ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಪ್ರಖ್ಯಾತ ಕಲಾವಿದೆ ಕರ್ನಾಟಕ ಕಲಾ ಡಾ. ಸುಪರ್ಣಾ ವೆಂಕಟೇಶ್ ಅವರ ಹೆಮ್ಮೆಯ ಶಿಷ್ಯೆ ಶ್ರೀನಿಧಿ ಹೆಗಡೆ ಅವರು ಡಿ.
1ರಂದು ಭರತನಾಟ್ಯ ರಂಗ ಪ್ರವೇಶಕ್ಕೆ ಅಣಿಯಾಗಿದ್ದಾರೆ.
ಸಾಯಿ ಆರ್ಟ್ಸ್ ಇಂಟರ್ ನ್ಯಾಷನಲ್ ಸಂಸ್ಥೆ ನಗರದ ವೈಯಾಳಿ ಕಾವಲಿನಲ್ಲಿರುವ ತೆಲುಗು ವಿಜ್ಞಾನ ಸಮಿತಿಯ ಶ್ರೀ ಕೃಷ್ಣದೇವರಾಯ ರಂಗಮಂದಿರದಲ್ಲಿ ಭಾನುವಾರ ಸಂಜೆ 5ಕ್ಕೆ ಶ್ರೀನಿಧಿ ಹೆಗಡೆ ರಂಗಾರೋಹಣ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಹಿರಿಯ ಕಲಾವಿದೆ, ಕರ್ನಾಟಕ ಕಲಾಶ್ರೀ ಸುನಂದಾದೇವಿ, ಪ್ರಖ್ಯಾತರಂಗ ಕಲಾವಿದ ಪ್ರಸಾದ್ , ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ ಡೀನ್ ಪಿ. ವಿನಯ್ , ತಾಂತ್ರಿಕ ನಿರ್ದೇಶಕ ಸಾಯಿ ವೆಂಕಟೇಶ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಡಾ. ಮಧುರ ಹೆಗಡೆ ಮತ್ತು ಗಂಗಾಧರ ಹೆಗಡೆ ಉಪಸ್ಥಿತರಿರಲಿದ್ದಾರೆ.
ಬಹುಮುಖಿ ಕಲಾವಿದೆ:
ವೃತ್ತಿಯಲ್ಲಿ ಡ್ರಗ್ ಅನಾಲಿಸ್ಟ್ ಆಗಿರುವ ಶ್ರೀನಿಧಿ ಬಹುಮುಖ ಪ್ರತಿಭೆಯ ಅಭಿಜಾತ ಕಲಾವಿದೆ. ಕುಟುಂಬದ ಸುಸಂಸ್ಕೃತ ಪರಿಸರದಲ್ಲಿ ಬೆಳೆದ ಈ ವಿದ್ಯಾರ್ಥಿನಿ, ಗುರು ಸುಪರ್ಣಾ ಅವರಲ್ಲಿ ಕಳೆದ ಒಂದು ದಶಕದಿಂದ ಭರತನಾಟ್ಯ ಅಭ್ಯಾಸ ಮಾಡಿ, ನೃತ್ಯದ ಪಟ್ಟುಗಳನ್ನು ಸಮರ್ಥವಾಗಿ ಕರಗತ ಮಾಡಿಕೊಂಡಿದ್ದಾರೆ. ಜೂನಿಯರ್ ಮತ್ತು ಸೀನಿಯರ್ ಭರತನಾಟ್ಯ ಪರೀಕ್ಷೆಗಳನ್ನು ಅತ್ಯುನ್ನತ ಶ್ರೇಣಿಯಲ್ಲಿ ಪೂರ್ಣಗೊಳಿಸಿರುವ ಶ್ರೀನಿಧಿ, ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯದ ಕಥಕ್ ಮತ್ತು ಹಿಂದೂಸ್ತಾನಿ ಸಂಗೀತ ಪರೀಕ್ಷೆಯ
ಮೂರು ಹಂತಗಳನ್ನು ಅತ್ಯುತ್ತಮ ಅಂಕದೊಂದಿಗೆ ಪೂರ್ಣಗೊಳಿಸಿರುವುದು ವಿಶೇಷ.
ಹಲವು ಬಹುಮಾನ:
ಅಂತರ ಕಾಲೇಜು ಸಂಗೀತ ಮತ್ತು ನೃತ್ಯ ಸ್ಪರ್ಧೆಗಳಲ್ಲಿ ಹತ್ತಾರು ಬಹುಮಾನ ಪಡೆದಿರುವ ಈ ಪ್ರತಿಭಾನ್ವಿತೆಗೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಅನೇಕ ಪ್ರತಿಷ್ಠಿತ ವೇದಿಕೆಗಳಲ್ಲಿ ಕಲಾಪ್ರದರ್ಶನ ಮಾಡುವ ಯೋಗವೂ ದೊರಕಿರುವುದು ಗಮನಾರ್ಹ ಸಂಗತಿ.
ಕಲಾ ಪ್ರಸ್ತುತಿ:
ಸಾಯಿ ನಿತ್ಯೋತ್ಸವ, ಬಿಎಂಐ ಟೈಟಾನ್ ಪಂದ್ಯಾವಳಿ, ಇಸ್ಕಾನ್ ಬ್ರಹ್ಮರಥೋತ್ಸವ, ಗುರುವಾಯೂರು ಮತ್ತು ಸಾಯಿ ದೇಗುಲಗಳಲ್ಲಿ ಕಲಾ ಪ್ರದರ್ಶನ , ಮೈಸೂರು ದಸರಾ ಯುವ ಸಂಭ್ರಮದಲ್ಲಿ ನರ್ತನ, ನಂದಿ ಬೆಟ್ಟದ ಶಿವರಾತ್ರಿ ಕಾರ್ಯಕ್ರಮದಲ್ಲಿ ಭರತನಾಟ್ಯ ಕಲಾ ಪ್ರೌಢಿಮೆ ಜನ ಮನ್ನಣೆ ಗಳಿಸಿವೆ. ಅನೇಕ ಕಾರ್ಪೊರೇಟ್ ವಲಯಗಳು ಸೇರಿ ದೇಶದ ಹಲವು ವೇದಿಕೆಗಳಲ್ಲಿ ಗುರುವಿನೊಂದಿಗೆ ಶ್ರೀನಿಧಿ ಹೆಜ್ಜೆ ಹಾಕಿರುವುದು ಮಹತ್ವದ ಸಂಗತಿ.
ಭರತನಾಟ್ಯದೊಂದಿಗೆ ಕಥಕ್ ನೃತ್ಯ ಪ್ರಕಾರದಲ್ಲೂ ಆಸಕ್ತಿ ಹೊಂದಿರುವ ಶ್ರೀನಿಧಿ, ಕಳೆದ ನಾಲ್ಕು ವರ್ಷಗಳಿಂದ ಕಥಕ್ ನೃತ್ಯ ಅಭ್ಯಾಸದಲ್ಲಿ ವಿಶೇಷ ಪಟ್ಟುಗಳನ್ನು ಕಲಿಯುವಲ್ಲಿ ಆಸಕ್ತಿ ತೋರಿದ್ದಾರೆ. ಬಹುಮುಖಿ ಕಲಾವಿದೆಯಾದ ಶ್ರೀನಿಧಿಗೆ ಅನೇಕ ಪ್ರಶಸ್ತಿ- ಪುರಸ್ಕಾರಗಳು ಅಲಂಕರಿಸಿವೆ. ಕರ್ನಾಟಕ ರಾಜ್ಯ ಶಿಕ್ಷಕರ ಸಂಘದಿಂದ ನಾಟ್ಯಕಲಾರತ್ನ, ರಾಜ್ಯ ವಕೀಲರ ಸಂಘದಿಂದ ಇಂಡೋ ಇಂಟರ್ನ್ಯಾಷನಲ್ ಪ್ರಭ ಪ್ರಶಸ್ತಿಗೆ ಈಕೆ ಭಾಜನವಾಗಿರುವುದು ಕಲಾಸಕ್ತಿಗೆ ಸಾವಿರಪಟ್ಟು ಚೈತನ್ಯ ನೀಡಿವೆ.
ಗುರು ಸುಪರ್ಣಾ ವೆಂಕಟೇಶ್, ಕಲಾ ಪ್ರೇಮಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜಕ ಸಾಯಿ ವೆಂಕಟೇಶ್ ಅವರ ಅನಂತ ಅಭಿಮಾನ, ವಿಶ್ವಾಸ ಮತ್ತು ಶಿಷ್ಯ ವಾತ್ಸಲ್ಯದ ಪ್ರತೀಕವಾಗಿ ಕಲಾ ಸೇವೆಯಲ್ಲಿ ಶ್ರೀ ನಿಧಿ ಭರವಸೆಯ ಹೆಜ್ಜೆ ಇಡುತ್ತ ಇದ್ದಾರೆ. ತಾಯಿ ಡಾ. ಮಧುರಾ ಹೆಗಡೆ ಮತ್ತು ತಂದೆ ಗಂಗಾಧರ ಹೆಗಡೆಯವರು ನಿರಂತರವಾದ ಪ್ರೋತ್ಸಾಹವನ್ನು ನೀಡಿ ಮಗಳಿಗೆ ಕಲಾಕ್ಷೇತ್ರದ ಮೈಲಿಗಲ್ಲುಗಳನ್ನು ಸಾಧಿಸಲು ಪ್ರೇರಕ ಮತ್ತು ಪೂರಕವಾಗಿರುವುದು ಬಹಳ ವಿಶೇಷ.
ಹಿಮ್ಮೇಳ:
ಶ್ರೀನಿಧಿ ಹೆಗಡೆಯವರ ಭರತನಾಟ್ಯ ರಂಗ ಪ್ರವೇಶ ಕಾರ್ಯಕ್ರಮಕ್ಕೆ ರಂಗು ಏರಿಸಲು ನಟವಾಂಗದಲ್ಲಿ ಗುರು ಡಾ. ಸುಪರ್ಣಾ, ಗಾಯನದಲ್ಲಿ ನಂದಕುಮಾರ್ ಉನ್ನಿ ಕೃಷ್ಣನ್, ಮೃದಂಗದಲ್ಲಿ ಶ್ರೀಹರಿ , ವೀಣೆಯಲ್ಲಿ ಆರ್. ಪಿ. ಪ್ರಶಾಂತ್, ರಿದಂ ಪ್ಯಾಡ್ ನಲ್ಲಿ ಕಾರ್ತಿಕ್ ವಿದ್ಯಾರ್ಥಿ ಸಹಕಾರ ನೀಡಲು ಸಿದ್ಧರಾಗಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post