ಉತ್ತರ ಕೊರಿಯಾದ ಜೀವನ ಮಟ್ಟದಲ್ಲಿ ಹೇಳುವುದಾದರೆ, ಸ್ವಲ್ಪ ಶ್ರೀಮಂತ ಕುಟುಂಬದಲ್ಲಿ ಜನಿಸಿದ ಯಯೋನ್ಮಿ ಪಾರ್ಕ್‌ಳ ತಂದೆ ಕೊರಿಯಾದ ವರ್ಕ್‌ರ್‌ಸ್ ಪಾರ್ಟಿ ಕೊರಿಯಾದಲ್ಲಿ (WPK) ಮತ್ತು ತಾಯಿ ಕೊರಿಯನ್ ಆರ್ಮಿಯಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಕಾಲಾಂತರದಲ್ಲಿ ಈಕೆಯ ತಂದೆ ರಾಜಧಾನಿ ಪ್ಯಾಂಗ್‌ಯಾಂಗ್‌ನಲ್ಲಿ ವ್ಯವಹಾರವೊಂದನ್ನು ಸ್ಥಾಪಿಸಿದ್ದರು. ಆದರೆ ಹಲವು ವರ್ಷಗಳ ನಂತರ ಕಳ್ಳಸಾಗಾಣೆ ಆರೋಪದಲ್ಲಿ ತಂದೆ ಜೈಲು ಪಾಲಾದ ನಂತರ ಯೆಯೋನ್ಮಿ, ಅವಳ ತಾಯಿ ಮತ್ತು ಅಕ್ಕ ಹಸಿವಿನಿಂದ ನರಳುವ ಪರಿಸ್ಥಿತಿ ಎದುರಾಗಿತ್ತು.
ಈ ಎಲ್ಲಾ ಘಟನೆಗಳಿಂದಾಗಿ ಯೆಯೋನ್ಮಿ ಮತ್ತು ಆಕೆಯ ಕುಟುಂಬಕ್ಕೆ ಕಿಮ್ ಮನೆತನದ ಬಗ್ಗೆ ಇದ್ದ ಅಭಿಪ್ರಾಯ ಸಂಪೂರ್ಣ ಬದಲಾಗಿತ್ತು. ಕುಟುಂಬವನ್ನು ಭೇಟಿ ಮಾಡಿದ ತಂದೆ ಉತ್ತರ ಕೊರಿಯಾದಿಂದ ತಪ್ಪಿಸಿಕೊಂಡು ದಕ್ಷಿಣ ಕೊರಿಯಾಕ್ಕೆ ಸೇರಿಕೊಳ್ಳುವ ಉಪಾಯ ಸೂಚಿಸಿದ್ದರು. ಈ ನಡುವೆ ಯೆಯೋನ್ಮಿಯ ಅಕ್ಕ ಕುಟುಂಬಕ್ಕೂ ತಿಳಿಸದೇ ಉತ್ತರ ಕೊರಿಯಾದಿಂದ ತಪ್ಪಿಸಿಕೊಂಡು ಚೀನಾ ಸೇರಿ ದ್ದಳು. ಈ ಎಲ್ಲದರ ಮಧ್ಯೆ ಆಕೆ ಒಮ್ಮೆ ಕಾನೂನಿನ ಕಣ್ತಪ್ಪಿಸಿ ‘ಟೈಟಾನಿಕ್’ ಚಿತ್ರ ನೋಡಿದ್ದಳು. ಈ ಚಿತ್ರ ಆಕೆಯ ಮೇಲೆ ಗಾಢ ಪರಿಣಾಮ ಬೀರಿತ್ತು. ಯಾಕೆಂದರೆ ಉತ್ತರ ಕೊರಿಯಾದಲ್ಲಿ ಪ್ರೀತಿ ಪ್ರೇಮಕ್ಕೆ ಅರ್ಥವೇ ಇಲ್ಲ. ಅಲ್ಲಿ ರುವ ಪ್ರೀತಿ ಪ್ರೇಮ ಕೇವಲ ಕಿಮ್ ಮನೆತನಕ್ಕೆ ಮೀಸಲು ಉತ್ತರಕೊರಿಯಾ ದಿಂದ ತಪ್ಪಿಸಿಕೊಂಡು ಚೀನಾ ಸೇರಿದರೆ ತಾನು ಸ್ವತಂತ್ರವಾಗಿರಬಹುದೆಂದು ಕಲ್ಪನೆಯ ಚಿಗುರೊಡೆಯುವುದಕ್ಕೆ ‘ಟೈಟಾನಿಕ್’ ಚಿತ್ರ ಕಾರಣವಾಗಿತ್ತು.
ದೇಶ ಬಿಟ್ಟು ಚೀನಾಕ್ಕೆ ಹೋಗುವ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದ ಯೆಯೋನ್ಮಿ ತನ್ನ ತಾಯಿಯ ಜೊತೆಯಲ್ಲಿ ಬೆಟ್ಟಗುಡ್ಡಗಳನ್ನು ಹತ್ತಿಳಿದು ಹೆಪ್ಪುಗಟ್ಟಿದ ನದಿಯನ್ನು ದಾಟಿ ಚೀನಾ ಸೇರಿದಳು. ಆದರೆ ಚೀನಾ ತಲುಪಿದ ನಂತರ ಮತ್ತೊಂದು ದುರ್ಘಟನೆ 13 ವರ್ಷದ ಬಾಲೆಯನ್ನು ಕಾಡಿತ್ತು. ಚೀನಾದ ಏಜೆಂಟ್‌ಗಳು ಯೆಯೋನ್ಮಿಯ ತಾಯಿಯನ್ನು ಆಕೆಯ ಮುಂದೆಯೇ ಅತ್ಯಾಚಾರಗೈದಿದ್ದರು.
ಚೀನಾದಲ್ಲಿ ಬದುಕಲು ತಮಗೆ ಉಳಿದಿರುವ ದಾರಿಯೆಂದರೆ ತಮ್ಮನ್ನು ತಾವು ಚೀನಿಯರಿಗೆ ಮಾರಿಕೊಂಡು ಸೇವಕಿಯರಾಗಿರುವುದು. ಇಲ್ಲವಾದರೆ, ಉತ್ತರ ಕೊರಿಯಾಕ್ಕೆ ಹೋಗಿ ಪ್ರಾಣ ಬಿಡುವುದು. ಆನಂತರದಲ್ಲಿ ಯೆಯೋನ್ಮಿಯ ತಾಯಿ 65 ಡಾಲರ್‌ಗೆ ಮಾರಾಟವಾದಳು ಮತ್ತು ಯೆಯೋನ್ಮಿ 26 ಡಾಲರ್‌ಗೆ ಮಾರಾಟವಾದಳು. ನೆನಪಿರಲಿ, ಇದೆಲ್ಲಾ ನಡೆಯುವಾಗ ಆ ಪುಟ್ಟ ಬಾಲಕಿಗೆ ವಯಸ್ಸು ಕೇವಲ 13.
(ಮುಂದುವರೆಯುವುದು)
Discussion about this post