ಕಲ್ಪ ಮೀಡಿಯಾ ಹೌಸ್ | ಬೆಂಗಳೂರು | ಲೇಖನ: ಶಿವಮೊಗ್ಗ ರಾಮ್ |
ಉದ್ಯಾನನಗರಿ ಬೆಂಗಳೂರಿನ ಸಂಯೋಗ ಕಲಾಶಾಲೆಯ ನೃತ್ಯಗುರು ವಿದುಷಿ ಲತಾ ಲಕ್ಷ್ಮೀಶ ಅವರ ಶಿಷ್ಯೆ ಎನ್. ಅಶ್ವಿನಿ ಸ್ವರೂಪ್ ಭರತನಾಟ್ಯ ರಂಗಪ್ರವೇಶಕ್ಕೆ ಅಣಿಯಾಗಿದ್ದಾರೆ.
ಬಸವೇಶ್ವರನಗರದ ಕೆಇಎ ಪ್ರಭಾತ್ ರಂಗಮಂದಿರವು ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯಾಗಲಿದೆ. ಡಿ. 1ರ ಭಾನುವಾರ ಸಂಜೆ 5ಕ್ಕೆ ‘ಜನನಿ’ ಪರಿಕಲ್ಪನೆಯಲ್ಲಿ ಅಶ್ವಿನಿ ನಡೆಸಲಿರುವ ನೃತ್ಯಾರೋಹಣವು ಭರವಸೆಯ ನೃತ್ಯತಾರೆಯ ಬದುಕಿನಲ್ಲೊಂದು ಹೊಸ ಮೈಲಿಗಲ್ಲನ್ನು ಸ್ಥಾಪಿಸಲಿದೆ.
Also read: ಅಂತರ ಕಾಲೇಜು ಚೆಸ್ ಪಂದ್ಯಾವಳಿ | ಶೃಂಗೇರಿಯ ಜೆಸಿಬಿಎಂ ಕಾಲೇಜು ತಂಡಕ್ಕೆ ಪ್ರಥಮ ಸ್ಥಾನ
ಅಶ್ವಿನಿ ಭರತನಾಟ್ಯ ರಂಗಪ್ರವೇಶಕ್ಕೆ ಹಿರಿಯ ನೃತ್ಯ ಶಿಕ್ಷಕಿ ಶ್ರೀಲತಾ ತೀರ್ಥಹಳ್ಳಿ, ಶಿವಮೊಗ್ಗದ ಸಂಗೀತ ಶಿಕ್ಷಕ ಪ್ರೀತಂ ಗಂಧರ್ವ, ಗುರು ವಿದುಷಿ ಲತಾ, ಕಲಾ ವಿನ್ಯಾಸಕಾರ ಲಕ್ಷ್ಮೀಶ ಸಾಕ್ಷಿಯಾಗಲಿದ್ದಾರೆ. ತಂತ್ರಜ್ಞ ಸ್ವರೂಪ್, ಉದ್ಯಮಿಗಳಾದ ನಾರಾಯಣ್, ಗೋವಿಂದರಾಜು, ಯಶೋದಮ್ಮ, ಎ.ಸರಸ್ವತಿ ಉಪಸ್ಥಿತರಿರಲಿದ್ದಾರೆ.
ಕಲೆಯನ್ನು ಕರಗತ ಮಾಡಿಕೊಳ್ಳಬೇಕು ಎಂಬ ಉತ್ಕಟ ಅಪೇಕ್ಷೆ ಇದ್ದಾಗ ಅದಕ್ಕೆ ಯಾವುದೇ ವಯೋಮಾನದ ಅಡ್ಡಿ-ಆತಂಕಗಳು ಅಡ್ಡ ಬರುವುದಿಲ್ಲ. ದಿಟ್ಟ ಸಂಕಲ್ಪವೊಂದೇ ಉತ್ತುಂಗಕ್ಕೆ ಏರಲು ಪ್ರೇರಕ ಮತ್ತು ಪೂರಕವಾಗಬಲ್ಲದು. ಈ ಮಾತಿಗೆ ಭರವಸೆಯ ಯುವ ಕಲಾವಿದೆ ಅಶ್ವಿನಿ ಅವರು ಮಾದರಿಯಾಗಿ ನಿಲ್ಲುತ್ತಾರೆ. ಹೌದು. ಬೆಂಗಳೂರಿನ ಉದ್ಯಮಿ ನಾರಾಯಣ ಹಾಗೂ ಯಶೋದಮ್ಮ ಅವರ ಪ್ರಥಮ ಪುತ್ರಿ ಅಶ್ವಿನಿ ಕಲಾ ಚಟುವಟಿಕೆಗಳಿಗೆ ಅವರ ಸುಸಂಸ್ಕೃತ ಮನೆ ಪರಿಸರವೇ ಸ್ಫೂರ್ತಿ ನೀಡಿತು. ತಾತ-ಪ್ರಖ್ಯಾತ ಮೃದಂತಗ ವಿದ್ವಾಂಸ ಮಹದೇವಣ್ಣ ಅವರು ‘ಭರತನಾಟ್ಯವನ್ನು ಕಲಿತುಕೋ…’ ಎಂದು ಹೇಳಿದ್ದ ಕಿವಿಮಾತೇ ಈಕೆಯನನು ಒಬ್ಬ ಕ್ರಿಯಾಶೀಲ ಕಲಾವಿದೆಯನ್ನಾಗಿ ರೂಪಿಸಿತು ಎಂಬುದು ಮಹತ್ವದ ಸಂಗತಿ.
ಭರತನಾಟ್ಯ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಬೇಕು. ಪಿ ಎಚ್‌ಡಿ ಮಾಡಬೇಕು ಎಂಬ ಉತ್ಕಟ ಅಪೇಕ್ಷೆ ಇದೆ. ನನ್ನ ತಾಯಿ ಅವರು ನನ್ನ ಮಗುವನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಂಡಿದ್ದಕ್ಕೆ ನನಗೆ ಸಾಧನೆ ಸಾಕಾರವಾಯಿತು. ಅತ್ತೆ-ಮಾವ, ಪತಿ ನಿರಂತರ ಪ್ರೋತ್ಸಾಹವಿದೆ. ಪತಿ ಸ್ವರೂಪ್ ಸಂಗೀತ ಪ್ರಿಯರಾಗಿದ್ದು, ನನ್ನ ಕಲಾ ಕೈಂಕರ್ಯಕ್ಕೆ ಉತ್ತೇಜಕರಾಗಿದ್ದಾರೆ. ಗುರುಕೃಪೆ ದೊಡ್ಡ ಶಕ್ತಿಯಾಗಿದೆ.
-ವಿದುಷಿ ಅಶ್ವಿನಿ ಸ್ವರೂಪ್, ಯುವ ನರ್ತಕಿ
ನಡೆದುಬಂದ ಹಾದಿ
7ನೇ ತರಗತಿ ಓದುವ ಹಂತದಲ್ಲಿ ಅಶ್ವಿನಿ ನೃತ್ಯ ಕಲಿಕೆಗೆ ಕೊಂಚ ಆಸಕ್ತಿ ತೋರಿದರೂ ಆಗ ಅದು ಕೈಗೂಡಲಿಲ್ಲ. ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಪದವಿ ಅಧ್ಯಯನಕ್ಕೆ ಸೇರಿದ್ದ ಸಂದರ್ಭ ಸಹಪಾಠಿ ಗೆಳತಿಯರು ‘ನೃತ್ಯ ಕಲಿಯೇ..’ ಎಂದು ಪ್ರೇರಣೆ ನೀಡಿದ್ದೇ ಅಶ್ವಿನಿಗೆ ಹೊಸ ದಿಕ್ಕು ತೋರಿಸಿತು. ವಿದುಷಿ ಲತಾ ಅವರಲ್ಲಿ ನೃತ್ಯ ಕಲಿಕೆಗೆ ಸೇರ್ಪಡೆ. ಬೆಂಗಳೂರಿನ ಸುಂಕದಕಟ್ಟೆಯ ಸಂಯೋಗ ನೃತ್ಯ ಕಲಾ ಶಾಲೆಯೇ 2ನೇ ಮನೆಯಾಯಿತು. ಲತಾ ಕೇವಲ ನೃತ್ಯ ಶಿಕ್ಷಕಿಯಾಗಲಿಲ್ಲ, ಮಾತೃತ್ವದ ಧಾರೆ ಎರೆದರು. ಡಾನ್ಸ್ ಕಲಿಕೆಯಲ್ಲಿ ಅಶ್ವಿನಿ ಮತ್ತೆ ಹಿಂದಿರುಗಿ ನೋಡಲೇ ಇಲ್ಲ. ಹಾಗೆ ಸಾಗಿತು ಸಾಧನೆ.
ಯಕ್ಷಗಾನ ಆಸಕ್ತಿ
ಬಡಗು ತಿಟ್ಟು ಯಕ್ಷಗಾನವನ್ನೂ ಕೆಲ ಸಮಯ ಹವ್ಯಾಸವಾಗಿ ಕಲಿತುಕೊಂಡ ಅಶ್ವಿನಿ, ಭರತನಾಟ್ಯದ ಕಲಿಕೆಗೆ ತೋರಿದ ಅತೀವ ಆಸಕ್ತಿ ಮತ್ತು ಕಾಳಜಿಗಳೇ ಇಂದು ಅವರನ್ನು ವಿದ್ವತ್ ಪದವಿಗೇರಿಸಿ, ರಂಗಪ್ರವೇಶದ ಹೊಸ್ತಿಲಿಗೆ ತಂದು ನಿಲ್ಲಿಸಿ ಅಲಂಕೃತಳನ್ನಾಗಿ ಮಾಡಿದೆ. ಕ್ರಿಯಾಶೀಲತೆ ಅರಳಲು ಅನೇಕ ಕಾರಣ ದೊರಕಬಹುದು. ಆದರೆ ಅಂತರಂಗದಲ್ಲಿ ನಾನು ನೃತ್ಯವನ್ನು ಕಲಿಯಲೇಬೇಕು ಎಂಬ ಬೀಜ ಮೊಳೆತಾಗ ಕಾಣುವುದೆಲ್ಲವೂ ‘ಪಾಠ’ಗಳೇ.ಗುರುವಾಕ್ಯ
ನೃತ್ಯವನ್ನು ಕಲಿಯುವ ಬಹಳ ಮಕ್ಕಳು ಇರುತ್ತಾರೆ. ಆದರೆ ಅದನ್ನು ಪ್ರೀತಿಸುವವರು ಕೆಲವೇ ಜನ. ನಾವು ಮೊದಲು ನಮ್ಮ ಕಲೆಯನ್ನು ಗಾಢವಾಗಿ ಪ್ರೀತಿಸುವ ಮನೋಭಾವ ರೂಢಿಸಿಕೊಂಡಾಗ ಮಾತ್ರ ಅದು ನಮಗೆ ಒಲಿಯುತ್ತದೆ ಎಂದು ಗುರು ಲತಾ ಅವರು ಹೇಳಿದ್ದು ಅಶ್ವಿನಿಗೆ ವೇದವಾಕ್ಯವಾಯಿತು. ಶಾಲಾ ಮತ್ತು ಕಾಲೇಜುಗಳ ವ್ಯಾಸಂಗ, ವೃತ್ತಿ, ವಿವಾಹ, ಸಂತಾನ- ಇವೆಲ್ಲವೂ, ಎಲ್ಲರಿಗೂ ಆಯಾ ಕಾಲಕ್ಕೆ ಲಭ್ಯವಾಗುತ್ತವೆ. ಆದರೆ ಇವುಗಳ ನಡುವೆಯೇ ನಮಗೆ ಅತ್ಯಂತ ಖುಷಿ ನೀಡುವ ಕಲೆಗಳನ್ನು ಆರಾಧಿಸಬೇಕು. ಆ ಭಾಗ್ಯ ದೊರಕಿದೆ ಅಶ್ವಿನಿಗೆ ಎಂಬುದೇ ಧನ್ಯತೆ ಸ್ವರೂಪ.
ಅಮ್ಮನಾದ ಗುರು
ಗುರು ಲತಾ- ಶಿಷ್ಯೆ ಅಶ್ವಿನಿ ಸಂಬಂಧವೂ ಇಲ್ಲಿ ಉಲ್ಲೇಖನೀಯ. ‘ಅವರು ನನಗೆ ಮಾತೃ ಸ್ವರೂಪಿ’ ಎನ್ನುತ್ತಾರೆ ಅಶ್ವಿನಿ. ರಂಗಪ್ರವೇಶಕ್ಕೆ ಅವರು ‘ಜನನಿ’ ಎಂಬ ಟ್ಯಾಗ್ ಲೈನ್ ಸೇರಿಸಲು ಇದೂ ಒಂದು ಕಾರಣ. ಡಾನ್ಸ್ ಕಲಿಕೆ ಸಂದರ್ಭ, ಜೂನಿಯರ್, ಸೀನಿಯರ್ ಪರೀಕ್ಷೆಗಳನ್ನು ಎದುರಿಸುವ ಕಾಲದಲ್ಲಿ ಲತಾ ಮೇಡಂ ಡಬ್ಬಿಗಳಲ್ಲಿ ಊಟ, ತಿಂಡಿಯನ್ನು ಅತ್ಯಂತ ಪ್ರೀತಿಯಿಂದ ಕಟ್ಟಿಕೊಂಡು ಬರುತ್ತಿದ್ದರು. ಜತೆಗೆ ನಾನಿದ್ದೇನೆ. ಮುನ್ನುಗ್ಗು…. ಎಂಬ ಭರವಸೆ ನೀಡಿದ ಕಾರಣಕ್ಕಾಗಿಯೇ ನಾನು ಇಂದು ಈ ಪ್ರಮುಖ ಘಟ್ಟಕ್ಕೆ ಬಂದಿರುವೆ.
ವಿದ್ವತ್ ಪರೀಕ್ಷೆಯನ್ನೂ ಸರಾಗವಾಗಿ ಎದುರಿಸಿದೆ ಎಂದು ಅಭಿಮಾನದಿಂದಲೇ ಸ್ಮರಿಸಿಕೊಳ್ಳುತ್ತಾರೆ ಅಶ್ವಿನಿ. ಗುರುವಿನ ಪರಮೋಚ್ಚ ಪ್ರೀತಿ ಮತ್ತು ವಿಶ್ವಾಸ ದೊರೆತಿದೆ. ಇದರೊಂದಿಗೆ ಹೆತ್ತವರು, ಕೈಹಿಡಿದ ಪತಿ, ಆತ್ಮೀಯತೆಯಿಂದ ಕಾಣುವ ಅತ್ತೆ-ಮತ್ತು ಮಾವ ನೀಡುವ ಸಹಕಾರವೇ ರಂಗಪ್ರವೇಶಕ್ಕೆದೊಡ್ಡ ಶಕ್ತಿಯನ್ನು ನೀಡಿದೆ ಎಂದು ಹೇಳುತ್ತಾರೆ ಕಲಾವಿದೆ ಅಶ್ವಿನಿ. 3 ವರ್ಷದ ಗಂಡು ಮಗುವಿದ್ದರೂ ವಿದ್ವತ್ ಪರೀಕ್ಷೆ ನಂತರ ರಂಗಾರೋಹಣ ಮಾಡಲೇಬೇಕು ಎಂಬ ಉತ್ಕಟ ಆಕಾಂಕ್ಷೆಗೆ ಅಮ್ಮ ಸೇರಿದಂತೆ ಹಿರಿಯರು ಮತ್ತು ಕುಟುಂಬದವರು ಭದ್ರ ನೆಲೆಗಟ್ಟಾಗಿದ್ದಾರೆ. ಇದು ಅಶ್ವಿನಿಗೆ ದೊರೆತ ಸುಯೋಗವೇ ಸರಿ.
ಕಲಾವಿದ ಮಹದೇವಣ್ಣ ಅವರಿಗೆ ಸನ್ಮಾನ
ರಂಗ ಪ್ರವೇಶದ ಇದೇ ಸಂದರ್ಭ ಮೊಮ್ಮಗಳಿಗೆ ಉತ್ತೇಜನ ನೀಡಿರುವ ಹಿರಿಯ ಮೃದಂಗ ವಿದ್ವಾಂಸ ಮಹದೇವಣ್ಣ ಅವರಿಗೆ ಗೌರವಾರ್ಪಣೆಯೂ ನಡೆಯಲಿದೆ.
ಬದ್ಧತೆ ಮತ್ತು ವಿನಯತೆಗಳೇ ಅಶ್ವಿನಿಗೆ ಭೂಷಣವಾಗಿದೆ. ಈಕೆ ಕಲೆಯನ್ನು ಅಂತರಂಗದಲ್ಲಿ ಪೂಜಿಸುವ ವಿದ್ಯಾರ್ಥಿ. ರಂಗದ ಬಗ್ಗೆ ಅಪಾರವಾದ ಗೌರವ ಇರಿಸಿಕೊಂಡ ಕಾರಣಕ್ಕಾಗಿ ಅಶ್ವಿನಿಗೆ ಬೇಗ ಕಲೆ ಮೈದುಂಬಿಕೊಂಡಿದೆ. ಆಕೆ ಕಲಾಜೀವನ ಯಶವಾಗಲಿ.
-ವಿದುಷಿ ಲತಾ ಲಕ್ಷ್ಮೀಶ, ಸಂಯೋಗ ನೃತ್ಯ ಶಾಲೆ ನಿರ್ದೇಶಕಿ
ಹಿಮ್ಮೇಳದ ಕಲಾವಿದರು
ಅಶ್ವಿನಿ ಭರತನಾಟ್ಯ ರಂಗ ಪ್ರವೇಶಕ್ಕೆ ಗುರು ಲತಾ (ನಟುವಾಂಗ) ವಿದ್ವಾನ್ ಶ್ರೀಕಾಂತ ಗೋಪಾಲಕೃಷ್ಣನ್ (ಗಾಯನ), ಜನಾರ್ದನರಾವ್ (ಮೃದಂಗ), ಜಯರಾಮ ಕಿಕ್ಕೇರಿ (ಕೊಳಲು), ಗೋಪಾಲ ವೆಂಕಟರಮಣ (ವೀಣೆ) ಪಿ .ವಿದ್ಯಾಸಾಗರ (ಖಂಜಿರ) ಸಹಕಾರ ನೀಡಿ ಪ್ರಸ್ತುತಿಯ ರಂಗೇರಿಸಲಿದ್ದಾರೆ.
ವೃತ್ತಿ- ಪ್ರವೃತ್ತಿ ಸಮಾಗಮ
ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದರೂ ಪ್ರವೃತ್ತಿಯಲ್ಲಿ ಅಶ್ವಿನಿ ಒಬ್ಬ ಭರತನಾಟ್ಯ ಆರಾಧಕಿಯಾಗಿರುವುದು ಗಮನಾರ್ಹ. ಈಗಾಗಲೇ ಮೈಸೂರು, ದೆಹಲಿ, ಪಾಂಡಿಚೆರಿ, ತಿರುಮಲ-ತಿರುಪತಿ ಸೇರಿದಂತೆ ದೇಶದ ವಿವಿಧ ವೇದಿಕೆಗಳಲ್ಲಿ ಅವರು ಗುರುವಿನೊಂದಿಗೆ ಹೆಜ್ಜೆ ಹಾಕಿ ಕಛೇರಿಗಳನ್ನು ನೀಡಿದ್ದಾರೆ. ಹಲವು ಪ್ರಾತ್ಯಕ್ಷಿಕೆ ನೀಡಿ ಸೈ ಎನಿಸಿಕೊಂಡಿದ್ದಾರೆ. ಗುರು ಲತಾ ಅವರ ಪತಿ ಮತ್ತು ಕಲಾ ನಿರ್ದೇಶಕ ಲಕ್ಷ್ಮೀಶ ಅವರ ಬೆಂಬಲವನ್ನು ನೆನಪಿಸಿಕೊಳ್ಳುತ್ತಾರೆ. ಇಂಥ ಕೃತಜ್ಞತೆ ಮತ್ತು ಸಮರ್ಪಣಾ ಭಾವಗಳೇ ಭರವಸೆಯ ಕಲಾವಿದೆಗೆ ಭೂಷಣವಾಗಿವೆ. ವೃತ್ತಿ-ಪ್ರವೃತ್ತಿ-ಕುಟುಂಬ ಜೀವನವನ್ನು ಸಮಾಗಮ ಮಾಡಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post