ಕಲ್ಪ ಮೀಡಿಯಾ ಹೌಸ್ | ಸೊರಬ |
25 ವರ್ಷದ ಯುವಕನೊಬ್ಬನು ಅನುಮಾಮಾಸ್ಪದವಾಗಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಪಟ್ಟಣದ ಕೆಇಬಿ ಕಾಲೋನಿಯಲ್ಲಿ ನಡೆದಿದೆ.
ಮೃತ ಯುವಕನನ್ನು ಕರಿಬಸವರಾಜ (25) ಎಂದು ಗುರುತಿಸಲಾಗಿದೆ.
ಮೃತ ಯುವಕ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಚಿಮ್ಮನಹಳ್ಳಿ ಗ್ರಾಮದ ನಿವಾಸಿಯಾಗಿದ್ದು, ಸೊರಬದಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಮಾಹಿತಿಯ ಪ್ರಕಾರ, ಕರಿಬಸವರಾಜ ಅವರು ಮೇ 14 ರಂದು ತಮ್ಮ ಸ್ವಗ್ರಾಮಕ್ಕೆ ತೆರಳಿದ್ದು, ಮೇ 18ರಂದು ಬೆಳಿಗ್ಗೆ ಸುಮಾರು 6 ಗಂಟೆಗೆ ಸೊರಬಕ್ಕೆ ಮರಳಲು ಬೈಕಿನಲ್ಲಿ ಹೊರಟು, ಸುಮಾರು 10 ಗಂಟೆಗೆ ತಲುಪಿದ್ದರು. ಅವರು ತಮ್ಮ ಸ್ನೇಹಿತ ವಿಜಯ ಅವರೊಂದಿಗೆ ಸೊರಬದಲ್ಲಿನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
Also read: ಶಿವಮೊಗ್ಗದಲ್ಲಿ ಮೆಡಿಕಲ್ ಶಾಪ್ ಬಂದ್, ಹೇಗಿದೆ ಪ್ರತಿಕ್ರಿಯೆ?
ಆ ದಿನ ಬೆಳಿಗ್ಗೆ ಸುಮಾರು 9 ಗಂಟೆಗೆ ವಿಜಯ ಅವರು ಕರ್ತವ್ಯದ ನಿಮಿತ್ತ ಮನೆಯಿಂದ ಹೊರಗೆ ತೆರಳಿದ್ದರು. ನಂತರ ಮಧ್ಯಾಹ್ನ ಸುಮಾರು 2 ಗಂಟೆಗೆ ಮನೆಗೆ ಮರಳಿದಾಗ, ಕರಿಬಸವರಾಜ ಅವರು ಮನೆಯ ಹಾಲ್’ನಲ್ಲಿ ಮರದ ತೊಲೆಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ.
ಘಟನೆ ಕುರಿತು ವಿಜಯ ಅವರು ತಕ್ಷಣ ಮೃತನ ಸಹೋದರಿ ರಂಜಿತಾಳಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದರು. ಬಳಿಕ ರಂಜಿತಾ ಅವರು ತಮ್ಮ ಕುಟುಂಬದವರಿಗೆ ವಿಷಯವನ್ನು ತಿಳಿಸಿದ್ದಾರೆ. ತಕ್ಷಣವೇ ಪೋಷಕರು ಹಾಗೂ ಸಂಬಂಧಿಕರು ಸೊರಬಕ್ಕೆ ಆಗಮಿಸಿ ಸಂಜೆ ವೇಳೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಮೃತನ ತಂದೆ ತಮ್ಮ ಮಗನ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿ, ಮರಣದ ನಿಖರ ಕಾರಣವನ್ನು ತಿಳಿಯಲು ಮರಣೋತ್ತರ ಪರೀಕ್ಷೆ ನಡೆಸುವಂತೆ ಸೊರಬ ಠಾಣೆಗೆ ದೂರು ನೀಡಿದ್ದಾರೆ.
ಮೃತದೇಹವನ್ನು ಸೊರಬ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















