ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಹುಡುಗಿಯನ್ನು ಪ್ರೀತಿಸಿ ಆಕೆಯನ್ನು ಕರೆದುಕೊಂಡು ಹೋದ ಎಂಬ ಕಾರಣಕ್ಕೆ ಯುವಕ ಅಣ್ಣನನ್ನು ಅಪಹರಿಸಿ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ರಾಜ್ಯ ರಾಜಧಾನಿಯ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹೌದು… ತಮ್ಮ ಮಾಡಿದ ತಪ್ಪಿಗೆ ಅಣ್ಣ ಶಿಕ್ಷೆ ಅನುಭವಿಸಿದ್ದು, ಸಿಲಿಕಾನ್ ಸಿಟಿಯಲ್ಲಿ ಇಂತಹ ಕಾನೂನು ಬಾಹಿರ ಘಟನೆ ನಡೆದಿದೆ.
ಏನಿದು ಘಟನೆ?
ಬ್ಯಾಡರಹಳ್ಳಿಯ ನಿವಾಸಿ ಶಿವಕುಮಾರ್ ಎಂಬ ಯುವಕ ಮತ್ತು ಅದೇ ಭಾಗದ ಯುವತಿಯೊಬ್ಬಳು ಪರಸ್ಪರ ಪ್ರೀತಿಸುತ್ತಿದ್ದರು. ಇವರ ಸಂಬಂಧಕ್ಕೆ ಯುವತಿಯ ಮನೆಯವರಿಂದ ತೀವ್ರ ವಿರೋಧವಿತ್ತು. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಈ ಜೋಡಿ ಮನೆಯಿಂದ ಹೊರಬಂದು ನಾಪತ್ತೆಯಾಗಿದ್ದರು.
ಯುವಕ-ಯುವತಿ ಇಬ್ಬರೂ ಓಡಿಹೋದ ಕಾರಣ ತೀವ್ರ ಆಕ್ರೋಶಗೊಂಡಿದ್ದ ಯುವತಿಯ ತಂದೆ ಬಸವರಾಜ್ ಮತ್ತು ಆತನ ಸಂಬಂಧಿಕರು, ಶಿವಕುಮಾರ್ ಪತ್ತೆಯಾಗದಿದ್ದಾಗ ಆತನ ಅಣ್ಣ ಕೊಟ್ರೇಶ್ ಎಂಬುವವರ ಮೇಲೆ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ್ದರು.
ಅರ್ಚಕ ವೃತ್ತಿಯಲ್ಲಿರುವ ಕೊಟ್ರೇಶ್ ಅವರನ್ನು ದೇವಸ್ಥಾನದ ಬಳಿಯೇ ತಡೆದ ಆರೋಪಿಗಳು ಪೊಲೀಸ್ ಠಾಣೆಗೆ ಹೋಗೋಣ ಬಾ ಎಂದು ನಂಬಿಸಿ ಕಾರಿನಲ್ಲಿ ಅಪಹರಿಸಿದ್ದಾರೆ. ಕೊಟ್ರೇಶ್ ಅವರನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದು, ಅವರ ಕೈಕಾಲುಗಳನ್ನು ಹಗ್ಗದಿಂದ ಕಟ್ಟಿ ಹಾಕಿ ಮನಬಂದಂತೆ ಥಳಿಸಿದ್ದಾರೆ. ಗಾಯಾಳು ಕೊಟ್ರೇಶ್ ಜೀವಕ್ಕಾಗಿ ಅಂಗಲಾಚುತ್ತಿದ್ದರೂ ಕಿಂಚಿತ್ತೂ ದಯೆ ತೋರದೆ ಆರೋಪಿಗಳು ಕ್ರೌರ್ಯ ಮೆರೆದಿದ್ದಾರೆ.
ಹಲ್ಲೆ ನಡೆಸುವ ದೃಶ್ಯವನ್ನು ಆರೋಪಿಗಳೇ ಮೊಬೈಲ್’ನಲ್ಲಿ ಚಿತ್ರೀಕರಿಸಿದ್ದಾರೆ. ನಿನ್ನ ತಮ್ಮ ಶಿವಕುಮಾರ್ ಎಲ್ಲೇ ಇದ್ದರೂ ಹುಡುಗಿಯನ್ನು ಕರೆದುಕೊಂಡು ಬಂದು ಒಪ್ಪಿಸಬೇಕು ಎಂದು ರಕ್ತಸಿಕ್ತ ಸ್ಥಿತಿಯಲ್ಲಿದ್ದ ಕೊಟ್ರೇಶ್ ಕೈಯಲ್ಲಿ ಹೇಳಿಸಿ, ಆ ವೀಡಿಯೋವನ್ನು ಅವರ ಸಂಬಂಧಿಕರಿಗೆ ಕಳುಹಿಸಿ ಆತಂಕ ಸೃಷ್ಟಿಸಿದ್ದಾರೆ.
ಈ ಭೀಕರ ವೀಡಿಯೋ ಕೊಟ್ರೇಶ್ ಅವರ ಕುಟುಂಬಸ್ಥರು ವೀಕ್ಷಿಸಿದ್ದು, ಇದರಿಂದ ಬೆಚ್ಚಿಬಿದ್ದ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ತಲೆಮರೆಸಿಕೊಂಡಿರುವ ಬಸವರಾಜ್ ಮತ್ತು ಇತರ ಆರೋಪಿಗಳ ಪತ್ತೆಗಾಗಿ ಬಲೆ ಬೀಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















