ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಾಜಿ ಸಚಿವ ಬಿ.ಸಿ. ಪಾಟೀಲ್ ಅವರ ಅಳಿಯ ಪ್ರತಾಪ್ ಕುಮಾರ್(41) ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದು, ಮೆಗ್ಗಾನ್ ಆಸ್ಪತ್ರೆಯ ಶವಾಗಾರದಲ್ಲಿ ಮೃತದೇಹ ಇರಿಸಲಾಗಿದೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ಅರಣ್ಯ ಪ್ರದೇಶದಲ್ಲಿ ರಸ್ತೆ ಬದಿ ಕಾರಿನಲ್ಲಿ ವಿಷ ಸೇವಿಸಿದ್ದಾರೆ. ಇದನ್ನು ಗಮನಿಸಿದ ಕೆಲವರು ತಕ್ಷಣವೇ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಕರೆತಂದರೂ ಅಷ್ಟರಲ್ಲಿ ಆಗಲೇ ಅವರು ಕೊನೆಯುಸಿರೆಳೆದಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಪ್ರತಾಪ್ ಕುಮಾರ್ ಅವರು ಬಿ.ಸಿ. ಪಾಟೀಲ್ ಅವರ ಮೊದಲನೇ ಪುತ್ರಿಯ ಪತಿಯಾಗಿದ್ದಾರೆ. ನಾಳೆ ಚನ್ನಗಿರಿಯ ಕತ್ತಲಗೆರೆಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ತಿಳಿದುಬಂದಿದೆ.
ಬಿ.ಸಿ. ಪಾಟೀಲ್ ಹೇಳಿದ್ದೇನು?
ಘಟನೆ ಕುರಿತಂತೆ ಮಾತನಾಡಿದ ಬಿ.ಸಿ. ಪಾಟೀಲ್, ಬೆಳಗ್ಗೆ ಜೊತೆಯಲ್ಲೇ ತಿಂಡಿ ತಿಂದಿದ್ದೆವು. ಆದರೆ, ಪ್ರತಾಪ್ ಕಾಣೆಯಾಗಿದ್ದಾರೆ ಎಂದು ನನ್ನ ಸಹೋದರು ಕರೆ ಮಾಡಿದ್ದರು. ಹೀಗಾಗಿ, ದಾವಣಗೆರೆ ಹಾಗೂ ಶಿವಮೊಗ್ಗ ಪೊಲೀಸರಿಗೆ ಮಾಹಿತಿ ತಿಳಿಸಿದ್ದೆ ಎಂದರು.
ಕೆರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬರುವಾಗ ಹೊನ್ನಾಳಿಯಿಂದ ಈ ವಿಷಯ ತಿಳಿಯಿತು. ಜೋಳಕ್ಕೆ ಹಾಕುವ ಔಷಧಿ ಕುಡಿದಿದ್ದಾರೆ ಎಂದು ತಿಳಿದುಬಂದಿತು. ಹತ್ತಿರ ಎಂದು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಕೊನೆಯುಸಿರೆಳೆದಿದ್ದಾರೆ ಎಂದು ದುಃಖ ವ್ಯಕ್ತಪಡಿಸಿದರು.
ಅವರಿಗೆ ಮಕ್ಕಳ ವಿಚಾರದಲ್ಲಿ ಕೊರಗಿತ್ತು. ಇದಕ್ಕಾಗಿ ಡಿ ಅಡಿಕ್ಷನ್ ಸೆಂಟರ್’ನಲ್ಲಿ ಚಿಕಿತ್ಸೆ ಪಡೆದು ಸರಿಹೋಗಿದ್ದರು. ಆದರೆ, ಯಾಕೆ ಹೀಗೆ ಮಾಡಿಕೊಂಡರು ಎನ್ನುವುದು ತಿಳಿದಿಲ್ಲ ಎಂದರು.
ಇನ್ನು, ವಿಷಯ ತಿಳಿಯುತ್ತಿದ್ದಂತೆಯೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಂಸದ ಬಿ.ವೈ. ರಾಘವೇಂದ್ರ, ಬಿಜೆಪಿ ಪ್ರಮುಖ ರೇಣುಕಾಚಾರ್ಯ ಸೇರಿದಂತೆ ಪಕ್ಷದ ಹಲವು ಆಸ್ಪತ್ರೆಯ ಶವಾಗಾರದ ಬಳಿ ತೆರಳಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















