ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಾಜಿ ಉಪ ಮುಖ್ಯಮಂತ್ರಿ ಹಾಗೂ ರಾಷ್ಟ್ರಭಕ್ತರ ಬಳಗದ ಸಂಸ್ಥಾಪಕರಾದ ಕೆ.ಎಸ್. ಈಶ್ವರಪ್ಪ K S Eshwarappa ಅವರ 78ನೇ ವರ್ಷದ ಜನ್ಮದಿನವನ್ನು ಶಿವಮೊಗ್ಗದಲ್ಲಿನ ಅವರ ಸ್ವಗೃಹದಲ್ಲಿ ಧಾರ್ಮಿಕ ಹಾಗೂ ಸಾಂಪ್ರದಾಯಿಕ ಕಾರ್ಯಕ್ರಮಗಳ ಮೂಲಕ ವಿಜೃಂಭಣೆಯಿಂದ ಆಚರಿಸಲಾಯಿತು.
ಜನ್ಮದಿನದ ಅಂಗವಾಗಿ ಬೆಳಿಗ್ಗೆ 108 ಮಂದಿ ವೈದಿಕರಿಂದ ರುದ್ರಪಠಣ ನಡೆಯಿತು. ಇದೇ ವೇಳೆ 504 ಜೋಡಿಗಳಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಪಾರಾಯಣ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮನೆಯಲ್ಲಿ ವಿಪ್ರರಿಂದ ವಿಶೇಷ ಪೂಜೆ ನಡೆದರೆ, ಮನೆಯ ಪಕ್ಕದ ಖಾಲಿ ಜಾಗದಲ್ಲಿ ಜರ್ಮನ್ ಟೆಂಟ್ ನಿರ್ಮಿಸಿ ಭಕ್ತರ ಸಮ್ಮುಖದಲ್ಲಿ ಸತ್ಯನಾರಾಯಣ ಪೂಜೆ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಕೆ.ಎಸ್. ಈಶ್ವರಪ್ಪ ಅವರು, ಅವರ ಪತ್ನಿ ಜಯಂತಿ, ಪುತ್ರ ಕಾಂತೇಶ್ ಹಾಗೂ ಕುಟುಂಬ ಸದಸ್ಯರು ಸಂಪ್ರದಾಯಬದ್ಧವಾಗಿ ಪಾಲ್ಗೊಂಡು ಪೂಜಾ ವಿಧಿವಿಧಾನಗಳಲ್ಲಿ ಭಾಗವಹಿಸಿದರು. ಹಿರಿಯರು ಹಾಗೂ ವಿವಿಧ ಮಠಾಧೀಶರು ಕುಟುಂಬ ಸದಸ್ಯರಿಗೆ ಆಶೀರ್ವಾದ ನೀಡಿದರು.
ಪೇಜಾವರ ಮಠದ ಪ್ರಸನ್ನ ತೀರ್ಥ ಸ್ವಾಮೀಜಿ ಸೇರಿದಂತೆ ಮಾದರ ಚೆನ್ನಯ್ಯ ಸ್ವಾಮೀಜಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಬೆಕ್ಕಿನಕಲ್ಮಠದ ಡಾ. ಮಲ್ಲಿಕಾರ್ಜುನ ರಾಜೇಂದ್ರ ಮಹಾಸ್ವಾಮಿಗಳು, ಬಿಳಕಿ ಮಠದ ಶ್ರೀಗಳು, ಆದಿಚುಂಚನಗಿರಿ ಮಠದ ನಾದಮಯಾನಂದ ಶ್ರೀಗಳು ಭಾಗವಹಿಸಿದ್ದರು. ಬಿಳಕಿ ಸ್ವಾಮೀಜಿಯವರ ಆಗಮನ ನಿರೀಕ್ಷಿಸಲಾಗುತ್ತಿದೆ.
ಆರ್‌ಎಸ್‌ಎಸ್‌ನ ಪಟ್ಟಾಭಿರಾಮ್, ಎಂಎಲ್‌ಸಿ ಡಿ.ಎಸ್. ಅರುಣ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮಾರಿಕಾಂಬ ಟ್ರಸ್ಟ್, ಅಭಿಮಾನಿ ಬಳಗ, ಸವಿತಾ ಸಮಾಜ, ಶ್ರೀಗಂಧ ಸಂಘಟನೆ ಹಾಗೂ ರಾಷ್ಟ್ರಭಕ್ತರ ಬಳಗದ ಸಹಯೋಗದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 












Comments 1