ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯದ ರಾಜ್ಯ ಸರ್ಕಾರದ ನಡೆ ಖಂಡಿಸಿ ಇಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ರಾಜ್ಯ ಸರ್ಕಾರದವರು ನುಡಿದಂತೆ ನಡೆದ್ದಿದೇವೆ ಎಂದು ಹೇಳುತ್ತಾರೆ. ಆದರೆ ಅವರ ಪ್ರಣಾಳಿಕೆಯಲ್ಲಿ ಹೇಳಿದ ರೈತ ವಿರೋಧಿ 3 ಕೃಷಿ ಕಾಯ್ದೆಗಳನ್ನ ವಾಪಾಸು ಪಡೆಯುತ್ತೇವೆ ಮತ್ತು ವಿದ್ಯುತ್ ಖಾಸಗೀಕರಣ ಮಾಡುವುದಿಲ್ಲವೆಂದು ಲಿಖಿತ ಭರವಸೆ ಕೊಟ್ಟಿದ್ದರು. ಆದರೆ ಈಗ ಅದನ್ನು ನೆರವೇರಿಸದೆ ರೈತರಿಗೆ ದ್ರೋಹ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.

ರಾಜ್ಯಪಾಲರ ನಡೆಗೆ ಖಂಡನೆ
ಮೈಕ್ರೋ ಫೈನಾನ್ಸ್ ಹಾವಳಿಯಿಂದ ರೈತರು, ಬಡವರು ಆತ್ಮಹತ್ಯೆಯ ದಾರಿ ತುಳಿದಿದ್ದಾರೆ. ರಾಜ್ಯ ಸರ್ಕಾರ ಇದಕ್ಕೆ ಸಂಬಂಧಿಸಿದಂತೆ ಕಾಯ್ದೆ ರೂಪಿಸಿ ರಾಜ್ಯಪಾಲರ ಬಳಿ ಸಹಿಗೆ ಕಳಿಸಿದರೆ ಅವರು ಸಹಿ ಮಾಡದೇ ವಾಪಸ್ ಕಳಿಸಿದ್ದಾರೆ. ಇದರ ಔಚಿತ್ಯವೇನು? ರಾಜ್ಯಪಾಲರು ಕೂಡಲೇ ಈ ಕಾಯ್ದೆಗೆ ಸಹಿ ಹಾಕಬೇಕು. ಇಲ್ಲದಿದ್ದರೆ ಅವರ ನಡೆಯನ್ನು ತೀವ್ರವವಾಗಿ ರೈತ ಸಂಘ ಖಂಡಿಸುತ್ತದೆ.
ಹೆಚ್.ಆರ್. ಬಸವರಾಜಪ್ಪ
ಹಿಂದಿನ ಸರ್ಕಾರ ಕೃಷಿ ಕಾಯ್ದೆಗಳನ್ನ ತರುವ ಸಮಿತಿಯಲ್ಲಿದ್ದ ಅಶೋಕ್ ದಳವಾಯಿ ಅವರನ್ನ ಕೃಷಿ ಬೆಲೆ ಆಯೋಗದ ಅಧ್ಯಕ್ಷರನಾಗಿ ಮಾಡಿತ್ತು. ಇವರನ್ನ ಈಗಿನ ಕಾಂಗ್ರೆಸ್ ಸರ್ಕಾರ ಮತ್ತೆ ಅಧ್ಯಕ್ಷರಾಗಿ ವಿಸ್ತರಿಸಿದೆ. ಜೊತೆಗೆ ರೈತ ವಿರೋಧಿ ಕೃಷಿ ಕಾಯ್ದೆಗಳ ಅಧ್ಯಯನ ನಡೆಸಿ ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಹೇಳುತ್ತಿದ್ದ ಬಿ.ಜೆ.ಪಿ ಸರ್ಕಾರದ ಹಳೇ ಮಂತ್ರವನ್ನ ಹೇಳಿ ಶಿಫಾರಸ್ಸು ಮಾಡಲು ತಿಳಿಸಿದೆ ಎಂದು ಆರೋಪಿಸಿದರು.
Also read: ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಹರ್ಷಿತ್ ಗೌಡ ಆಯ್ಕೆ
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ದಲಿತರಿಗೆ, ರೈತರಿಗೆ, ಕಾರ್ಮಿಕರಿಗೆ ನ್ಯಾಯ ಒದಗಿಸುತ್ತೇವೆ ಎಂದು ಹೇಳಿತ್ತು. ಆದರೆ ಈಗ ಅದ್ಯಾವುದನ್ನು ಮಾಡಿಲ್ಲ. ರೈತರ ಬೇಡಿಕೆಗಳನ್ನು ಈಡೇರಿಸಿಲ್ಲ. ದಲಿತರಿಗೆ ಮೀಸಲಿಟ್ಟ ಹಣವನ್ನು ಕೂಡ ಬೇರೆ ಇಲಾಖೆಗೆ ಬಳಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.
ಕೂಡಲೇ ರಾಜ್ಯ ಸರ್ಕಾರ ಮಾತು ಕೊಟ್ಟಂತೆ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ವಾಪಸ್ ತೆಗೆದುಕೊಳ್ಳಬೇಕು. ವಿದ್ಯುತ್ ಖಾಸಗೀಕರಣ ಮಾಡಬಾರದು. ಎಂಎಸ್ಪಿಯನ್ನು ಕಾನೂನಾತ್ಮಕವಾಗಿ ಜಾರಿ ಮಾಡಬೇಕು. ರೈತರ ಮೇಲೆ ಹಾಕಿರುವ ಕೇಸ್ ಗಳನ್ನು ವಾಪಸ್ ತೆಗೆದುಕೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ರೈತ ಸಂಘ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷರಾದ ಹೆಚ್.ಆರ್ ಬಸವರಾಜಪ್ಪ, ದಲಿತ ಸಂಘರ್ಷ ಸಮಿತಿ ಮುಖಂಡ ಹಾಲೇಶಪ್ಪ, ಪ್ರಮುಖರಾದ ಹಿಟ್ಟೂರು ರಾಜು, ಕೆ. ರಾಘವೇಂದ್ರ, ಎಂ.ಮಂಜಪ್ಪ, ಎಂ.ಮಹದೇವಪ್ಪ, ಜ್ಞಾನೇಶ್, ಭದ್ರಾವತಿ ಜಿ.ಎನ್ ಪಂಚಾಕ್ಷರಿ, ಹನುಮಂತಪ್ಪ ಮೊದಲಾದವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















