ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಯಾರು ಏನೇ ಹೇಳಿದರೂ, ನಮಗೆ ಎಷ್ಟೇ ಮಮಕಾರ ಇದ್ದರೂ ಅವೆಲ್ಲವೂ ಒಂದು ಕಡೆ. ಆದರೆ ನಮಗೆ, ನಮ್ಮ ಅಂತರಂಗಕ್ಕೆ ನಮ್ಮ ‘ಮಕ್ಕಳು ಬೆಸ್ಟ್’ ಎನಿಸಬೇಕು. ಆ ಮಟ್ಟಿಗೆ ಬೆಳೆಯಬೇಕು ಎಂದರೆ ಅವೆಲ್ಲವೂ ಒಂದು ದಿನಕ್ಕೆ ಆಗುವುದಲ್ಲ. ದಶಕಗಳ ಮೈಲಿಗಲ್ಲು ಬೇಕು. ಸಾಧನೆ ಮಾಡುವ ಕೆಚ್ಚು ಬೇಕು. ಮನೆ- ಮನದ ವಾತಾವರಣವೂ ಬೆಂಬಲಿಸಬೇಕು. ಎಲ್ಲದಕ್ಕೂ ಮೀರಿ ಗುರುವಿನ ಅನಂತ ಕೃಪೆ ಬೇಕು- ಹೀಗೆ ಸಂಭ್ರಮದಿಂದ ಮಾತನಾಡುವಾಗ ಕವಿತಾ ಅವರ ಭಾವದಲ್ಲಿ ಒಂದು ಅನನ್ಯವಾದ ‘ಗುರುಭಕ್ತಿ’ ಇತ್ತು. ಕಲಾ ರಂಗದ ಬಗ್ಗೆ ಉತ್ಕಟವಾದ ಗೌರವವಿತ್ತು. ಅವೆಲ್ಲವೂ ಮಗಳಿಗೆ ಇನ್ನಷ್ಟು- ಮತ್ತಷ್ಟು ಒಲಿದು ಬರಲಿ ಎಂಬ ಪ್ರಾರ್ಥನೆ ಇತ್ತು.
ಹೌದು… ಸಂಗೀತ, ಸಂಸ್ಕೃತಿ, ಸಂಸ್ಕಾರ ಮತ್ತು ಗುರು- ಹಿರಿಯರ ಮೇಲಿನ ಗೌರವಗಳು ಒಂದು ಮನೆಯಲ್ಲಿ ದೊರಕುವುದು ಒಂದು ಸುಕೃತವೇ ಸರಿ. ಅವೆಲ್ಲವನ್ನೂ ಧಾರೆ ಧಾರೆಯಾಗಿ ಪಡೆದಿರುವ, ಪಡೆಯುತ್ತಿರುವ ಯುವ ಕಲಾವಿದೆ ರಾಧಾ ಶ್ರೀವತ್ಸ ಇದೀಗ ಭರತನಾಟ್ಯ ರಂಗ ಪ್ರವೇಶಕ್ಕೆ (ಅಕ್ಟೋಬರ್ 25) ಅಣಿಯಾಗಿದ್ದಾಳೆ.
ಈ ಸಂದರ್ಭ ಅಂತರಾಳದ ಭಾವನೆ ಹಂಚಿಕೊಂಡ ಕವಿತಾ (ರಾಧಾ ಅವರ ತಾಯಿ) ಮಗಳ ಬಗೆಗಿನ ಕನಸು, ಕಲ್ಪನೆಗಳನ್ನು ಹರವಿ ಇಡುವಾಗ ಅದೇನೋ ಭಾವುಕತೆ ಅವರಲ್ಲಿ ಮೈದುಂಬಿತ್ತು. ಯಾವುದೂ ನಮ್ಮದಲ್ಲ. ಕೇವಲ ಉತ್ತೇಜನ ಮಾತ್ರ. ಉಳಿದ ಎಲ್ಲವೂ ಆಕೆಗೆ ಗುರುವಿನ ಕೃಪೆಯಿಂದಲೇ ಬಂದ ನಾಟ್ಯ ವಿದ್ಯೆ ಎಂದು ವಿದುಷಿ ಸುಪರ್ಣಾ ವೆಂಕಟೇಶ ಅವರನ್ನು ಗೌರವಪೂರ್ವಕ ನುಡಿಗಳಿಂದಲೇ ನೆನಪಿಸಿಕೊಂಡರು.

ಕಲಾವಿದೆ ಪರಿಚಯ
ದ್ವಿತೀಯ ಪಿಯು ಅಧ್ಯಯನ ಮಾಡುತ್ತಿರುವ ರಾಧಾ, ಈಗಾಗಲೇ ಸಾಯಿ ಆರ್ಟ್ಸ್ ಸಂಸ್ಥೆಯ ಹತ್ತು, ಹಲವು ಕಾರ್ಯಕ್ರಮದಲ್ಲಿ ತನ್ನ ಹೆಜ್ಜೆ ಗುರುತು ಮೂಡಿಸಿದ ಯುವ ಕಲಾವಿದೆ. ನರ್ತನದಲ್ಲಿ ನವ ನವೀನ ತಂತ್ರಗಳನ್ನು ಕಲಿಯುವಲ್ಲಿ ಅದಮ್ಯ ಆಸಕ್ತಿ. ಹಾಗಾಗಿ ಮುದ್ರಾ, ತಾಳ, ಲಯ ಮತ್ತು ಅಭಿನಯಕ್ಕೆ ಈಕೆಯ ಪ್ರಧಾನ ಆದ್ಯತೆ ಇದೆ. ವಿದುಷಿ ಹರ್ಷಿತಾ ವಿದ್ಯಾ ಅವರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನೂ ಕಲಿಯುತ್ತಿರುವುದು ಈಕೆಯ ಇನ್ನೊಂದು ಹೆಗ್ಗಳಿಕೆ.
ವೇದಿಕೆ ಕಲಾವಿದೆಯಾಗಬೇಕು
ನೃತ್ಯದಲ್ಲಿ ವಿದ್ವತ್ ಮಾಡುವುದರೊಂದಿಗೆ ಬಿಇ. ವ್ಯಾಸಂಗ ಮಾಡಬೇಕು. ಜೀವನಕ್ಕೆ ಭದ್ರವಾದ ಒಂದು ವೃತ್ತಿ ಬೇಕು. ಡಾನ್ಸ್ ಹವ್ಯಾಸವಾಗಿ ಇಟ್ಟುಕೊಳ್ಳುತ್ತೇನೆ. ನಾನು ಉತ್ತಮವಾದ ‘ ವೇದಿಕೆ ಕಲಾವಿದೆ’ ಆಗಬೇಕು ಎಂಬ ಕನಸು ಇದೆ ಎನ್ನುವುದು ರಾಧಾಳ ಅಭಿಪ್ರಾಯ. ಇದಕ್ಕೆ ಇಡೀ ಕುಟುಂಬದ ಬೆಂಬಲವಿದೆ.

ನಾಡಿನ ಪ್ರಖ್ಯಾತ ಭರತನಾಟ್ಯ ವಿದುಷಿ ಡಾ. ಸುಪರ್ಣಾ ವೆಂಕಟೇಶ ಅವರ ಶಿಷ್ಯೆ ರಾಧಾ ಶ್ರೀವತ್ಸ ಅವರ ರಂಗ ಪ್ರವೇಶ ಕಾರ್ಯಕ್ರಮ ಅ . 25ರಂದು ರಾಜಧಾನಿ ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ನೆರವೇರಲಿದೆ.
ಮುಖ್ಯ ಅತಿಥಿಗಳಾಗಿ ಹಿರಿಯ ಕಲಾವಿದೆ ಕಲಾಮಂಡಲಮ್ ಉಷಾ ದಾತಾರ್, ಚಿತ್ರನಟಿ ಮಾಳವಿಕಾ ಅವಿನಾಶ್, ನಟ ನೆ.ಲ. ನರೇಂದ್ರ ಬಾಬು ಆಗಮಿಸಲಿದ್ದಾರೆ. ತಾಂತ್ರಿಕ ನಿರ್ದೇಶಕ ಸಾಯಿ ವೆಂಕಟೇಶ್, ಪಾಲಕರಾದ ಶ್ರೀವತ್ಸ ಮತ್ತು ಕವಿತಾ ಹಾಜರಿರಲಿದ್ದಾರೆ.
ನಟವಾಂಗದಲ್ಲಿ ಗುರು ಸುಪರ್ಣಾ, ಗಾಯನದಲ್ಲಿ ರೋಹಿತ್ ಭಟ್, ಮೃದಂಗದಲ್ಲಿ ಗುರುಮೂರ್ತಿ, ಕೊಳಲಿನಲ್ಲಿ ನಿತೀಶ್ ಅಮ್ಮಣ್ಣಾಯ, ವೀಣೆಯಲ್ಲಿ ಗೋಪಾಲ್ ಮತ್ತು ರಿದಂ ಪ್ಯಾಡ್’ನಲ್ಲಿ ಪವನ್ ದತ್ತ ಹಿಮ್ಮೇಳ ಸಹಕಾರ ನೀಡಲಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post