ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಳ್ಳಾರಿ, ವಿಜಯನಗರ, ತಮಕೂರು ಹಾಗೂ ಚಿತ್ರದುರ್ಗ ಸೇರಿದಂತೆ ರಾಜ್ಯದ ಗಣಿ ಭಾದಿತ ಪರಿಸರ ಮತ್ತು ಜನ ಬದುಕಿನ ಪುನಶ್ಚೇತನಕ್ಕಾಗಿ ವಿಸ್ತೃತ ಜನಾಂದೋಲನಕ್ಕೆ ಕಾರ್ಯಕರ್ತರಲ್ಲಿ ನಾಯಕತ್ವ ಗುಣ ಬೆಳೆಸುವ ಉದ್ದೇಶದೊಂದಿಗೆ ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿ ಕವಿಶೈಲದಲ್ಲಿ ಅ.4-5ರಂದು ಉಪನ್ಯಾಸ ಶಿಬಿರ ಆಯೋಜಿಸಲಾಗಿದೆ ಎಂದು ಸಮಾಜ ಪರಿವರ್ತನಾ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಎಸ್.ಆರ್. ಹಿರೇಮಠ್ ತಿಳಿಸಿದ್ದಾರೆ.
ಅವರು ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಗಣಿಭಾದಿತ ಪ್ರದೇಶದ ಜನರ ಸಶಕ್ತೀಕರಣಕ್ಕಾಗಿ ಮತ್ತು ಕೇಂದ್ರ ಸರ್ಕಾರ ಗಣಿಗಾರಿಕೆ ಅವಕಾಶ ನೀಡಬಾರದೆಂದು ಒತ್ತಾಯಿಸಿ ಆ.16ರಂದು ಬಳ್ಳಾರಿಯಲ್ಲಿ ಜನಾಂದೋಲನಗಳ ಮಹಾಮೈತ್ರಿ ಸಿಟಿಜೆನ್ಸ್ ಫಾರ್ ಡೆಮಾಕ್ರಸಿ ಹಾಗೂ ಕರ್ನಾಟಕದ ಇತ್ಯಾದಿ ಸಂಘಟನೆಗಳ ವತಿಯಿಂದ ಬೃಹತ್ ಸಮಾವೇಶ ನಡೆಸಲಾಯಿತು. ಈ ಸಮಾವೇಶ ಭಾಗವಾಗಿ ಸತ್ಯಾಗ್ರಹಕ್ಕಾಗಿ ಸಿದ್ಧತೆ, ಜನಾಂದೋಲನ ಸಶಕ್ತೀಕರಣಕ್ಕಾಗಿ ಮತ್ತು ಭವಿಷ್ಯದ ಪೀಳಿಗೆಯ ನಾಯಕತ್ವ ಬೆಳೆಸುವ ಉದ್ದೇಶದೊಂದಿಗೆ ಈ ಶಿಬಿರ ಆಯೋಜಿಸಲಾಗಿದೆ ಎಂದು ವಿವರಿಸಿದರು.
ಪ್ರಸಿದ್ದ ತರಬೇತುದಾರ ದಿಲೀಪ್ ಕಾಮತ್ ಮಾರ್ಗದರ್ಶನದಲ್ಲಿ ಜಿ.ಎನ್. ಸಿಂಹ ಹಾಗೂ ಜ್ಞಾನ ಸಿಂಧು ಅವರು ಶಿಬಿರ ನಡೆಸಿಕೊಡಲಿದ್ದಾರೆ. ಎರಡು ದಿನಗಳಕಾಲನಡೆಯುವ ಈ ಶಿಬಿರದಲ್ಲಿ ಗಣಿ ಭಾದಿತ ಪರಿಸರ-ಜನ ಬದುಕಿನ ಪುನಶ್ವೇತನ ಹೋರಾಟ ಸಮಿತಿ, ಜನಾಂದೋಲನಗಳ ಮಹಾ ಮೈತ್ರಿ ಸೇರಿದಂತೆ ಇತರೆ ಸಂಘಟನೆಗಳ ನೂರಾರು ಮಂದಿ ಕಾರ್ಯಕರ್ತರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆಂದು ಅವರು ತಿಳಿಸಿದರು.
ಬಳ್ಳಾರಿ, ವಿಜಯನಗರ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳ ಒಟ್ಟು ಕಬ್ಬಿಣ ಅದಿರಿನ ಉತ್ಪಾದನೆ ವರ್ಷಕ್ಕೆ 20 ಮಿಲಿಯನ್ ಮೆಟ್ರಿಕ್ ಟನ್ನು ಗಳನ್ನು ದಾಟಬಾರದು. ಈ ಕುರಿತು ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗಡೆ ಅವರು ವರದಿ ಹೇಳಿದಂತೆ ಸಮಾಜ ಪರಿವರ್ತನಾ ಸಮುದಾಯ ಸುಪ್ರೀಂ ಕೋರ್ಟ್‍ನಲ್ಲಿ ಕೇಳಿಕೊಂಡಂತೆ ವಾರ್ಷಿಕ ಉತ್ಪಾದನೆ 20 ಮಿಲಿಯನ್ ಮೆಟ್ರಿಕ್ ಟನ್ನುಗಳನ್ನು ಆಗಬೇಕೆನ್ನುವುದಕ್ಕೆ ಕೋರ್ಟ್ ಕೂಡ ಪುರಸ್ಕರಿಸಿರುವ ಹಿನ್ನೆಲೆಯಲ್ಲಿ ಸರ್ಕಾರಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಅವರು ಒತ್ತಾಯಿಸಿದರು.
ಗಣಿಗಾರಿಕೆ ಅನುಮತಿ ನೀಡುವ ವಿಚಾರದಲ್ಲಿ ಸರ್ಕಾರಗಳು ಕೋರ್ಟ್ ಸೂಚನೆಗಳನ್ನು ಉಲ್ಲಂಘಿಸುತ್ತಾ ಬರುತ್ತಿವೆ. ಬಳ್ಳಾರಿ ಭಾಗದಲ್ಲಿ ಹೊಸದಾಗಿ ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸುತ್ತಾ ಬಂದಿದ್ದರೂ, ಈಗ ಕೆಐಒಸಿಎಲ್, ಸಾರಂಗಪಾಣಿ, ಜಿಂದಾಲ್ ಕಂಪನಿಗಳಿಗೆ ಅಕ್ರಮವಾಗಿ ಗಣಿ ಅನುಮತಿ ನೀಡುವ ಹುನ್ನಾರ ನಡೆದಿದೆ.
ಎ.ಬಿ.ಸಿ. ಮಾದರಿಯಲ್ಲಿ ನೀಡಬೇಕಾಗಿದ್ದಲ್ಲಿ ಸರ್ಕಾರ ಅಮೂಲ್ಗಗೇಮೆಟೆಡ್ ಮಾದರಿಯಲ್ಲಿ ರೆಂಡಮ್ ಆಗಿ ಅನುಮತಿ ನೀಡಲಾಗಿದೆ. ಸಂಡೂರು ಅರಣ್ಯ ಪ್ರದೇಶದ ಸಾವಿರಾರು ಎಕರೆ ಭೂಮಿ ಈಗ ಗಣಿಗೆ ಬಲಿಯಾಗುವ ಆತಂಕವಿದೆ. ಇದರ ವಿರುದ್ಧ ಜನಾಂದೋಲನ ರೂಪಿಸುವ ಉದ್ದೇಶವಿದೆ ಅವರು ಹೇಳಿದರು.
ಇದೇ ವೇಳೆ ಅವರು ಲಡಾಖ್ ಚಳವಳಿಯಲ್ಲಿ ಸಕ್ರೀಯವಾಗಿ ಪರಿಸರ ಹಾಗೂ ಪ್ರಜಾಪ್ರಭುತ್ವ ಹೋರಾಟಗಾರ ವಾಂಗ್ಚುಕ್ ಅವರನ್ನು ಬಂಧಿಸಿ ಜೋದ್ ಪೂರ್ ಜೈಲಿನಲ್ಲಿಟ್ಟಿರುವ ಸರ್ಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಿದ ಹಿರೇಮಠ್, ವಾಗ್ಚುಂಕ್ ಅವರನ್ನು ಬಂಧನದಿಂದ ಬಿಡುಗಡೆ ಮಾಡಬೇಕು, ಅವರ ಸಕ್ರಿಯ ಸಹಭಾಗಿತ್ವದಲ್ಲಿ ಕಾರ್ಗಿಲ್ ಸಂಘಟನೆಗಳೊಂದಿಗೆ ಮಾತುಕತೆ ನಡೆಸಬೇಕೆಂದು ಆಗ್ರಹಿಸಿದರು. ಪತ್ರಿಕಾಗೋಷ್ಟಿ ಯಲ್ಲಿ ಸಂಘಟನೆಗಳ ಪ್ರಮುಖರಾದ ಕೆ.ವಿ. ಭಟ್, ಜಿ.ಎನ್.ಸಿಂಹಾ, ಎಂ.ಡಿ.ವಸಂತ್ ಕುಮಾರ್, ವಾಸುದೇವ್ ಕೋಟ್ಯಾನ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 









