ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂದು ಹೇಳಿ ಬುರುಡೆ ಕಥೆ ಸೃಷ್ಠಿಸಿ, ನಂತರ ಬಂಧನಕ್ಕೆ ಒಳಗಾಗಿದ್ದ ಮಾಸ್ಕ್ ಮ್ಯಾನ್ ಚಿನ್ನಯ್ಯ ಇಂದು ಶಿವಮೊಗ್ಗ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಿದ್ದಾನೆ.
ಚಿನ್ನಯ್ಯನಿಗೆ ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ನ.24ರಂದು ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಜಾಮೀನು ಪಡೆಯಲು 1 ಲಕ್ಷ ಭದ್ರತಾ ಠೇವಣಿ ನೀಡಬೇಕು ಎಂದು ಷರತ್ತು ವಿಧಿಸಿತ್ತು. ಆದರೆ ಭದ್ರತಾ ಠೇವಣಿ ಮೊತ್ತ ಪಾವತಿಸಲು ವಿಳಂಬವಾದ ಹಿನ್ನೆಲೆಯಲ್ಲಿ ಬಿಡುಗಡೆ ಆಗಿರಲಿಲ್ಲ.
ಮಂಗಳೂರಿನಿಂದ ಬುಧವಾರ ರಾತ್ರಿ ಶಿವಮೊಗ್ಗಕ್ಕೆ ಬಂದಿದ್ದ ಚಿನ್ನಯ್ಯನ ಪತ್ನಿ ಮಲ್ಲಿಕಾ ಹಾಗೂ ಸಹೋದರಿ ಮತ್ತು ಚಿನ್ನಯ್ಯನ ಪರ ವಕೀಲರು ಇಲ್ಲಿನ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಡಾ.ರಂಗನಾಥ್ ಅವರಿಗೆ ಜಾಮೀನು ಪ್ರಕ್ರಿಯೆಯ ದಾಖಲೆಗಳನ್ನು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಬೆಳಿಗ್ಗೆ 8.30ಕ್ಕೆ ಬಿಡುಗಡೆ ಮಾಡಲಾಯಿತು.
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂದು ಆರೋಪಿಸಿ ವ್ಯಕ್ತಿಯೊಬ್ಬ ಪ್ರತ್ಯಕ್ಷವಾಗಿದ್ದ. ಮಾಸ್ಕ್ ಧರಿಸಿ ತನಿಖಾ ತಂಡಕ್ಕೆ ಶವಗಳನ್ನು ಹೂತಿಟ್ಟ ಜಾಗ ತೋರಿಸುತ್ತಿದ್ದ. ಈತ ತಿಳಿಸಿದ ಕಡೆಗಳಲ್ಲಿ ಅವಶೇಷಗಳು ಪತ್ತೆಯಾಗದ ಹಿನ್ನೆಲೆ ಮಾಸ್ಕ್ ಮ್ಯಾನ್ ಅಲಿಯಾಸ್ ಚಿನ್ನಯ್ಯನನ್ನು ಬಂಧಿಸಲಾಗಿತ್ತು. ಬೆಳ್ತಂಗಡಿ ನ್ಯಾಯಾಲಯದಲ್ಲಿ ಈತನ ವಿಚಾರಣೆ ನಡೆಯುತ್ತಿತ್ತು. ಸುರಕ್ಷತೆ ದೃಷ್ಟಿಯಿಂದ ಬುರುಡೆ ಚಿನ್ನಯ್ಯನನ್ನು ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು.
ಬುಧವಾರ ಸಂಜೆಯೇ ಕಾರಾಗೃಹಕ್ಕೆ ಕೋರ್ಟ್ ಆದೇಶ ಬಂದಿತ್ತು. ಇದರಿಂದ ಇಂದು ಬೆಳಗ್ಗೆ ಜೈಲಿನಿಂದ ಚಿನ್ನಯ್ಯ ಬಿಡುಗಡೆ ಆಗಿದ್ದಾನೆ. ಈತ ಪ್ರತಿ ಎರಡು ದಿನಕ್ಕೊಮ್ಮೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಜರಾಗಿ ಸಹಿ ಹಾಕಬೇಕು. ಹಾಗೂ ಮಾಧ್ಯಮಗಳೊಂದಿಗೆ ಮಾತನಾಡಬಾರದು ಎಂದು ಬೆಳ್ತಂಗಡಿ ನ್ಯಾಯಾಲಯವು ಷರತ್ತು ವಿಧಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















