ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಾಜಿ ಪ್ರಧಾನಿ ಡಾ. ಮನಮೋಹನ ಸಿಂಗ್ #Manmohan Singh ಅವಧಿಯಲ್ಲಿ ಜಾರಿಗೆ ತಂದಿದ್ದ ಮನರೆಗಾ ಯೋಜನೆಯನ್ನೇ ಪುನರ್ ಸ್ಥಾಪಿಸಬೇಕು ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ನ ವ್ಯವಸ್ಥಾಪಕ ಟ್ರಸ್ಟೀ ಕಲ್ಲೂರು ಮೇಘರಾಜ್ ಆಗ್ರಹಿಸಿದ್ದಾರೆ.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರದ ಮೋದಿಜಿಯವರ ನೇತೃತ್ವದ ಎನ್‌ಡಿಎ ಸರ್ಕಾರ ಈ ಹಿಂದಿನ ಮನರೇಗಾ (ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ) ಯೋಜನೆಯನ್ನು #Manrega scheme ಕೈಬಿಟ್ಟು ಹೊಸದಾಗಿ ವಿಬಿಜಿ- ಜಿ ರಾಮ್ ಜಿ ಯೋಜನೆಯನ್ನ ತರಲು ಮುಂದಾಗಿದೆ. ಇದು ಮಹಾತ್ಮಾ ಗಾಂಧೀಜಿ ಅವರಿಗೆ ತೋರಿದ ಘೋರ ಅಪರಾಧವಾಗಿದೆ. ಯೋಜನೆಯ ಹೆಸರಿನ ಬದಲಾವಣೆಯಿಂದ ಗೊಂದಲವುಂಟಾಗಿ ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ ಈಗಾಗಲೇ ಕಳೆದ 3 ತಿಂಗಳುಗಳ ಹಿಂದೆ ವಾರ್ಡ್ ಸಭೆ ಮತ್ತು ಗ್ರಾಮಸಭೆಯನ್ನ ನಡೆಸಿ ತಯಾರಾಗಿದ್ದ ಕ್ರಿಯಾ ಯೋಜನೆಯು ಸ್ಥಗಿತಗೊಂಡಿವೆ. ಇದರಿಂದಾಗಿ ಕಳೆದ 3 ತಿಂಗಳುಗಳಿಂದ ಗ್ರಾಮೀಣ ಭಾಗದಲ್ಲಿ ಕೂಲಿ ಕಾರ್ಮಿಕರು ಹಾಗೂ ಸಣ್ಣ ಅತಿಸಣ್ಣ, ಕೃಷಿಕರ ಬದುಕು ದುಸ್ತರವಾಗಿದೆ ಎಂದು ಆರೋಪಿಸಿದರು.
ಈಗ ನರೇಂದ್ರ ಮೋದಿಯವರ #PM Narendra Modi ಸರ್ಕಾರ ಈ ಹಿಂದೆ ಮನರೇಗಾ ಯೋಜನೆಯಲ್ಲಿನ ನೂರು ದಿನಗಳ ಉದ್ಯೋಗ ಖಾತ್ರಿಯನ್ನ 125 ದಿನಗಳಿಗೆ ಹೆಚ್ಚಿಸಿದ್ದನ್ನು ಬಿಟ್ಟರೆ ಬೇರೆನೂ ಮಹತ್ವ ಸುಧಾರಣೆಗಳಿಗಿಲ್ಲ. ಈ ದೇಶಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧೀಜಿಯವರ ಹೆಸರನ್ನೆ ಬದಲಾವಣೆ ಮಾಡಿ ಈ ದೇಶದ 150 ಕೋಟಿ ಜನತೆಗೆ ಕೇಂದ್ರ ಸರ್ಕಾರ ಅವಮಾನ ಮಾಡಿದೆ. ಹಾಗೆಯೇ ಇಂದಿರಾ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಹೀಗೆ ಗಾಂಧಿ ಕುಟುಂಬದ ಮೇಲೆ ಮತ್ತು ಗಾಂಧೀಜಿಯವರ ಹೆಸರಿನ ಮೇಲೆ ಮೋದಿಜೀಯವರಿಗೆ ಈರ್ಷೆ ಹಾಗೂ ದ್ವೇಷ ವಿರುವುದಾದರೆ ದೇಶದಲ್ಲಿನ ಎಲ್ಲೆಡೆ ಗಾಂಧೀಜಿಯವರ ಹೆಸರಿರುವ ಎಲ್ಲದಕ್ಕೂ ಹೆಸರು ಬದಲಾವಣೆ ಮಾಡುವುದು ಸೂಕ್ತ ಎಂದು ವ್ಯಂಗ್ಯವಾಡಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ಜೋಗ ಜಲಪಾತದ ಸಮೀಪದ ಮಹಾತ್ಮ ಗಾಂಧೀಜಿ ವಿದ್ಯುತ್ ಉತ್ಪಾದನಾ ಕೇಂದ್ರ, ಶಿವಮೊಗ್ಗದ ಹೃದಯ ಭಾಗದಲ್ಲಿರುವ ಗಾಂಧಿ ಪಾರ್ಕ್ ಇತ್ಯಾದಿ ಹೆಸರುಗಳನ್ನ ಕೂಡಲೆ ಬದಲಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ಮನರೇಗಾ ಯೋಜನೆಯಲ್ಲಿ ಕುಶಲ ಕೂಲಿ ಕಾರ್ಮಿಕರಿಗೆ ಹಾಗೂ ಆಯೋಜನೆಗಳಿಗೆ ಕೇಂದ್ರ ಸರ್ಕಾರದ ಹಣ 90% ಹಾಗೂ ರಾಜ್ಯ ಸರ್ಕಾರದ ಹಣ 10% ಅನುಪಾತ ಇತ್ತು. ಈಗ ಮೋದಿಯವರ ಸರ್ಕಾರ ತರಲು ಉದ್ದೇಶಿಸಿರುವ ವಿಬಿಜಿ. ರಾಂ ಜಿ ಯೋಜನೆಯಲ್ಲಿ ಕೇಂದ್ರ ಸರ್ಕಾರದ ಪಾಲು 60% ಹಾಗೂ ರಾಜ್ಯ ಸರ್ಕಾರದ ಪಾಲು 40% ಎಂದು ನಿಗಧಿಪಡಿಸಲಾಗಿದೆ. ಸಿದ್ದರಾಮಯ್ಯನವರು ಮೊನ್ನೆ ಮಂಡಿಸಿದ ಈ ವರ್ಷದ ಬಜೆಟ್‌ನಲ್ಲಿ ಕೇಂದ್ರ ಸರ್ಕಾರದ ಹೊಸ ಯೋಜನೆಗಾಗಲೀ ಈ ಹಿಂದಿನ ಯುಪಿಎ ಸರ್ಕಾರದ ಮನರೇಗಾ ಯೋಜನೆಗಾಗಲಿ ಹಣ ಮೀಸಲಿಡದೇ ಈ ಯೋಜನೆಗಳ ಕತ್ತು ಇಸುಕಲಾಗಿದೆ ಎಂದು ಕಿಡಿ ಕಾರಿದರು.
ಆದ್ದರಿಂದ ಕೂಡಲೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಗ ಎದ್ದಿರುವ ಯೋಜನೆಯ ಗೊಂದಲಗಳ ಬಗ್ಗೆ ಸ್ಪಷ್ಟತೆಯನ್ನ ಕಂಡುಕೊಳ್ಳಬೇಕು. ಯಾವುದೇ ಕಾರಣಕ್ಕೂ ಗ್ರಾಮೀಣ ಭಾಗದ ಆ ಕುಶಲ ಕೂಲಿಕಾರ್ಮಿಕರು, ಸಣ್ಣ ಅತಿಸಣ್ಣ ರೈತರು, ಮಹಿಳೆಯರು, ಪಲಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವ್ಯಕ್ತಿಗಳು ಉದ್ಯೋಗಾವಕಾಶಗಳಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಮಸ್ಯೆ ಬಗ್ಗೆ ಕೂಡಲೇ ರಾಷ್ಟ್ರಪತಿಗಳು ಮಧ್ಯೆ ಪ್ರವೇಶ ಮಾಡಿ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದ ಅವರು ಈ ಕುರಿತು ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಪಾಲರಿಗೂ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜನಮೇಜಿ ರಾವ್, ಎಚ್.ಎಂ.ಸಂಗಯ್ಯ, ಮಂಜುನಾಥ್, ಜಿ.ಎಂ.ವಿಜಯಕುಮಾರ್, ಆಲಿಂ ಖಾನ್, ಬಸವರಾಜ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

















