ಕಲ್ಪ ಮೀಡಿಯಾ ಹೌಸ್ | ಬಿಹಾರ |
ಭಾರತೀಯ ಜನತಾ ಪಕ್ಷದ BJP ನಾಯಕ ಸಾಮ್ರಾಟ್ ಚೌಧರಿ Samrat Chaudhary ಅವರು ಇಂದು ಬಿಹಾರದ 24ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ನಿತೀಶ್ ಕುಮಾರ್ Nitish Kumar ಅವರ ಎರಡು ದಶಕಗಳಿಗೂ ಹೆಚ್ಚು ಕಾಲದ ಪ್ರಾಬಲ್ಯದ ನಂತರ ಬಿಹಾರದಲ್ಲಿ ಪ್ರಮುಖ ರಾಜಕೀಯ ಪರಿವರ್ತನೆಗೆ ಇದು ನಾಂದಿಯಾಗಿದ್ದು, ಸಾಮ್ರಾಟ್ ಚೌಧರಿ ಭಾರತೀಯ ಜನತಾ ಪಕ್ಷದಿಂದ ಬಿಹಾರದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿದ ಮೊದಲ ನಾಯಕರಾಗಿದ್ದಾರೆ.
ರಾಜ್ಯಪಾಲರಾದ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಸಯ್ಯದ್ ಅತಾ ಹಸ್ನೈನ್ ಅವರು ಇಂದು ಬೆಳಗ್ಗೆ ಲೋಕಭವನ್‌ನಲ್ಲಿ ನಡೆದ ಸಮಾರಂಭದಲ್ಲಿ ಸಮ್ರಾಟ್ ಚೌಧರಿಗೆ ಮುಖ್ಯಮಂತ್ರಿಯಾಗಿ ಹಾಗೂ ಜೆಡಿಯು ನಾಯಕ ವಿಜಯ್ ಕುಮಾರ್ ಚೌಧರಿ ಮತ್ತು ಬಿಜೇಂದ್ರ ಪ್ರಸಾದ್ ಯಾದವ್ ಅವರಿಗೆ ಸಚಿವ ಸಂಪುಟದ ಸದಸ್ಯರಾಗಿ ಪದಗ್ರಹಣ ಮತ್ತು ಅಧಿಕಾರ ಗೌಪ್ಯತೆಯ ಪ್ರಮಾಣವಚನ ಬೋಧಿಸಿದರು.
ಸಾಮ್ರಾಟ್ ಚೌಧರಿ ಅವರನ್ನು ಬಿಜೆಪಿ ವಿಧಾನಸಭಾ ಪಕ್ಷದ ನಾಯಕನಾಗಿ ಆಯ್ಕೆ ಮಾಡಲಾಗಿದ್ದು, ನಂತರ ಅವರು ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚಿಸಲು ಹಕ್ಕು ಮಂಡಿಸಿದರು. ಬಿಹಾರದಲ್ಲಿ ಆಡಳಿತಾರೂಢ ಎನ್‌ಡಿಎ ಮೈತ್ರಿಯ ಪ್ರಮುಖ ನಾಯಕರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು. ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ, ಚಿರಾಗ್ ಪಾಸ್ವಾನ್, ನಿತೀಶ್ ಕುಮಾರ್ ಹಾಗೂ ಎನ್‌ಡಿಎಗೆ ಸೇರಿದ ಎಲ್ಲಾ ಶಾಸಕರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 





















