ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ದೆಹಲಿ ಬಾಂಬ್‍ಬ್ಲಾಸ್ಟ್ #Delhi Bomb Blast ಉಗ್ರರ ದಾಳಿಯಾಗಿದ್ದು ಇದನ್ನು ದೇಶದ ಜನ ಬಲವಾಗಿ ಖಂಡಿಸಿದ್ದು, ಈಗಾಗಲೇ ಕೇಂದ್ರ ಸರ್ಕಾರ ಉಗ್ರರ ದಮನಕ್ಕೆ ಅನೇಕ ಕ್ರಮ ಕೈಗೊಂಡಿದೆ. ಆದರೆ ಇಂತಹ ಸಂದಿಗ್ಧ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರ ಹೇಳಿಕೆಗಳು ಅತ್ಯಂತ ದುರಂತ ಸಂಗತಿಯಾಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ #B Y Vijayendra ಹೇಳಿದ್ದಾರೆ.
ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಮಾಹಿತಿ ಪ್ರಕಾರ ಸಂಸತ್ ಭವನ, ಬಿಜೆಪಿ ಕೇಂದ್ರ ಕಛೇರಿ, ಸೇನಾ ಭವನ, ವಾಯುಪಡೆ ಕಛೇರಿ ಮುಂತಾದ ಪ್ರಮುಖ ಸ್ಥಳಗಳು ಉಗ್ರರ ಹಿಟ್‍ಲಿಸ್ಟ್‍ನಲ್ಲಿತ್ತು ಎಂಬುದು ವರದಿಯಾಗಿದೆ. ಈ ಸಂದರ್ಭದಲ್ಲಿ ದೇಶದ ಎಲ್ಲಾ ರಾಜಕೀಯ ಪಕ್ಷಗಳು ಒಟ್ಟಾಗಿ ಮಾತನಾಡಬೇಕಾಗುತ್ತದೆ. ನಾವೆಲ್ಲರೂ ಭಾರತೀಯರು ಎಂದು ಒಗ್ಗಟ್ಟು ಪ್ರದರ್ಶನ ಮಾಡಬೇಕಿತ್ತು. ಉಗ್ರರ ಕೃತ್ಯವನ್ನು ಖಂಡಿಸಬೇಕಿತ್ತು. ಆದರೆ ದುರಂತವೆಂದರೆ ವಿಪಕ್ಷ ನಾಯಕ ರಾಹುಲ್‍ಗಾಂಧಿಯವರು ಈ ಘಟನೆ ಬಗ್ಗೆ ಒಂದೇ ಒಂದು ಪ್ರತಿಕ್ರಿಯೆ ನೀಡಿಲ್ಲ. ಬದಲಾಗಿ ಕಾಂಗ್ರೆಸ್ ಪಕ್ಷದ ಕೆಲವು ಹಿರಿಯ ನಾಯಕರು ಮನಬಂದಂತೆ ಮಾತನಾಡುತ್ತಿದ್ದಾರೆ. ಬಿಹಾರ್ ಚುನಾವಣೆಗೂ ಲಿಂಕ್ ಮಾಡುತ್ತಿದ್ದಾರೆ. ಕಾಂಗ್ರೆಸ್ ಮುಖಂಡರ ಈ ಹೇಳಿಕೆಗಳು ಮೂರ್ಖತನದ ಪರಮಾವಧಿಯಾಗಿದ್ದು, ದೇಶದ್ರೋಹದ ಹೇಳಿಕೆಯಾಗಿದೆ ಎಂದರು.

ಸರ್ಕಾರಕ್ಕೆ ರೈತರ ಬಗ್ಗೆ ಕಿಂಚಿತ್ತೂ ಕರುಣೆ ಇಲ್ಲ, ಕಬ್ಬು ಬೆಳೆಗಾರರು ಸಂಕಷ್ಟದಲ್ಲಿದ್ದು ವಾರದಿಂದ ಧರಣಿ ಮಾಡಿದರೂ ಜಿಲ್ಲಾ ಉಸ್ತುವಾರಿ ಸಚಿವರಾಗಲಿ, ಸಕ್ಕರೆ ಸಚಿವರಾಗಲೀ ಸರ್ಕಾರದ ಯಾವೊಬ್ಬ ಸಚಿವರೂ ಸ್ಥಳಕ್ಕೆ ಹೋಗಿರಲಿಲ್ಲ ನಾನು ಒಂದು ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷನಾಗಿ ವಿರೋಧಪಕ್ಷದವನಾಗಿ ರೈತರ ಹಿತಕಾಪಾಡಲು ಅಹೋರಾತ್ರಿ ಧರಣಿಯಲ್ಲಿ ಭಾಗವಹಿಸಿದ್ದೆ. ಆಗ ಸರ್ಕಾರ ಎಚ್ಚೆತ್ತುಕೊಂಡಿದೆ. ಮುಖ್ಯಮಂತ್ರಿಗಳು ಹುಟ್ಟುಹಬ್ಬ ಆಚರಿಸಲು ವಿಜಯೇಂದ್ರ ಅಲ್ಲಿಗೆ ಹೋಗಬೇಕಿತ್ತಾ ? ಎಂದು ಬಾಲಿಷ ಹೇಳಿಕೆ ನೀಡಿದ್ದಾರೆ. ಸರ್ಕಾರ ರೈತರಪರ ಏನೂ ಮಾಡದೆ ಅವರನ್ನು ಕರೆದು ಚರ್ಚಿಸದೆ ಇದ್ದಾಗ ನಾನು ಹೋದರೆ ಏನು ತಪ್ಪು ? ನಿಮ್ಮ ಒಳಜಗಳ ಬಿಟ್ಟು ರೈತರ ಸಂಕಷ್ಟ ಬಗೆಹರಿಸಿ. ಇನ್ನೂ ರಾಜ್ಯದಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭವಾಗಿಲ್ಲ. ಕಂದಾಯ ಸಚಿವರು ಹೇಳಿಕೆ ನೀಡಿ 35 ದಿನವಾದರೂ ಯಾವುದೇ ರೈತನಿಗೆ ಅತಿವೃಷ್ಟಿ ಪರಿಹಾರ ಸಿಕ್ಕಿಲ್ಲ. ರೈತರ ಬಗ್ಗೆ ನಿರಾಸಕ್ತಿ ಒಳ್ಳೆಯದಲ್ಲ. ರೈತರು ವಿಕೋಪ ನಿಮ್ಮ ಸರ್ಕಾರವನ್ನು ಕೆಡಹುತ್ತದೆ ಎಂದರು.

ಸರ್ಕಾರಕ್ಕೆ ರಸ್ತೆ ಗುಂಡಿ ಮುಚ್ಚುವ ಯೋಗ್ಯತೆ ಇಲ್ಲ. ವಿಪಕ್ಷಗಳ ಹೋರಾಟದ ಫಲವಾಗಿ ಕೇವಲ ಬೆಂಗಳೂರಿಗೆ ಮಾತ್ರ 3000 ಕೋಟಿ ರೂ. ಬಿಡುಗಡೆ ಮಾಡಿದ್ದರೆ. ಬರಬಂದಾಗ, ನೆರೆಬಂದಾಗ, ಕಬ್ಬಿನ ಸಮಸ್ಯೆ ಬಂದಾಗ, ಎಲ್ಲದ್ದಕ್ಕೂ ಕೇಂದ್ರದ ಕಡೆ ಬೆಟ್ಟು ತೋರಿಸುತ್ತಾರೆ. ಹಾಗಾದರೆ ನಿಮ್ಮ ಕರ್ತವ್ಯವೇನು ಎಂದು ಪ್ರಶ್ನಿಸಿದರು.

ಸರ್ಕಾರ ಅಭಿವೃದ್ಧಿ ಶೂನ್ಯವಾಗಿದೆ. ಬಿಹಾರ್ ಚುನಾವಣೋತ್ತರ ಸಮೀಕ್ಷೆಯಂತೆ ಎನ್‍ಡಿಎ ಸರ್ಕಾರ ಅಲ್ಲಿ ಅಧಿಕಾರಕ್ಕೆ ಬರಲಿದೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಡಿ.ಎಸ್. ಅರುಣ್, ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್, ಮಾಜಿ ಅಧ್ಯಕ್ಷ ಟಿ.ಡಿ. ಮೇಘರಾಜ್, ಕೆ.ವಿ. ಅಣ್ಣಪ್ಪ, ರಾಜೇಶ್ ಕಾಮತ್ ಮತ್ತಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post