ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಶಿವಮೊಗ್ಗ ಜಿಲೆಯ ಶಂಕರಘಟ್ಟದ ನಮ್ಮ ದೀನಬಂಧು ಸೇವಾ ಟ್ರಸ್ಟ್ ಸಾರ್ಥಕವಾದ 25 ವರ್ಷಗಳನ್ನು ಪೂರೈಸಿರುವ ಹಿನ್ನಲೆಯಲ್ಲಿ ಬೆಳ್ಳಿ ಹಬ್ಬವನ್ನು ಮಾ.31ರ ಸಂಜೆ 4ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಎಂ. ರಮೇಶ್ ಶಂಕರಘಟ್ಟ ಹೇಳಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದ ಋಣವನ್ನು ತೀರಿಸಲು ಅದರಲ್ಲೂ ವಿಶೇಷವಾಗಿ ದೀನ ದಲಿತರ ಮತ್ತು ಸಮಾಜದ ಶೋಷಿತ ವರ್ಗದವರ ಸೇವೆಗಾಗಿ ಕಟಿಬದ್ಧರಾಗಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಶಂಕರಘಟ್ಟದಿಂದ ಪಾದಯಾತ್ರೆ ಮೂಲಕ ತೆರಳಿ, ಧರ್ಮಾಧಿಕಾರಿಗಳಾದ ಶ್ರೀ ಡಾ: ವೀರೇಂದ್ರ ಹೆಗ್ಗಡೆಯವರ ಆಶೀರ್ವಾದದೊಂದಿಗೆ, ದಿನಾಂಕ 2.10.1999 ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನದಂದು ದೀನಬಂಧು ಸೇವಾ ಟ್ರಸ್ಟ್‌ನ್ನು ಸ್ಥಾಪಿಸಲಾಯಿತು ಎಂದು ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಉಡುಪಿಯ ಡಾ.ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕರಾದ ನಾಡೋಜ ಡಾ.ಜಿ. ಶಂಕರ್ ಇವರಿಗೆ ದೀನಬಂಧು ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಈ ಪ್ರಶಸ್ತಿಯು ರೂ.1 ಲಕ್ಷ ಮತ್ತು ಪ್ರಶಸ್ತಿ ಪತ್ರಗಳನ್ನು ಒಳಗೊಂಡಿರುತ್ತದೆ. ಹಾಗೆಯೇ ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ಡಾ.ಬೋಜ್ಯಾನಾಯಕ್ ಹಾಗೂ ಶಿಕ್ಷಣತಜ್ಞರಾದ ಪ್ರೊ.ಜೆ.ಎಲ್. ಪದ್ಮನಾಭ್ ಇವರನ್ನು ಸನ್ಮಾನಿಸಲಾಗುವುದು ಎಂದರು.
ಕಾರ್ಯಕ್ರಮದ ದಿವ್ಯಸಾನ್ನಿಧ್ಯವನ್ನು ಆದಿಚುಂಚನಗಿರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ಡಾ.ನಿರ್ಮಲನಂದನಾಥ ಮಹಾಸ್ವಾಮೀಜಿ, ಸಾಣೇಹಳ್ಳಿಯ ಶ್ರೀ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ಆದಿಚುಂಚನಗಿರಿ ಕ್ಷೇತ್ರದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಬಾರ್ಕೂರು ಮಹಾಸಂಸ್ಥಾನದ ಡಾ.ವಿಶ್ವಸಂತೋಷಭಾರತಿ ಶ್ರೀ ಪಾದಂಗಳು ಹಾಗೂ ಕೊಪ್ಪದ ಗೌರಿಗದ್ದೆಯ ಸ್ವರ್ಣಪೀಠಿಕಾಪುರ ದತ್ತಾಶ್ರಮದ ಅವಧೂತರಾದ ಶ್ರೀ ವಿನಯ್ ಗುರೂಜಿ ವಹಿಸಲ್ಲಿದ್ದಾರೆ. ಉದ್ಘಾಟನೆಯನ್ನು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖಾ ಸಚಿವ ಮಧುಬಂಗಾರಪ್ಪ ನೆರವೇರಿಸಲ್ಲಿದ್ದಾರೆ. ಕಾರ್ಯಕ್ರಮದಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಬಿ.ಕೆ.ಸಂಗಮೇಶ್ವರ್, ಗೋಪಾಲಕೃಷ್ಣ ಬೇಳೂರು, ಎಸ್. ಎನ್. ಚನ್ನಬಸಪ್ಪ, ವಿಧಾನಪರಿಷತ್ ಶಾಸಕರುಗಳಾದ ಡಾ.ಮಂಜುನಾಥ ಭಂಡಾರಿ, ಬಲ್ಕೀಷ್‌ಬಾನು, ಡಾ.ಧನಂಜಯ ಸರ್ಜಿ, ಡಿ.ಎಸ್. ಅರುಣ್, ಆಯನೂರು ಮಂಜುನಾಥ್, ಸುಧಾಕರ ಎಸ್ ಶೆಟ್ಟಿ, ಸಿ.ಎಸ್. ಚಂದ್ರಭೂಪಾಲ್, ಎಸ್. ರುದ್ರೇಗೌಡರು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿ.ಎಸ್.ಷಡಾಕ್ಷರಿಯವರು, ಎಂ.ಶ್ರೀಕಾಂತ್, ಆರ್. ಪ್ರಸನ್ನಕುಮಾರ್, ಹೆಚ್.ಎನ್. ವಿದ್ಯಾದರ್, ಕೆ.ಮರಿಯಪ್ಪ, ಎಸ್. ಓಂಕಾರಪ್ಪ, ಎನ್. ರಮೇಶ್ ಹಾಗೂ ಎಸ್ ಪಿ ದಿನೇಶ್ ಭಾಗವಹಿಸಲ್ಲಿದ್ದಾರೆ ಎಂದರು.
ಕಾರ್ಯಕ್ರಮದ ನಂತರ ಸರಿಗಮಪ ಖ್ಯಾತಿಯ ಕಾರ್ತಿಕ್ ನಾಗಲಪುರ, ಸವಿಶ್ರೀ ಕುಂದಾಪುರ, ಆಮೀಶ್ ಕುಮಾರ್ ಇನ್ನಿತರ ಗಾಯಕ-ಗಾಯಕಿಯರಿಂದ ಗಾನಸಂಜೆ, ರಾಘವೇಂದ್ರ ಆಚಾರ್ಯ ಜನ್ಸಾಲೆ ಅವರಿಂದ ಯಕ್ಷಗಾನ ನೃತ್ಯ ವೈಭವ ಹಾಗೂ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ ಎಂದರು.
ದೀನ ಬಂಧು ಟ್ರಸ್ಟ್ ನಡೆದು ಬಂದ ದಾರಿ
3000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ಶಿಬಿರ, ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಸಮವಸ್ತ್ರ ಹಾಗೂ ಬಡ ವಿದ್ಯಾರ್ಥಿಗಳಿಗೆ ಅಗತ್ಯವಾದ ಸೌಲಭ್ಯ, ವಿದ್ಯಾರ್ಥಿ ವೇತನ, ವಯೋವೃದ್ಧರಿಗೆ ಸಹಾಯ, ನೂರಾರು ಶಾಲೆಗಳಲ್ಲಿ ವನಮಹೋತ್ಸವ ಆಚರಣೆ, ಕುವೆಂಪು ವಿವಿ ಎನ್‌ಎಸ್ ಶಿಬಿರಗಳಿಗೆ ಸಹಾಯ, ಆರೋಗ್ಯ ತಪಾಸಣೆ, ಭೂಕಂಪದಂತಹ ಪ್ರವಾಹ ಸಂದರ್ಭದಲ್ಲಿ ನಿಧಿ ಸಂಗ್ರಹಿಸಿ ಕೊಡುಗೆ, ಶಿಕ್ಷಕರಿಗೆ ಸನ್ಮಾನ.
ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟಿಗಳಾದ ಡಾ. ಶೇಖರ್, ಡಾ. ಹಸೀನಾ, ಜಿ.ಡಿ.ಮಂಜುನಾಥ್, ಯು.ಶಿವಾನಂದ, ಗಿತೇಂದ್ರ ಗೌಡ, ಎಂ.ಎಂ.ಸ್ವಾಮಿ, ಪ್ರಸನ್ನ, ಎಂ.ಸಿದ್ದರಾಮು, ಮಂಜುನಾಥ್ ಹಲವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 









