ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸರ್ಕಾರದ ವಿವಿಧ ಇಲಾಖೆಗಳಲ್ಲಿನ ಆರ್ಥಿಕ ವ್ಯವಹಾರದ ಮೇಲ್ವಿಚಾರಣೆ, ಮೌಲ್ಯಮಾಪನ ಮತ್ತು ವಿಶ್ಲೇಷಣೆಗಾಗಿ ಸಮಗ್ರ ಸಾಧನಗಳನ್ನು ಹೊಂದಿರುವ ಖಜಾನೆ ತಂತ್ರಾಂಶ ಹಣಕಾಸು ನಿರ್ವಹಣೆಯನ್ನು ಸುಗಮಗೊಳಿಸಲಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್. ಮೋಹನ್ ಕುಮಾರ್ ಹೇಳಿದರು.
ಅವರು ಇಂದು ಖಜಾನೆ ಇಲಾಖೆ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಸಂಯುಕ್ತಾಶ್ರಯದಲ್ಲಿ ನಗರದ ನೌಕರರ ಸಂಘದ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಆದಾಯ ತೆರಿಗೆ, ಟಿಡಿಎಸ್, ಜಿ.ಎಸ್.ಟಿ., ಮತ್ತು ಖಜಾನೆ-2 ಎನ್.ಪಿ.ಎಸ್.ವಿಷಯಗಳ ಕುರಿತು ಸರ್ಕಾರದ ಎಲ್ಲಾ ಇಲಾಖೆಯ ಅಧಿಕಾರೇತರ ಸಿಬ್ಬಂಧಿಗಳಿಗಾಗಿ ಏರ್ಪಡಿಸಲಾಗಿದ್ದ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಈ ಅತ್ಯಾಧುನಿಕ ಸಾಫ್ಟ್‌ವೇರ್ ಹಣಕಾಸು ಬಳಕೆಯ ನಿಯಮಗಳನ್ನು ಖಚಿತಪಡಿಸಿಕೊಳ್ಳಲು ಪೂರಕವಾಗಿರಲಿದೆ ಅಲ್ಲದೆ, ಕಚೇರಿಯ ದಿನನಿತ್ಯದ ಕಾರ್ಯಗಳನ್ನು ಸ್ವಯಂಚಾಲಿತಗೊಳಿಸುವುದರಿಂದ ಹಿಡಿದು ನೈಜ-ಸಮಯದ ಒಳನೋಟಗಳನ್ನು ಒದಗಿಸುವವರೆಗೆ, ಖಜಾನೆ ಸಾಫ್ಟ್‌ವೇರ್ ಸಹಕಾರಿಯಾಗಿದೆ. ಡೇಟಾ ಸಂಗ್ರಹಣೆ ಮತ್ತು ವರದಿ ಮಾಡುವಿಕೆಯಂತಹ ಸಂಕೀರ್ಣ ಕಾರ್ಯಗಳನ್ನು ಸ್ವಯಂಚಾಲಿತಗೊಳಿಸುತ್ತದೆ. ಆರ್ಥಿಕವಾಗಿರುವ ಎಲ್ಲಾ ಚಟುವಟಿಕೆಗಳನ್ನು ನಿರ್ವಹಿಸುವ ಅತ್ಯಾಧುನಿಕ ವ್ಯವಸ್ಥೆಯಾಗಿ ರೂಪುಗೊಂಡಿದೆ ಎಂದರು.
ಸರ್ಕಾರಕ್ಕೆ ಬರುವ ಜಮಾ-ಖರ್ಚುಗಳನ್ನು ಶೀರ್ಷಿಕೆಯನುಸಾರ ಲೆಕ್ಕ ಮಾಡುವುದು. ಸರ್ಕಾರದಿಂದ ಪಾವತಿಗಳನ್ನು ಮೌಲ್ಯಾಂಶ ರೀತ್ಯಾ ಪರಿಶೀಲಿಸಿ ತೀರ್ಣಗೊಳಿಸುವುದು ಖಜಾನೆ ಇಲಾಖೆಯ ಪ್ರಮುಖ ಕಾರ್ಯವಾಗಿದೆ. ಖಜಾನೆ-2 ತಂತ್ರಾಂಶದ ಬಳಕೆಯ ಕುರಿತು ವಿವಿಧ ಇಲಾಖೆಯ ಅಧಿಕಾರೇತರ ಸಿಬ್ಬಂಧಿಗಳಿಗೆ ಎದುರಾಗಬಹುದಾದ ಅನೇಕ ಸಮಸ್ಯೆ-ಸವಾಲುಗಳಿಗೆ ತರಬೇತಿ ಕಾರ್ಯಾಗಾರ ಉತ್ತಮ ವೇದಿಕೆಯಾಗಿದೆ ಅಲ್ಲದೇ ತಕ್ಷಣದ ಪರಿಹಾರ ಕ್ರಮವಾಗಿದೆ. ಈ ತಂತ್ರಜ್ಞಾನವನ್ನು ಅರಿತು, ಅಳವಡಿಸಿಕೊಂಡು ಕಾರ್ಯನಿರ್ವಹಿಸುವುದರಿಂದ ಸರಳವಾಗಿ, ಸುಲಭವಾಗಿ ನಿಶ್ಚಿಂತೆಯಿಂದ ಅಧಿಕಾರಿ-ಸಿಬ್ಬಂಧಿಗಳು ಕೆಲಸ ಮಾಡಬಹುದಾಗಿದೆ ಎಂದ ಅವರು, ಕಾಲಕಾಲಕ್ಕೆ ವಿಷಯ ನಿರ್ವಾಹಕರಿಗೆ ಎದುರಾಗುವ ಸಮಸ್ಯೆಗಳಿಗೆ ತಜ್ಞರಿಂದ ಮೊಬೈಲ್‌ಸಂದೇಶದ ಮೂಲಕವೂ ಮಾಹಿತಿ ಪಡೆದು ನಿರ್ವಹಿಸಬಹುದಾಗಿದೆ ಎಂದರು.
ಇತ್ತೀಚೆಗೆ ರಾಜ್ಯ ಸರ್ಕಾರವು ನೌಕರರ ಮತ್ತು ಅವರ ಅವಲಂಬಿತ ಕುಟುಂಬದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು, ನೌಕರರ ಸಂಘದ ಕೋರಿಕೆಯ ಮೇರೆಗೆ ರೂಪಿಸಿ ಅನುಷ್ಠಾನಗೊಳಿಸಿರುವ ಆರೋಗ್ಯ ಸಂಜೀವಿನಿ ಯೋಜನೆಯ ಅನುಷ್ಠಾನದಲ್ಲಿ ಕೆಲವು ಅಡತಡೆಗಳಿರುವುದನ್ನು ಗಮನಿಸಲಾಗಿದೆ. ಆರಂಭದ ಹಂತ ಇದಾಗಿರುವುದರಿಂದ ಅಲ್ಪಮಟ್ಟಿನ ಅಡಚಣೆ ಎದುರಾಗಿದ್ದು, ಅದಕ್ಕಾಗಿ ವಿಷಾಧಿಸುತ್ತೇವೆ. ಆದರೆ, ಪೂರ್ಣಪ್ರಮಾಣದಲ್ಲಿ ಯೋಜನೆ ಅನುಷ್ಠಾನದ ನಂತರ ದೇಶದ ಉತ್ತಮ ಯೋಜನೆಗಳಲ್ಲೊಂದಾಗಿ ಹೊರಹೊಮ್ಮಲಿದೆ ಅಲ್ಲದೇ ಇದೊಂದು ನೌಕರಸ್ನೇಹಿ ಯೋಜನೆಯಾಗಿರಲಿದೆ ಎಂದವರು ನುಡಿದರು.
ಕಾರ್ಯಾಗಾರದಲ್ಲಿ ಪ್ರಾಸ್ತಾವಿಕವಾಗಿ ಜಿಲ್ಲಾ ಖಜಾನೆ ಇಲಾಖೆಯ ಉಪನಿರ್ದೇಶಕಿ ಶ್ರೀಮತಿ ಹೆಚ್.ಎಸ್.ಸಾವಿತ್ರಿ ಅವರು ಮಾತನಾಡಿ, ವಿಷಯ ನಿರ್ವಾಹಕರು ತಮ್ಮ ಕಾರ್ಯಕ್ಷೇತ್ರದಲ್ಲಿ ಖಜಾನೆ-2 ತಂತ್ರಾಂಶದ ಕುರಿತು ಎದುರಾಗುವ ಸಮಸ್ಯೆಗಳಿಗೆ ಡಿಸೆಂಬರ್‌ಮಾಸಾಂತ್ಯದೊಳಗಾಗಿ ತಜ್ಞರಿಂದ ಮಾಹಿತಿ ಪಡೆದು, ಪರಿಹಾರ ಕಂಡುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿದೆ ಅನುಷ್ಠಾನಕ್ಕೆ ತರಲಾಗುವುದು ಎಂದರು.
ನೌಕರರು ಖಜಾನೆ-2 ತಂತ್ರಾಂಶವನ್ನು ಬಳಸುವಲ್ಲಿ ಸರ್ಕಾರವು ಹೊರಡಿಸಿರುವ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಅನುಸರಿಸುವಂತೆ ಸೂಚಿಸಿದ ಅವರು, ನೌಕರರ ವೇತನದಲ್ಲಿನ ಕಟಾವಣೆ, ತೆರಿಗೆ ಮುಂತಾದ ಪಾವತಿಗಳಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವುದು ಕಂಡಬರುತ್ತಿದೆ. ಇವೆಲ್ಲವೂಗಳಿಗೆ ತರಬೇತಿ ಕಾರ್ಯಾಗಾರದಲ್ಲಿ ಪರಿಹಾರ ದೊರೆಯಲಿದೆ ಎಂದರು.
ತರಬೇತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ದಾವಣಗೆರೆಯ ಆದಾಯ ತೆರಿಗೆ ಅಧಿಕಾರಿ ಸುಬ್ಬರಾಜು ಎಸ್., ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ಚೇತನ್‌ಎ.ಬಿ., ಜಿ.ಎಸ್.ಟಿ. ಟಿಡಿಎಸ್ ಸಮಾಲೋಚಕ ಪುರುಷೋತ್ತಮ್‌ಮತ್ತು ಖಜಾನೆಯ ಸಹಾಯಕ ನಿರ್ದೇಶಕಿ ಅನಿತಾ ಕೆ.ಎಂ. ಅವರು ಆಗಮಿಸಿ, ವಿಷಯ ಮಂಡನೆ ಮಾಡಿದರು.
ಕಾರ್ಯಾಗಾರದಲ್ಲಿ ಉಪವಿಭಾಗಾಧಿಕಾರಿ ಸತ್ಯನಾರಾಯಣ್, ಸಂಘದ ಕಾರ್ಯದರ್ಶಿ ಆರ್.ಪಾಪಣ್ಣ, ಎಂ.ಎನ್.ರಂಗನಾಥ್, ಡಾ.ಸಿ.ಎ.ಹಿರೇಮಠ್, ಸಿದ್ಧಬಸಪ್ಪ ಮತ್ತಿತರರು ಉಪಸ್ಥಿತರಿದ್ದರು. ಸತ್ಯಭೋದ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಸಹಾಯಕ ಖಜಾನಾಧಿಕಾರಿ ಶ್ರೀಮತಿ ದಾಕ್ಷಾಯಣಿ ಅವರು ಸ್ವಾಗತಿಸಿ, ಜ್ಯೋತಿ ಲಕ್ಷ್ಮೀ ವಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post