ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಈ ಬಾರಿಯ ಚಳಿ ಸ್ವಲ್ಪ ಹೆಚ್ಚಾಗಿದ್ದಿದರಿಂದ ಮೊಗ್ಗುಗಳು ಅರಳುವುದು ತಡವಾಗುತ್ತಿತ್ತು. ಈಗ ಬೇಸಿಗೆಯ ಆರಂಭವಾಗಿರುವುದರಿಂದ ಮತ್ತೆ ಮೊಗ್ಗು ಅರಳಲಾರಂಭಿಸಿದೆ. ಹಾಗೆಯೇ ನನ್ನ ಲೇಖನಕ್ಕೂ ಬಂದ ಚಳಿಗಾಲ ಕಳೆದು ಮತ್ತೆ ಮೊಗ್ಗುಗಳು ಅರಳಲಾರಾಂಭಿಸಿದೆ. ಈ ಬೇಸಿಗೆಯಲ್ಲೇ ಇವರ ಪರಿಚಯ ಯಾಕೆಂದರೆ ಬಿಸಿಲ ದಾಹ ಇಂಗುವುದು ನೀರಿನ ಸೇವನೆಯಿಂದ ಮಾತ್ರ. ಯಾವುದೇ ರಾಸಾಯನಿಕಗಳನ್ನು ಬಳಸದ ನೀರನ್ನು ನಮಗೆ ನೀಡುತ್ತಿರುವ ಇವರು ಎಲೆ ಮರೆಯ ಕಾಯಿಯಂತೆ ಇರುವವರು. ಯಾವುದೇ ಪ್ರಚಾರ ಹಾಗೂ ಪ್ರಶಂಸೆಗಳ ಮೊರೆ ಹೋಗದೆ ತನ್ನ ಕಾಯಕ ಭಗವಂತನ ಸೇವೆ ಎಂಬಂತೆ ಮಾಡುತ್ತಾ ಬಂದಿರುವ ಶ್ರೀ ಸೀತಾರಾಮ ಎನ್.ಎಸ್. ಇವರು. ಸರಳ ಹಾಗೂ ಸಜ್ಜನಿಕೆಯನ್ನೇ ತನ್ನ ಜೀವನಶೈಲಿಯಾಗಿಸಿ ಪರೋಪಕಾರವೇ ತನ್ನ ಜೀವನ ಧ್ಯೇಯವೆಂದು ಬದುಕುತ್ತಿರುವವರು.
ನಮಗೆಲ್ಲ ಪ್ರೀತಿಯಿಂದ ಸೀತಾರಾಮಣ್ಣ ಆಗಿರುವ ಅವರು ಮೂಲತಃ ಸಾಗರ #Sagara ಸಮೀಪದ ನೀಚಡಿಯವರು. ಶ್ರೀ ಗೌರಿಸುಬ್ಬಯ್ಯ ಹಾಗೂ ಶ್ರೀಮತಿ ನಾಗವೇಣಿ ದಂಪತಿಗಳ ಐದು ಮಕ್ಕಳಲ್ಲಿ ಎರಡನೆಯವರು. ಇವರನ್ನು ತಂದೆ ತಾಯಿಯರು ತುಂಬಾ ಕಷ್ಟದಲ್ಲಿಯೇ ಬೆಳೆಸಿರುವ ಕಾರಣಕ್ಕೋ ಏನೋ ಜೀವನದಲ್ಲಿ ಯಾರಾದರೂ ಕಷ್ಟ ಅಂತ ಬಂದರೆ ಸಹಾಯ ಮಾಡುವ ಮನೋಭಾವ ತುಸು ಹೆಚ್ಚೇ ಇದೆ ಎನ್ನಬಹುದು. ತಾನು ಬೆಳೆದು ಬಂದ ಕಷ್ಟದ ಅರಿವಿರುವುದಕ್ಕೆ ಇತರರನ್ನು ಕಂಡಾಗ ಗೌರವ.
ಸಜ್ಜನಿಕೆಯ ಸ್ವಭಾವದವರಾದ ಇವರು ಸಂಘಜೀವಿ. ಜೀವನ ನಿರ್ವಹಣೆಗಾಗಿ ಉಷಾ ಗೌರಿ ವಾಟರ್ ಸಪ್ಲೈಯರ್ ಎಂಬ ಉದ್ಯೋಗ ಮಾಡುತ್ತಿದ್ದಾರೆ. ಈ ಹಿಂದೆ ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿಯೂ #RSS ತಮ್ಮ ಜವಾಬ್ದಾರಿ ಅಚ್ಚುಕಟ್ಟಾಗಿ ನಿರ್ವಹಿಸಿದವರಾಗಿದ್ದಾರೆ. ಯೋಗದಲ್ಲಿ ಸಾಧನೆ ಮಾಡಿ, ತಮ್ಮ ಮನೆಯ ಮೇಲೆಯೇ ಯೋಗ ಕೇಂದ್ರವನ್ನು ಸ್ಥಾಪಿಸಿ ಅನೇಕರಿಗೆ ಉಚಿತವಾಗಿ ಯೋಗವನ್ನು ಕಲಿಸಿಕೊಡುತ್ತಾ ಬಂದಿದ್ದಾರೆ. ಮುದ್ರೆಗಳ ಕುರಿತಾಗಿ ವಿಶೇಷವಾದ ಅಧ್ಯಯನ ಮಾಡಿ ಇತರರಿಗೂ ಸಹ ಅದನ್ನು ಕಲಿಸಿಕೊಡುತ್ತಿದ್ದಾರೆ. ಯೋಗದ ಮೂಲಕ ಆರೋಗ್ಯ ನೀಡುವುದು ಒಂದೆಡೆಯಾದರೆ, ನಂಜಿಗೆ, ಕೆಮ್ಮಿಗೆ ಇತ್ಯಾದಿಗಳಿಗೆ ಗಿಡಮೂಲಿಕೆಗಳಿಂದ ಸ್ವತಃ ತಾವೇ ಔಷಧಿ ತಯಾರಿಸಿ ಅಗತ್ಯವಿದ್ದವರಿಗೆ ನೀಡುವ ನಾಟಿ ವೈದ್ಯರೂ ಸಹ ಆಗಿದ್ದಾರೆ.
ಇವರಿಗೆ ಬರದ ವಿದ್ಯೆಗಳಿಲ್ಲ ಒಳ್ಳೆಯ ಛಾಯಾಚಿತ್ರಗಾರರು, ವಿಡಿಯೋಗ್ರಫಿ ಕೂಡ ಚೆನ್ನಾಗಿ ಮಾಡ್ತಾ ಇದ್ರು.
ಈ ಮೊದಲು ತೀರ್ಥಹಳ್ಳಿಯಲ್ಲಿ ಜೀವನ ನಿರ್ವಹಣೆಗಾಗಿ ಒಂದು ಸ್ಟುಡಿಯೋ ಇಟ್ಟುಕೊಂಡಿದ್ದ ಸೀತಾರಾಮ್ ಅವರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಆ ಊರನ್ನು ತೊರೆದು ಶಿವಮೊಗ್ಗದಲ್ಲಿ #Shivamogga ನೆಲೆ ನಿಂತರು. ದುರ್ಗಿಗುಡಿಯ ಸಮೀಪದಲ್ಲಿ ಉಡುಗೊರೆ, ಸ್ಮರಣಿಕೆ ಇವುಗಳ ಅಂಗಡಿಯೊಂದನ್ನ ತೆರೆದರು. ಅವರಿಗೆ ಒಬ್ಬ ಮಗಳು ಹಾಗೂ ಒಬ್ಬ ಮಗ. ಮಗನನ್ನು ಸೈನಿಕ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿಸಿ ಈಗ ಅವನು ಉನ್ನತ ಅಧ್ಯಯನ ಮಾಡಿ ದುಬೈನಲ್ಲಿ ನೆಲೆಸಿದ್ದಾನೆ. ತಮ್ಮ ಮಗಳಾದ ಉಷಾ ಗೌರಿಯನ್ನು ವೈದ್ಯಳನ್ನಾಗಿ ಮಾಡುವ ಕನಸಿಟ್ಟು ಓದಿಸುತ್ತಿದ್ದರು. ಆಗ ಅಪಘಾತವೊಂದರಲ್ಲಿ ಆಕೆಯನ್ನು ಕಳೆದುಕೊಳ್ಳ ಬೇಕಾಯಿತು. ಸತ್ತವನಿಂದ ಜೀವಿಗಳಿಗೆ ಏನು ಉಪಯೋಗ?” ಎಂದು 180 ವರ್ಷಗಳ ಹಿಂದೆ ಇಂಗ್ಲಿಷ್ ತತ್ವಜ್ಞ ಜೆರೆಮಿ ಬೆಂಥಮ್ ಕೇಳಿದ್ದ ಪ್ರಶ್ನೆ, ಇಂದಿನ ಅಂಗಾಂಗ ದಾನ ಪದ್ಧತಿಯಲ್ಲಿ ಅದ್ಭುತ ಅರ್ಥ ಪಡೆದುಕೊಂಡಿದೆ.
Also Read: ಗುಡ್ ನ್ಯೂಸ್ | ಹುಬ್ಬಳ್ಳಿ – ರಾಮೇಶ್ವರಂ ನಡುವೆ ವಿಶೇಷ ರೈಲು | ಇಲ್ಲಿದೆ ಡೀಟೇಲ್ಸ್
‘ಕ್ಯಾಡೇವರ್ ಟ್ರಾನ್ಸ್‌ಪ್ಲಾಂಟ್’ #KidneyTransplant ಅಂದರೆ, ಮೆದುಳು ಮರಣ ಹೊಂದಿದ ವ್ಯಕ್ತಿಯ ಅಂಗಾಂಗಗಳನ್ನು ಜೀವಂತ ರೋಗಿಗಳಿಗೆ ಪ್ರತಿರೋಪಣೆ ಮಾಡುವ ವಿಧಾನವು ಇಂದು ಅನೇಕ ಜೀವಗಳನ್ನು ಉಳಿಸುತ್ತಿದೆ. ಆ ರೀತಿಯಲ್ಲಿ ಉಷಾ ಸದಾ ಸಕಾರಾತ್ಮಕ ಚಿಂತನೆ ಹೊಂದಿದವಳಾಗಿದ್ಧಳು. ಅವಳ ಮೆದುಳು ನಿಷ್ಕ್ರಿವಾದ ಸಂದರ್ಭದಲ್ಲೂ ಇತರರಿಗೆ ಸಹಾಯ ಮಾಡಬೇಕೆಂದು ಅವಳು ಬಯಸುತ್ತಿರುವಂತೆ ತಂದೆಗೆ ಭಾಸವಾಗಿ ಆಕೆಯ ಕಿಡ್ನಿಗಳನ್ನು ದಾನ ಮಾಡಲು ಒಪ್ಪಿಗೆ ನೀಡಿ ದಾಖಲೆಯನ್ನೇ ಬರೆದವರು ಸೀತಾರಾಮಣ್ಣ. ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಕಿಡ್ನಿಗಳನ್ನು ತೆಗೆದು ಎರಡನ್ನೂ ಸಹ ಅತೀ ಅಗತ್ಯವಿರುವವರಿಗೆ ದಾನ ಮಾಡಲಾಯಿತು. ಸಾವಿನಲ್ಲೂ ಅವಳ ಅಂಗಾಂಗಗಳಲ್ಲಿ ಯಾವುದು ಬೇರೆಯವರಿಗೆ ಜೀವದಾನ ಮಾಡಲು ಬರುತ್ತದೋ ಎಲ್ಲವನ್ನು ದಾನ ಮಾಡಿ ಕರ್ನಾಟಕದ ಮೊಟ್ಟ ಮೊದಲ ಕೆಡವರ್ ಕಿಡ್ನಿ ದಾನಿ ಎಂಬ ಹೆಸರಿನಿಂದ ಆಕೆಯನ್ನು ಅಜರಾಮರಳಾಗಿಸಿದರು.
ಈ ಮಹಾನ್ ಕಾರ್ಯದ ಗೌರವಕ್ಕಾಗಿ #Manipal ಮಣಿಪಾಲ್ ಆಸ್ಪತ್ರೆಯ ಡಾ. ಸುದರ್ಶನ್ ಬಲ್ಲಾಳ್ ಅವರು ಪ್ರತಿ ತಿಂಗಳೂ “ಉಷಾ ದಿನ” ಎಂದು ಘೋಷಿಸಿ ಆ ದಿನದ ಕಿಡ್ನಿ ಟ್ರಾನ್ಸ್ ಪ್ಲಾಂಟ್ ನ್ನು ಕಡಿಮೆ ವೆಚ್ಚದಲ್ಲಿ ಇಂದಿಗೂ ನಡೆಸಲಾಗುತ್ತಿದೆ. ಅಂದು ಆಕೆಯ ಕಿಡ್ನಿ ದಾನ ಮಾಡಿದುದು ಇಂದು ಅಂಗಾಂಗ ದಾನದ ಗಣನೀಯ ಪ್ರಮಾಣ ಹೆಚ್ಚಿಸಲು ಕಾರಣವಾಯಿತು. ಇಷ್ಟು ಉದಾತ್ತವಾಗಿ ಆಲೋಚಿಸುವ ಹೆತ್ತವರನ್ನು ಪಡೆದ ಆಕೆಯೇ ಧನ್ಯಳು. ಒಂದು ಬಿಡಿಗಾಸೂ ಕೂಡ ಪಡೆಯದೇ ಮಗಳ ಅಂಗಾಂಗಗಳನ್ನು ದಾನ ಮಾಡಿದ್ದರು ಸೀತಾರಾಮಣ್ಣ ದಂಪತಿಗಳು. ಆ ಕಾರಣಕ್ಕಾಗಿ ಕಳೆದ ವರ್ಷ ಅಂತಾರಾಷ್ಟ್ರೀಯ ಮಹಿಳಾ ದಿನದ ಸಂದರ್ಭದಲ್ಲಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಈ ದಂಪತಿಗಳಿಗೆ ಸನ್ಮಾನವನ್ನೂ ಕೂಡ ಮಾಡಿದರು. ಮಗಳನ್ನು ಕಳೆದುಕೊಂಡ ದುಃಖವನ್ನು ಒಡಲೊಳಗೆ ಇಟ್ಟುಕೊಂಡು ಇತರರೆದುರಿಗೆ ಸಂತಸದಿಂದ ಇರುವ ಮಹನೀಯರು ಸೀತಾರಾಮ ಅವರು.
1998 ರ ಫೆಬ್ರವರಿಯಲ್ಲಿ ಈ ಘಟನೆಗಳು ನಡೆದ ಮೇಲೆ ಅವರು ತಮ್ಮ ಜೀವನವನ್ನು ಅಧ್ಯಾತ್ಮಿಕ ಸಾಧನೆ ಮಾಡುವಲ್ಲಿ ಮುಡಿಪಾಗಿಟ್ಟರು. ರುದ್ರವೇ ಮೊದಲಾದ ಮಂತ್ರಗಳನ್ನು ಕಲಿತು ಎಲ್ಲಿಯೇ ರುದ್ರ ಪಾರಾಯಣ ನಡೆಯಲಿ ಅಲ್ಲಿ ತಮ್ಮದೊಂದು ಸೇವೆ ನೀಡುತ್ತಲೇ ಬಂದಿದ್ದಾರೆ. ಮನೆಯಲ್ಲಿ ಸತ್ಸಂಗ ನಡೆಸುತ್ತಾರೆ. ಶ್ರೀ ಶ್ರೀಧರ ಭಗವಾನರ #SridharaSwamiji ಅಪ್ಪಟ ಭಕ್ತಾರಾದ ಅವರು ಶ್ರೀ ಶ್ರೀಧರ ಸೇವಾ ಸಮಿತಿಯ ಶಿವಮೊಗ್ಗ ಮಂಡಲದ ಅಧ್ಯಕ್ಷರೂ ಆಗಿದ್ದಾರೆ. ಪ್ರತಿನಿತ್ಯ ಬೆಳಗಿನ ಜಾವ ಮೂರುವರೆಗಿನ ಬ್ರಾಹ್ಮೀ ಮುಹೂರ್ತ ದಲ್ಲಿ ಎದ್ದು ನಿತ್ಯ ಅನುಷ್ಠಾನಗಳಲ್ಲಿ ತೊಡಗುತ್ತಾರೆ. ಇವರಿಗೆ ಯೋಗ ಶಿಕ್ಷಣ ಸಂಸ್ಥೆಯೇ ಮೊದಲಾಗಿ ಹಲವೆಡೆ ಸನ್ಮಾನವೂ ಸಹ ಆಗಿರುತ್ತದೆ. ಕಷ್ಟವೆಂದವರಿಗೆ ಸಹಾಯ ಹಸ್ತ ನೀಡುವಲ್ಲಿ ಸಿದ್ಧ ಹಸ್ತರಾದ ಇವರನ್ನು ನೋಡಿದರೆ ನನಗೆ ನೆನಪಾಗುವ ಸುಭಾಷಿತ ಇದು –
ಪರೋಪಕಾರಾಯ ಫಲಂತಿ ವೃಕ್ಷಃ
ಪರೋಪಕಾರಾಯ ವಹಂತಿ ನದ್ಯಃ l
ಪರೋಪಕಾರಾಯ ದುಹಂತಿ ಗಾವಃ
ಪರೋಪಕಾರಾರ್ಥಮಿದಂ ಶರೀರಮ್ ll ಅಂದರೆ ಮರಗಳು ಇತರರಿಗಾಗಿಯೇ ಹಣ್ಣುಗಳನ್ನು ಕೊಡುತ್ತದೆ. ಹಾಗೇ ನದಿಗಳು ಸಹ ಇತರಿರಾಗಿಯೇ ಹರಿಯುತ್ತದೆ, ಹಸು ಹಾಲು ಕೊಡುವುದೂ ಸಹ ಪರರಿಗಾಗಿಯೇ ಹಾಗಾಗಿ ಮನುಷ್ಯನ ಶರೀರವೂ ಸಹ ಇತರರ ಉಪಯೋಗಕ್ಕಾಗಿಯೇ ಎಂಬ ಸುಭಾಷಿತದಂತೆ ಸೀತಾರಾಮಣ್ಣನವರ ಬದುಕು ಅರ್ಥಪೂರ್ಣ.
Also Read: ರಸ್ತೆ ಸಂಚಾರ ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸಿ: ಸುರೇಶ್ ಕುಮಾರ್
ಸದಾ ಕ್ರಿಯಾಶೀಲರಾಗಿರುವ ಇವರೆಲ್ಲ ಕಾರ್ಯಗಳಿಗೆ ಇವರ ಸಹಧರ್ಮಣಿಯಾದ ಶ್ರೀಮತಿ ನೇತ್ರಾವತಿ ಅವರ ಬೆಂಬಲವೂ ಸಾಕಷ್ಟಿದೆ. ಇತ್ತೀಚೆಗಷ್ಟೇ ತಮ್ಮ 80 ಸಂವತ್ಸರಗಳನ್ನು ಸಾರ್ಥಕವಾಗಿ ಪೂರೈಸಿದ ನಮ್ಮೆಲ್ಲರ ಪ್ರೀತಿಯ ಸೀತಾರಾಮಣ್ಣನಿಗೆ ಭಗವಂತ ಇನ್ನಷ್ಟು ಆಯುರಾರೋಗ್ಯವನ್ನು ನೀಡಿ ಕರುಣಿಸಲೆಂದು ಪ್ರಾರ್ಥಿಸುವೆ. ಯಾರಿಗೂ ತೊಂದರೆಯನ್ನು ಕೊಡದೆ ಸ್ವಂತಿಕೆಯಲ್ಲಿಯೇ ಬದುಕನ್ನು ಸಾಧಿಸುವ ಸದಾ ಇತರರ ಒಳಿತನ್ನೇ ಆಶಿಸುವ ನಮ್ಮ ಪ್ರೀತಿಯ ಸೀತಾರಾಮಣ್ಣ ಅನೇಕರಿಗೆ ಪ್ರೇರಣೆಯಾಗಲಿ. ಏಕೆಂದರೆ ಅವರ ಬದುಕು, ಕಷ್ಟಕಾಲದಲ್ಲಿಯೂ ಇತರರಿಗೆ ಸಹಾಯ ಮಾಡುವ ಮನೋಭಾವ, ಎಂತಹ ಸಮಯದಲ್ಲಿ ಆಗಲಿ ಮನಸ್ಸನ್ನು ತಮ್ಮ ಸ್ತಿಮಿತದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳುವ ರೀತಿ, ಸರಳತೆಯ ಬದುಕು, ಉತ್ತಮನಾಗು ಉಪಕಾರಿಯಾಗೆಂಬ ಭಾವ, ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುವ ಸಹಾಯ, ಶಾಂತ ಸ್ವರೂಪ ಈ ಎಲ್ಲವೂ ಇಂದಿನ ಪೀಳಿಗೆಗೆ ಬೇಕಾದ ಅತ್ಯುತ್ತಮ ಮಾನವೀಯ ಮೌಲ್ಯಗಳಾಗಿವೆ. ಮಾನವೀಯ ಮೌಲ್ಯಗಳು ಕಣ್ಮರೆಯಾಗುತ್ತಿರುವ ಇಂದಿನ ದಿನಗಳಲ್ಲಿ ಇಂಥವರು ನಮ್ಮ ನಡುವೆಯೇ ಇದ್ದಿರುವುದು ವಿಶೇಷ. ಸಹಸ್ರ ಚಂದ್ರನನ್ನು ಕಂಡ ಸಾರ್ಥಕ ಬದುಕು ಇವರದು. ಇವರ ಬದುಕು ಅನೇಕರಿಗೆ ಮಾರ್ಗದರ್ಶಕವೂ ಆದರ್ಶಪ್ರಾಯವೂ ಆಗಬೇಕು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















