ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅಧಿಕಾರಕ್ಕಾಗಿ ಹೆಣಗಾಡುತ್ತಿರುವ ರಾಜ್ಯದ ಕಾಂಗ್ರೆಸ್ ಸರ್ಕಾರ ಜಾತಿ ಗಣತಿ #Caste Census ಹೆಸರಿನಲ್ಲಿ ಅಹಿಂದವನ್ನು ಓಲೈಸುತ್ತಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ #MP B Y Raghavendra ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಅವರು ಇಂದು ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಆರಂಭಿಸಿದ ಜಾತಿ ಸಮೀಕ್ಷೆ ಸಂಪೂರ್ಣ ಅವೈಜ್ಞಾನಿಕವಾಗಿದೆ. ಜನರಿಗೇ ಇದರಲ್ಲಿ ಆಸಕ್ತಿ ಇಲ್ಲ. ಕಾಂಗ್ರೆಸ್ ಸಚಿವರೇ ಈ ಸಮೀಕ್ಷೆ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಜ್ಯ ಹೈಕೋರ್ಟ್ ಕೂಡ ಈ ಸಮೀಕ್ಷೆಯಲ್ಲಿ ಎಲ್ಲಾ ಪ್ರಶ್ನೆಗಳಿಗೂ ಕಡ್ಡಾಯವಾಗಿ ಮಾಹಿತಿ ನೀಡುವ ಅವಶ್ಯಕತೆ ಇಲ್ಲ ಎಂದು ತೀರ್ಪು ನೀಡಿದೆ. ವಾಸ್ತವ ಹೀಗಿದ್ದಾಗ ಈ ಜಾತಿಗಣತಿ ಮಾಡಿ ಪ್ರಯೋಜನವೇನು ಎಂದು ಪ್ರಶ್ನಿಸಿದರು.
ಸಂವಿಧಾನದ ಬಗ್ಗೆ ಮಾತನಾಡುವ ಕಾಂಗ್ರೆಸ್ಸಿಗರು ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರಿಗೇ ಚುನಾವಣೆಯಲ್ಲಿ ಟಿಕೆಟ್ ನೀಡದೆ ಸಂಸತ್ ಒಳಗೆ ಪ್ರವೇಶಿಸದಂತೆ ಹೊರಗಿಟ್ಟಿತ್ತು. ಹಿಂದುಳಿದ ವರ್ಗಗಳ ಬಗ್ಗೆ ಕಾಕಾ ಕಾಲೇಕರ್ ವರದಿಯನ್ನು ಕಾಂಗ್ರೆಸ್ 40 ವರ್ಷಗಳ ಕಾಲ ಕತ್ತಲಲ್ಲಿಟ್ಟಿದ್ದು ಐತಿಹಾಸಿಕ ದ್ರೋಹ ಎಂದ ಅವರು ಉಳುವವನೇ ಒಡೆಯ ಎಂಬ ಕಾನೂನನ್ನು ತಂದು ಹಿಂದುಳಿದವರ ಉನ್ನತಿಗೆ ಕಾರಣರಾದ ಡಿ.ದೇವರಾಜ್ ಅರಸು ಅವರನ್ನೇ ಪಕ್ಷದಿಂದ ಹೊರಗೆ ಹಾಕಿದ್ದು ಯಾಕೆ ಎಂದು ಹರಿಹಾಯ್ದರು.
ಈಗಾಗಲೇ 160 ಕೋಟಿ ರೂ. ವೆಚ್ಚದ ಕಾಂತರಾಜ ವರದಿಯನ್ನು ಹಾಳು ಮಾಡಿದ್ದಾರೆ. ಈಗ 450 ಕೋಟಿ ರೂ.ನ ಜಾತಿ ಸಮೀಕ್ಷೆಗೂ ಎಳ್ಳು ನೀರು ಬಿಡುತ್ತಾರೆ. ಹಬ್ಬದ ದಿನದಂದೂ ಶಿಕ್ಷಕರಿಗೆ ಬಿಡುವು ಕೊಡದೆ ದುಡಿಸಿಕೊಂಡಿದ್ದು ಖಂಡನೀಯ ಎಂದರು.
ಟವರ್ ಸಮಸ್ಯೆ ಬಗ್ಗೆ ಮೋದಿ ಸರ್ಕಾರ ಸುಮ್ಮನೆ ಕೂತಿಲ್ಲ. ಶಿವಮೊಗ್ಗ ಜಿಲ್ಲೆಗೆ ನೆಟ್‍ವರ್ಕ್ ಸಮಸ್ಯೆ ಇದ್ದಕಡೆ ನೂತನವಾಗಿ 90 ಟವರ್‍ಗಳನ್ನು ಈಗಾಗಲೇ ನೀಡಲಾಗಿದೆ ಮತ್ತು ಅವು ಕಾರ್ಯಾಚರಣೆ ಶುರುಮಾಡಿದೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಡಿ.ಎಸ್.ಅರುಣ್, ಡಾ.ಧನಂಜಯ ಸರ್ಜಿ, ಪಕ್ಷದ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ಪ್ರಮುಖರಾದ ಕೆ.ಜಿ.ಕುಮಾರಸ್ವಾಮಿ, ಚಂದ್ರಶೇಖರ, ರಾಜು ತಲ್ಲೂರ್, ವಿರೂಪಾಕ್ಷಪ್ಪ, ಮಂಗೋಟೆ ರುದ್ರೇಶ್ ಮೊದಲಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post