ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಲೋಕಸಭೆಯಲ್ಲಿ ಮಂಡನೆಯಾದ ಮಹಿಳಾ ಮೀಸಲಾತಿ ಮಸೂದೆಯನ್ನು ಸೋಲಿಸಿದ್ದೇ ಬಿಜೆಪಿ ಎಂದು ರಾಜ್ಯ ಕೆಪಿಸಿಸಿ ವಕ್ತಾರೆ ಭವ್ಯನರಸಿಂಹಮೂರ್ತಿ ತಿರುಗೇಟು ನೀಡಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಹಿಳೆಯರ ಬಗ್ಗೆ ನಿಜವಾದ ಕಾಳಜಿ ಇದ್ದಿದ್ದರೆ ಸಂಸತ್ತಿನಲ್ಲಿ ಈಗಿರುವ 543 ಸ್ಥಾನಕ್ಕೆ ಮಹಿಳಾ ಮಸೂದೆ ತರಬೇಕಿತ್ತು. ಅದಕ್ಕೆ ಕಾಂಗ್ರೆಸ್ ಸೇರಿ ಅದರ ಮಿತ್ರಪಕ್ಷಗಳು ಸಂಪೂರ್ಣ ಬೆಂಬಲ ನೀಡುತ್ತಿದ್ದವು. ಆದರೆ ಬಿಜೆಪಿ ಈಗಿರುವ ಸ್ಥಾನಗಳಿಗೆ ಮೀಸಲಾತಿ ನೀಡಿದರೆ ಅದರಲ್ಲಿ 179 ಮಹಿಳೆಯರೇ ಆಗುತ್ತಾರೆ. ಬಿಜೆಪಿ ಪುರುಷ ಎಂಪಿಗಳಿಗೆ ಇದರಿಂದ ಹೊಡೆತ ಬೀಳುತ್ತದೆ ಎಂಬ ಕಾರಣಕ್ಕಾಗಿ ಮಹಿಳಾ ಮಸೂದೆ ಜೊತೆಯಲ್ಲಿ ಕ್ಷೇತ್ರ ಮರುವಿಂಗಡಣೆ ಮಸೂದೆಯನ್ನು ಮಂಡಿಸುವುದರ ಮೂಲಕ ಮಸೂದೆ ಪಾಸಾಗದಂತೆ ಬಿಜೆಪಿ ನೋಡಿಕೊಂಡಿದೆ. ಅದು ಮಹಿಳಾ ಮಸೂದೆಯಾಗಿರದೇ ಪುರುಷರ ಮಸೂದೆಯಾಗಿತ್ತು ಎಂದು ಟೀಕಾಪ್ರಹಾರ ಮಾಡಿದರು.
ಮಹಿಳೆಯರಿಗೆ ಮೀಸಲಾತಿ ನೀಡುವುದು ಮಾಜಿ ಪ್ರಧಾನಿ ರಾಜೀವ್‌ಗಾಂಧಿಯವರ ಕನಸಾಗಿತ್ತು. ಆಗಲೇ ಅವರು ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಸೌಲಭ್ಯ ಕಲ್ಪಿಸಿದ್ದರು. ೨೦೨೩ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಿದಾಗ ಕಾಂಗ್ರೆಸ್ ಬೇಷರತ್ ಬೆಂಬಲ ನೀಡಿ ಅದು ಪಾಸಾಗುವಂತೆ ಸಹಕರಿಸಿತ್ತು. ಮಸೂದೆ ಪಾಸಾದ ಬಳಿಕ ಇಲ್ಲಿಯವರೆಗೆ ಅದಕ್ಕೆ ಸಂಬಂಧಪಟ್ಟಂತೆ ಅಧಿಸೂಚನೆಯನ್ನು ಏಕೆ ಹೊರಡಿಸಲಿಲ್ಲ ಎಂದು ಕಟುವಾಗಿ ಪ್ರಶ್ನಿಸಿದ ಅವರು, ಮಹಿಳೆಯರಿಗೆ ಅಧಿಕಾರ ಕೊಡಲು ಬಿಜೆಪಿಗೆ ಭಯ. ಸುಳ್ಳಿನ ಕಂತೆಯ ಪ್ರಧಾನಿ ನರೇಂದ್ರಮೋದಿ ದೇಶದ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಬಿಜೆಪಿಗೆ ಪೂರ್ಣ ಬಹುಮತ ಇದ್ದಾಗಲೂ ಎರಡು ಅವಧಿಯಲ್ಲಿ ಈ ಮಸೂದೆ ಏಕೆ ಜಾರಿಗೆ ತರಲಿಲ್ಲ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ಆರ್.ಎಸ್.ಎಸ್. ಕೇಂದ್ರ ಕಛೇರಿಯಿಂದ ಆದೇಶ ಬಂದ ಹಿನ್ನಲೆಯಲ್ಲಿ ನರೇಂದ್ರಮೋದಿ ಈ ಮಹಿಳಾ ಮೀಸಲಾತಿ ಮಸೂದೆಯನ್ನು ತರಾತುರಿಯಲ್ಲಿ ಮಂಡಿಸಿದ್ದು, ಇದಕ್ಕೆ ಪೂರ್ವಭಾವಿಯಾಗಿ ವಿರೋಧ ಪಕ್ಷದವರನ್ನು ಚರ್ಚೆಗೆ ಕರೆಯದೇ, ವಿಶ್ವಾಸಕ್ಕೆ ತೆಗೆದುಕೊಳ್ಳದೇ ಮಸೂದೆ ಮಂಡನೆಯಾಗಿದೆ. ಇದರಿಂದ ಮಹಿಳೆಯರಿಗೆ ಅನ್ಯಾಯವಾಗಬಾರದು ಎಂಬ ಕಾರಣಕ್ಕೆ ಕಾಂಗ್ರೆಸ್ ಮಸೂದೆಯನ್ನು ವಿರೋಧಿಸಿದೆ. ಇಲ್ಲಿಯವರೆಗೆ ಬಿಜೆಪಿ, ಮುಸ್ಲಿಂ, ಮಾಂಗಲ್ಯ, ಮಟನ್ ಎಂಬ ಮೂರು ಪದಗಳೊಂದಿಗೆ ಚುನಾವಣಾ ರಾಜಕೀಯ ಮಾಡುತ್ತಿದ್ದು, ಇಂದು `ಮಹಿಳೆ ಎಂಬ ಪದ ಉಪಯೋಗಿಸುವುದರ ಮೂಲಕ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದೆ. ಇದು ದೇಶದ ಜನತೆಗೆ ಮನವರಿಗೆಯಾಗುತ್ತಿದೆ. 2029ರ ಲೋಕಸಭಾ ಚುನಾವಣೆಯಲ್ಲಿ ಮತದಾರರು ಬಿಜೆಪಿಗೆ ತಕ್ಕಪಾಠ ಕಲಿಸಲಿದ್ದಾರೆ ಎಂದರು.
ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾಗದ ಹಿನ್ನಲೆಯನ್ನು ದೇಶದ ಜನತೆಗೆ ತಿಳಿಸಲು ಮತ್ತು ಬಿಜೆಪಿಯ ಟೊಳ್ಳು ಭರವಸೆಯನ್ನು ಸಾರ್ವಜನಿಕರೆದುರು ತೆರೆದಿಡಲು ರಾಜ್ಯ ಮಹಿಳಾ ಮೋರ್ಚಾ ಪ್ರತೀ ಜಿಲ್ಲೆಯಲ್ಲಿಯೂ ಪತ್ರಿಕಾಗೋಷ್ಠಿ ನಡೆಸುವುದರ ಮೂಲಕ ಜನಜಾಗೃತಿ ಮೂಡಿಸುವ ಕೆಲಸವನ್ನು ಆರಂಭಿಸಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಸೂಚನೆಯಂತೆ ಎಲ್ಲಾ ಜಿಲ್ಲೆಗಳಲ್ಲಿ ಈ ಕೆಲಸ ನಡೆಯಲಿದ್ದು, ಬಳಿಕ ಬಿಜೆಪಿ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್, ರಾಜ್ಯ ಅಲೆಮಾರಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ., ಜಿಲ್ಲಾ ಮಹಿಳಾ ಮೋರ್ಚೆ ಅಧ್ಯಕ್ಷ ಶ್ವೇತಾಬಂಡಿ, ಪ್ರಮುಖರಾದ ವಿಜಯಲಕ್ಷ್ಮೀ ಪಾಟೀಲ್, ಸುವರ್ಣಾ ನಾಗರಾಜ್, ಕವಿತಾ ಮರಾಠೆ, ಮಾನಸ, ಸ್ಟೆಲ್ಲಾ ಮಾರ್ಟಿನ್, ಶಿವಾನಂದ ಮೊದಲಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 












Comments 1