ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕರ್ನಾಟಕವನ್ನು ಮಾದಕ ವಸ್ತು ಮುಕ್ತ #Drug Free ರಾಜ್ಯವನ್ನಾಗಿಸುವ ಉದ್ದೇಶದಿಂದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ #ABVP ಆ.12ರಂದು “ಮೈಸೂರು ಚಲೋ” ಚಳುವಳಿಯನ್ನು ಹಮ್ಮಿಕೊಂಡಿದೆ ಎಂದು ಪರಿಷತ್‌ನ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಆದಿತ್ಯ ಜಿ. ಹೇಳಿದರು.
ಅವರು ಇಂದು ಬೆಳಿಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಾಂಸ್ಕೃತಿಕ ನಗರಿ ಮೈಸೂರು ಇತ್ತೀಚೆಗೆ ಮಾದಕ ವ್ಯಸನ ಮತ್ತು ಡ್ರಗ್ಸ್ ಜಾಲದ ಕೇಂದ್ರವಾಗಿ ಮಾರ್ಪಟ್ಟಿರುವುದು ಆತಂಕಕಾರಿ ವಿಷಯವಾಗಿದೆ. ಮಹಾರಾಷ್ಟ್ರ ಪೊಲೀಸರು ಮೈಸೂರಿನಲ್ಲಿ ಕೋಟ್ಯಾಂತರ ರೂ. ಮೌಲ್ಯದ ಡ್ರಗ್ಸ್ ತಯಾರಿಕಾ ಘಟಕವನ್ನು ಪತ್ತಹಚ್ಚಿರುವುದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಕಾನೂನು ಸುವ್ಯವಸ್ಥೆ ಮತ್ತು ಗುಪ್ತಚರ ಇಲಾಖೆಯ ಕಾರ್ಯಕ್ಷಮತೆಯ ಮೇಲೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ವೈಫಲ್ಯವನ್ನು ಖಂಡಿಸಿ ಚಳುವಳಿ ಹಮ್ಮಿಕೊಳ್ಳಲಾಗಿದೆ ಎಂದರು.

ಮೈಸೂರಿನಲ್ಲಿ ಪತ್ತೆಯಾದ ಡ್ರಗ್ಸ್ ಫ್ಯಾಕ್ಟರಿ ಪ್ರಕರಣವನ್ನು ಉನ್ನತಮಟ್ಟದ ತನಿಖೆಗೆ ಒಪ್ಪಿಸಬೇಕು. ಕಾನೂನು ಸುವ್ಯವಸ್ಥೆ ಮತ್ತು ಗುಪ್ತಚರ ವೈಫಲ್ಯಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕಠಿಣಕ್ರಮ ಕೈಗೊಳ್ಳಬೇಕು. ಎನ್‌ಡಿಪಿಎಸ್ ಮತ್ತು ಕೋಪ್ಟಾ ಕಾಯ್ದೆಗಳನ್ನು ಬಲಪಡಿಸುವಲ್ಲಿ ಪ್ರಮುಖ ತಿದ್ದುಪಡಿಯಾಗಬೇಕು. ಡ್ರಗ್ಸ್ ಮಾಫಿಯಾವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು. ಯುವಕರಲ್ಲಿ ಜಾಗೃತಿ ಮೂಡಿಸಲು ಪೊಲೀಸ್ ಇಲಾಖೆಯು ಶಾಲಾ ಕಾಲೇಜು ಹಾಗೂ ವಿದ್ಯಾರ್ಥಿ ಸಂಘಟನೆಗಳ ನೆರವಿನಿಂದ ಅಭಿಯಾನಗಳನ್ನು ನಡೆಸಬೇಕು ಎಂದು ಒತ್ತಾಯಿಸಿದರು.

ಆ.12ರ ಬೆಳಿಗ್ಗೆ 10-30ಕ್ಕೆ ಜಾಗೃತಿ ರ‍್ಯಾಲಿಯು ಮೈಸೂರಿನ ವಸ್ತು ಪ್ರದರ್ಶನ ಮೈದಾನದ ಪಾರ್ಕಿಂಗ್ ಸ್ಥಳದಿಂದ ಹೊರಟು ಆರ್‌ಗೇಟ್ ಮಾರ್ಗವಾಗಿ ಕೋಟೆ ಆಂಜನೇಯ ಸ್ವಾಮಿ ರಸ್ತೆ, ಗಾಂಧಿವೃತ್ತ ತಲುಪಿ, ಗಾಂಧಿವೃತ್ತದಲ್ಲಿ ಸಾರ್ವಜನಿಕ ಬಹಿರಂಗ ಸಭೆ ನಡೆಯಲಿದೆ. ಈ ಮೈಸೂರು ಚಲೋ ಚಳುವಳಿಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಸುಮಾರು 5 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಎಬಿವಿಪಿ ವಿಭಾಗ ಸಂಚಾಲಕ ರವಿ ಇರೋಜಿ, ಶಿವಮೊಗ್ಗ ನಗರ ಕಾರ್ಯದರ್ಶಿ ನಿರಂಜನ್, ಜಿಲ್ಲಾ ಕಾರ್ಯದರ್ಶಿ ಲೋಹಿತ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post