್ಳುವಂತಿಲ್ಲ. ಮತದಾನಕ್ಕೂ 48 ಗಂಟೆ ಮೊದಲು ಶೂನ್ಯ ಅವಧಿ ಪ್ರಾರಂಭವಾಗಿರುವ ಕಾರಣ ಯಾವುದೇ ರೀತಿಯ ಅಬ್ಬರದ ಪ್ರಚಾರ ಕೈಗೊಳ್ಳುವಂತಿಲ್ಲ.
ಮನೆ-ಮನೆ ಮತಯಾಚನೆ ವೇಳೆ ಐದು ಜನಕಕ್ಕಿಂತ ಹೆಚ್ಚು ಜನರು ಇರುವಂತಿಲ್ಲ. ಧ್ವನಿವರ್ಧಕ ಬಳಸದೆ ಮತಯಾಚನೆ ಮಾಡಬಹುದಾಗಿದೆ. ಯಾವುದೇ ರೀತಿಯ ಸಾರ್ವಜನಿಕ ಸಭೆ, ರ್ಯಾಲಿಗಳನ್ನು ನಿರ್ಬಂಧಿಸಲಾಗಿದೆ. ಭಾನುವಾರ ಸಂಜೆ 6 ಗಂಟೆಯಿಂದಲೇ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಮತದಾರರಲ್ಲದ ರಾಜಕೀಯ ಪಕ್ಷಗಳ ಕಾರ್ಯಕರ್ತರು, ಮುಖಂಡರು, ನಾಯಕರು ಕ್ಷೇತ್ರ ಬಿಟ್ಟು ತೆರಳಿದ್ದಾರೆ.
ಅಕ್ರಮವಾಗಿ ತಂಗುವ ಸಾಧ್ಯತೆ ಇರುವ ಕಾರಣ ಚುನಾವಣಾ ಸಿಬ್ಬಂದಿ ಕಲ್ಯಾಣ ಮಂಟಪ, ಹೋಟೆಲ್, ಅತಿಥಿಗೃಹ, ವಸತಿ ಗೃಹ ಸೇರಿದಂತೆ ಇತರೆ ಪ್ರದೇಶಗಳ ಪರಿಶೀಲನೆ ನಡೆಸಿದ್ದಾರೆ.
ಕ್ಷೇತ್ರದ ಗಡಿಗಳಲ್ಲಿ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಿ ಕ್ಷೇತ್ರದ ಹೊರಗಿನಿಂದ ಬರುವ ವಾಹನಗಳ ಚಲನವಲನದ ಮೇಲೆ ನಿಗಾವಹಿಸಬೇಕು. ಅಕ್ರಮವಾಗಿ ಕ್ಷೇತ್ರದಲ್ಲಿ ಓಡಾಡುತ್ತಿರುವುದು ಅನುಮಾನ ಬಂದರೆ ಅವರು ಆಯಾ ಕ್ಷೇತ್ರದ ಮತದಾರರೇ ಅಥವಾ ಇಲ್ಲವೇ ಎಂಬುದನ್ನು ಪತ್ತೆ ಹಚ್ಚಲು ಗುರುತಿನ ಚೀಟಿಗಳನ್ನು ಪರಿಶೀಲನೆ ನಡೆಸಲಾಗುತ್ತದೆ. ಯಾತ್ರಾರ್ಥಿಗಳು, ಪ್ರವಾಸಿಗರಿಗೆ ಕ್ಷೇತ್ರ ಬಿಟ್ಟು ತೆರಳುವ ನಿರ್ಬಂಧ ಇಲ್ಲ ಎಂದು ಆಯೋಗ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post