ಕಲ್ಪ ಮೀಡಿಯಾ ಹೌಸ್ | ಕಾರ್ಕಳ |
ಕೇವಲ ಮಾತಿನಿಂದ ಕೆಲಸವಾಗಲ್ಲ. ಮಾತು ಕೃತಿಗಿಳಿದಾಗ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ಸರಕಾರಿ ಪದವಿಪೂರ್ವ ಕಾಲೇಜು ಕುಕ್ಕುಜೆಯ ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ ಸುರೇಶ ಮರಕಾಲ ತಿಳಿಸಿದರು.
ಇಲ್ಲಿನ ಕ್ರೈಸ್ಟ್ ಕಿಂಗ್ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಶಿಕ್ಷಕ ರಕ್ಷಕ ಸಂಘದ ಆಶ್ರಯದಲ್ಲಿ ಸಂಸ್ಥೆಯ ‘ಫಾ.ಎಫ್.ಪಿ.ಎಸ್ ಮೋನಿಸ್’ ಸಭಾಂಗಣದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅವರು, ದೀಪ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ದೇಶದ ಪರಂಪರೆಯ ಉಳಿವಿಗಾಗಿ ಹೋರಾಡುತ್ತಿರುವ ಶಿಕ್ಷಕರು ಅಭಿನಂದನಾರ್ಹರು. ಮಕ್ಕಳು ಶಿಕ್ಷಕರ ಮಾತುಗಳನ್ನು ವೇದವಾಕ್ಯವಾಗಿ ಪರಿಗಣಿಸಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಕಳ ಜೇಸಿಸ್ ಆಂಗ್ಲಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಸುರೇಖಾರಾಜ್ ಅವರಿಗೆ ‘ಕ್ರೈಸ್ಟ್‌ಕಿಂಗ್ ಶಿಕ್ಷಕ ರತ್ನ’ ಮತ್ತು ಪೆರ್ವಾಜೆಯ ಸುಂದರ ಪುರಾಣಿಕ್ ಸ್ಮಾರಕ ಸರಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ವೇದಾವತಿ ಅವರಿಗೆ ‘ಕ್ರೈಸ್ಟ್‌ಕಿಂಗ್ ಕ್ರೀಡಾ ಶಿಕ್ಷಕಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
Also read: ಜ್ಯೋತಿಷ್ಯದ ಸಮಗ್ರ ಅಧ್ಯಯನ ಅತ್ಯಗತ್ಯ: ರಾಘವೇಶ್ವರ ಶ್ರೀ
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸುರೇಖಾರಾಜ್, ಈ ಜಗದಲ್ಲಿ ಪ್ರತಿಯೊಬ್ಬರ ಸಾಧನೆಯ ಹಿಂದೆ ಇರುವ ಶಕ್ತಿ ಗುರು, ಅಂತಹ ಗುರು ಸದಾ ಸ್ಮರಣೀಯರು ಎಂದು ಹೇಳಿದರು.
ವೇದಾವತಿಯವರು ಮಾತನಾಡಿ ಮಕ್ಕಳನ್ನು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮಾಡುವ ಮೂಲಕ ಶಿಕ್ಷಕರು ಮಕ್ಕಳ ಭವಿಷ್ಯ ಕಟ್ಟಿಕೊಡುತ್ತಾರೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ರೈಸ್ಟ್‌ಕಿಂಗ್ ಎಜುಕೇಷನ್ ಟ್ರಸ್ಟ್‌ನ ಸದಸ್ಯ ಡಾ. ಪೀಟರ್ ಫೆರ್ನಾಂಡಿಸ್ ಮಾತನಾಡಿ, ಸುಸಂಸ್ಕೃತ ಸಮಾಜ ನಿರ್ಮಿಸುವಲ್ಲಿ ಶಿಕ್ಷಕರ ಪಾತ್ರ ಬಹಳ ದೊಡ್ಡದು. ನೀಡುವ ಶಿಕ್ಷಣ ಉತ್ತಮವಾಗಿದ್ದರೆ ದೇಶ ಕೂಡಾ ಉತ್ತಮವಾಗಿರುತ್ತದೆ. ಮಕ್ಕಳಲ್ಲಿ ಕ್ರಿಯಾಶೀಲತೆ ಮೊಳೆಯುವಂತೆ ಮಾಡುವ ಶಿಕ್ಷಕರು ತಾವು ಕೂಡಾ ಸದಾ ಅಧ್ಯಯನಶೀಲರಾಗಿರಬೇಕು ಎಂದು ಹೇಳಿದರು.
ಶಿಕ್ಷಕ-ರಕ್ಷಕ ಸಂಘದ ಪ್ರೌಢಶಾಲಾ ವಿಭಾಗದ ಅಧ್ಯಕ್ಷರಾದ ಪ್ರಕಾಶ್ ಡಿಸೋಜ ಅವರು ಸಂದರ್ಭೋಚಿತವಾಗಿ ಮಾತನಾಡಿದರು. ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ರುಡಾಲ್ಫ್ ಕಿಶೋರ್ ಲೋಬೊ ಪ್ರಸ್ತಾವನೆಗೈದರೆ ಪ್ರೌಢಶಾಲಾ ಮುಖ್ಯ ಶಿಕ್ಷಕ ಡೊಮಿನಿಕ್ ಅಂದ್ರಾದೆ ಪ್ರಶಸ್ತಿಗಳ ಪರಿಚಯಗೈದರು.
ಸಂಸ್ಥೆಯ ಜೀವಶಾಸ್ತ್ರ ಉಪನ್ಯಾಸಕ ಮೌನೇಶ್ವರ ಆಚಾರ್ಯ, ಸಂಖ್ಯಾಶಾಸ್ತ್ರ ಉಪನ್ಯಾಸಕಿ ಉದಯಶ್ರೀ ಹಾಗೂ ಪ್ರಾಥಮಿಕ ಶಾಲಾ ಸಹಶಿಕ್ಷಕಿ ಪ್ರಣೀತಾ, ರೂಪಾಲಿ, ದೈಹಿಕ ಶಿಕ್ಷಣ ಶಿಕ್ಷಕಿ ಕು.ಲಾವಣ್ಯ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಸಂಸ್ಥೆಯ ಎಲ್ಲಾ ಶಿಕ್ಷಕರು, ಉಪನ್ಯಾಸಕರು ಹಾಗೂ ಬೋಧಕೇತರ ವೃಂದದವರನ್ನು ಈ ಸಂದರ್ಭದಲ್ಲಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಂಸ್ಥೆಯ ಪದವಿಪೂರ್ವ ಪ್ರಾಚಾರ್ಯ ಲಕ್ಷ್ಮೀನಾರಾಯಣ ಕಾಮತ್, ಸಂಸ್ಥೆಯ ಸಮಾಲೋಚಕಿ ಸಿ.ಡಾ.ಶಾರ್ಲೆಟ್ ಸಿಕ್ವೇರಾ, ಆಡಳಿತಾಧಿಕಾರಿ ವಿನಯ ಕುಮಾರ್ ಹಾಗೂ ಶಿಕ್ಷಕ ರಕ್ಷಕ ಸಂಘದ ಪದವಿಪೂರ್ವ ವಿಭಾಗದ ಅಧ್ಯಕ್ಷ ರಾಜೇಶ್ ಕುಂದರ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಕ್ಷಕರಿಂದ ಹಾಗೂ ಪೋಷಕರಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ಜರುಗಿದವು. ಸುಪ್ರಿಯಾ, ಜ್ಯೋತಿ ಬಬಿತಾ, ಶೈಲಾ ಲೋಬೊ, ಉದಯರವಿ, ವಾಣಿ, ನೀತಾ, ವನಿತಾ ವಿವಿಧ ಕಾರ್ಯಕ್ರಮ ನಿರೂಪಿಸಿದರು.
ಶಿಕ್ಷಕ – ರಕ್ಷಕ ಸಂಘದ ಪ್ರಾಥಮಿಕ ವಿಭಾಗದ ಅಧ್ಯಕ್ಷೆ ಲಿನೆಟ್ ಮರಿನಾ ಡಿಸೋಜ ಸ್ವಾಗತಿಸಿ, ಶಿಕ್ಷಕ-ರಕ್ಷಕ ಸಂಘದ ಸದಸ್ಯ ವಿಶ್ವನಾಥ ಪೂಜಾರಿ ವಂದಿಸಿದರು. ಶಿಕ್ಷಕಿಯರಾದ ಆಲಿಸ್ ಲೋಬೊ ಹಾಗೂ ಶ್ರುತಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post