ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಾಲಾ ಬಸ್ ಡಿಕ್ಕಿ ಹೊಡೆದು ಒಂದೂವರೆ ವರ್ಷದ ಮಗುವೊಂದು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಗರದ ಗೋಪಾಲಗೌಡ ಬಡಾವಣೆಯಲ್ಲಿ ಇಂದು ನಡೆದಿದೆ.
ಮೃತ ಮಗುವನ್ನು ಗೋಪಾಲಗೌಡ ಬಡಾವಣೆಯ ನಿವಾಸಿ ಮಂಜುನಾಥ್ ಎನ್ನುವವರ ಪುತ್ರ ಆರ್ಯನ್(1.5 ವರ್ಷ) ಎಂದು ಗುರುತಿಸಲಾಗಿದೆ.
Also Read: ಶಿವಮೊಗ್ಗದಲ್ಲಿ ಸರಣಿ ಅಪಘಾತ | ಕಾರು-ಬಸ್ ನಡುವೆ ಸಿಲುಕಿದ ಆಟೋ ನಜ್ಜುಗುಜ್ಜು | ಘಟನೆ ನಡೆದಿದ್ದು ಹೇಗೆ?
ಘಟನೆ ಹೇಗಾಯ್ತು?
ಮಂಜುನಾಥ್ ಅವರ ಇನ್ನೊಬ್ಬ ಮಗ ಆರುಷ್ ಎನ್ನುವವನು ನಗರದ ಖಾಸಗಿ ಶಾಲೆಯಲ್ಲಿ ಓದುತ್ತಿದ್ದಾನೆ. ಇಂದು ಮಧ್ಯಾಹ್ನ ಆರುಷ್ ಶಾಲಾ ಬಸ್’ನಲ್ಲಿ ಮನೆಗೆ ವಾಪಸ್ ಬಂದಿದ್ದಾನೆ. ಆರುಷ್’ನನ್ನು ಮನೆಗೆ ಕರೆತರಲು ಮನೆ ಕೆಲಸದ ಮಹಿಳೆ ಬಸ್ಸಿನಿಂದ ಇಳಿಸಿಕೊಳ್ಳಲು ಹೋಗಿದ್ದರು.
ಕೆಲಸದ ಮಹಿಳೆ ಆರುಷ್’ನನ್ನು ಬಸ್’ನಿಂದ ಇಳಿಸಿಕೊಳ್ಳುವ ವೇಳೆ ಆರ್ಯನ್ ಬಸ್ ಮುಂಭಾಗದಲ್ಲಿ ರಸ್ತೆ ದಾಟುತ್ತಿದ್ದನು ಎನ್ನಲಾಗಿದೆ. ಆದರೆ, ಇದನ್ನು ಗಮನಿಸದ ಬಸ್ ಚಾಲಕ ಬಸ್ಸನ್ನು ಚಾಲನೆ ಮಾಡಿದ ಪರಿಣಾಮ ಮಗುವಿಗೆ ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.
ಘಟನೆಯಿಂದ ಮಗುವಿನ ತಲೆ ಹಾಗೂ ಮುಖಕ್ಕೆ ತೀವ್ರ ಪೆಟ್ಟಾಗಿದ್ದು, ತಕ್ಷಣವೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಆಸ್ಪತ್ರೆ ತಲುಪುವ ವೇಳೆಗಾಗಲೇ ಮಗು ಉಸಿರು ಚೆಲ್ಲಿತ್ತು.
ಪಶ್ಚಿಮ ಸಂಚಾರ ಪೊಲೀಸ್ ಠಾಣೆಯಲ್ಲಿ ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















