ಕಲ್ಪ ಮೀಡಿಯಾ ಹೌಸ್ | ಗೋಕರ್ಣ |
ಜಗತ್ತು ಕಾಲಾಧೀನ; ಭಗವಂತ ಕಾಲಾತೀತ. ಕಾಲಾತೀತ ಭಗವಂತನತ್ತ ಕಾಲಾಧೀನವಾಗಿರುವ ಸಮಾಜವನ್ನು ಒಯ್ಯುವ ಮಾರ್ಗವನ್ನು ಗುರು ತೋರಿಸುತ್ತಾರೆ. ಹೀಗೆ ಗುರು, ಕಾಲವಶವಾಗಿರುವ ಜನತೆ ಮತ್ತು ಕಾಲಾತೀತ ಭಗವಂತನ ನಡುವಿನ ಸಂಬಂಧಸೇತು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರ ಸ್ವಾಮೀಜಿ #Raghaweshwara Shri ನುಡಿದರು.
ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು 48ನೇ ದಿನವಾದ ಶುಕ್ರವಾರ ಕಾಲ ಸರಣಿಯಲ್ಲಿ ಪ್ರವಚನ ಅನುಗ್ರಹಿಸಿದರು.

ಕರ್ಮ ಪ್ರತಿಯೊಬ್ಬರನ್ನೂ ಹಿಂದಿನಿಂದ ಪ್ರೇರೇಪಿಸುತ್ತಿರುತ್ತದೆ. ನಮ್ಮ ಕಡೆಯಿಂದ ನಿರ್ವಂಚನೆಯ ಪ್ರಯತ್ನ ಅಗತ್ಯ ಎಂದು ಸೂಚಿಸಿದರು. ಪ್ರಶ್ನಚಿಂತನದಲ್ಲಿ ನಾವು ಕೇಳುವ ಮೊದಲ ವಾಕ್ಯದ ಮೊದಲ ಅಕ್ಷರ ಕೂಡ ಪ್ರಮುಖವಾಗುತ್ತದೆ. ಕೇಳುವ ವ್ಯಕ್ತಿಯ ಪ್ರಥಮ ಅಕ್ಷರದಿಂದಲೇ ಹಲವು ವಿಷಯಗಳನ್ನು ತಿಳಿಯಬಹುದು. ಮೊದಲ ಅಕ್ಷರ ಸ್ವರದಿಂದ ಆರಂಭವಾಗಿದ್ದರೆ ಜೀವಕ್ಕೆ ಶುಭ. ದೇಹಕ್ಕೆ ಸಮಸ್ಯೆ ಇದೆ ಎಂಬ ಅರ್ಥ. ವ್ಯಂಜನಗಳಿಂದ ಆರಂಭವಾದರೆ ದೇಹಕ್ಕೆ ಶುಭ, ಜೀವಕ್ಕೆ ಸಮ್ಯೆ ಎಂಬ ಅರ್ಥ ಎಂದು ವಿವರಿಸಿದರು.
ಜಾತಕದಲ್ಲಿ ಸಂಕಷ್ಟಗಳು ಇದ್ದರೂ, ಪುಣ್ಯಕಾರ್ಯಗಳನ್ನು ಮಾಡುವ ಮೂಲಕ ಸಂಕಷ್ಟ ಬಗೆಹರಿಸಿಕೊಳ್ಳಲು ಅವಕಾಶವಿದೆ ಎಂದು ತಿಳಿಸಿದರು. ಪ್ರಶ್ನಚಿಂತನದಲ್ಲಿ ಅನುನಾಸಿಕ ಅಥವಾ ನಪುಂಸಕ ಅಕ್ಷರಗಳಿಂದ ವಾಕ್ಯ ಪ್ರಾರಂಭವಾದರೆ ಅದಕ್ಕೆ ಅನಿಷ್ಠಫಲ ಹೇಳಲಾಗಿದೆ. ಧೀರ್ಘಾಕ್ಷರಗಳಿಂದ ಆರಂಭವಾದರೆ ಶುಭ ಫಲವನ್ನು ಹೇಳಿದೆ. ಸ್ವರಗಳಲ್ಲಿ ದೋಷಪ್ರದ ಅಥವಾ ಅನಿಷ್ಠ ಅಕ್ಷರಗಳಿಲ್ಲ. ಜಲಾಕ್ಷರಗಳು ಬಂದರೆ ಪ್ರಶಸ್ತ ಎಂದರು. ವರ್ಗೀಯ ವ್ಯಂಜನಗಳಲ್ಲಿ ಮೊದಲ ಅಕ್ಷರಗಳು ವಾಯು, ಎರಡನೇ ಅಕ್ಷರ ಅಗ್ನಿ, ಮೂರನೇ ಅಕ್ಷರ ಇಂದ್ರ, ನಾಲ್ಕನೇ ಅಕ್ಷರ ಜಲ ಮತ್ತು ಯದನೇ ಅಕ್ಷರವನ್ನು ನಪುಂಸಕ ಎಂದು ಕರೆಯುತ್ತೇವೆ. ಆಯಾ ಅಕ್ಷರಗಳಿಗೆ ಭಿನ್ನ ಫಲವಿದೆ ಎಂದು ವಿಶ್ಲೇಷಿಸಿದರು.

ಜ್ಯೋತಿಷ್ಯದ ಮೂಲತತ್ವಗಳನ್ನು ತಿಳಿದುಕೊಂಡರೆ, ಬದುಕು ಹಸನಾಗುತ್ತದೆ. ಬೇರೆಯವರ ಬದುಕಿನ ಸಮಸ್ಯೆಗಳನ್ನೂ ಬಗೆಹರಿಸಬಹುದು. ಈ ವಿದ್ಯೆ ಇರುವುದು ಲೋಕಕ್ಷೇಮಕ್ಕಾಗಿ. ದುಃಖ ಕಷ್ಟಗಳ ಪರಿಹಾರಕ್ಕೆ. ಈ ಅಪೂರ್ವ ವಿದ್ಯೆಯನ್ನು ಹಣ ಸಂಪಾದನೆಗಾಗಿ ಮಾರಿಕೊಳ್ಳಬಾರದು ಎಂದು ಎಚ್ಚರಿಸಿದರು.
ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಚಾತುರ್ಮಾಸ್ಯ ವ್ರತದಲ್ಲಿರುವ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಯುವ ಪ್ರಧಾನ ಕೇಶವಪ್ರಕಾಶ್ ಎಂ, ವಿದ್ಯಾರ್ಥಿ ಪ್ರಧಾನ ಈಶ್ವರ ಪ್ರಸಾದ್ ಕನ್ಯಾನ, ಚಾತುಮಾಸ್ಯ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಪಂಡಿತ್, ವಿವಿವಿ ಪ್ರಧಾನ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಜಿ.ವಿ.ಹೆಗಡೆ, ಶ್ರೀಕಾರ್ಯದರ್ಶಿ ಜಿ.ಕೆ.ಮಧು, ಸುಬ್ರಾಯ ಅಗ್ನಿಹೋತ್ರಿ, ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 







Discussion about this post