ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿಯೇ ದೀರ್ಘಕಾಲದ ಪ್ರಧಾನಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾದ ಹಿನ್ನೆಲೆಯಲ್ಲಿ ಬಿಜೆಪಿ ಆರಂಭಿಸಿರುವ `ಬೂತ್ ವಾಸ್ತವ್ಯ’ ಕಾರ್ಯಕ್ರಮದ ಭಾಗವಾಗಿ ಶಾಸಕ ಎಸ್. ಎನ್. ಚನ್ನಬಸಪ್ಪ ಅವರು ನಿನ್ನೆ ಇಲ್ಲಿನ ಬೊಮ್ಮನಕಟ್ಟೆ ಬೂತ್ ಅಧ್ಯಕ್ಷೆ ಶಾಂತಮ್ಮ ಅವರ ನಿವಾಸದಲ್ಲಿ ವಾಸ್ತವ್ಯ ಮಾಡಿದರು.
ಈ ವಿಶೇಷ ಬೂತ್ ವಾಸ್ತವ್ಯ ಅಭಿಯಾನದಲ್ಲಿ ಭಾಜಪ ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್, ನಗರಾಧ್ಯಕ್ಷ ಮೋಹನ್ ರೆಡ್ಡಿ, ಜಿಲ್ಲಾ ಉಪಾಧ್ಯಕ್ಷ ಜ್ಞಾನೇಶ್ವರ್, ನಾಗರಾಜ್, ಪ್ರಭಾಕರ್, ಮಂಜುನಾಥ ನವಲೆ, ಪ್ರದೀಪ್ ಹೊನ್ನಪ್ಪ, ದೀನ್ ದಯಾಳ್ ಸೇರಿದಂತೆ ಬಿಜೆಪಿ ಪಕ್ಷದ ಹಲವು ಕಾರ್ಯ ಕರ್ತರು ಪಾಲ್ಗೊಂಡರು. ವಾಸ್ತವ್ಯದ ಬಳಿಕ ಜೂ. 16 ರಂದು ಮಂಗಳವಾರ ಬೆಳಗ್ಗೆ ಶಾಸಕರು, ಸ್ಥಳೀಯರ ಕುಂದು ಕೊರತೆಗಳನ್ನು ಆಲಿಸಿದರು.
ಬೂತ್ ವಾಸ್ತವ್ಯದ ಕುರಿತು ಮಾತನಾಡಿದ ಶಾಸಕರು, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ‘ಜನಸೇವೆ ಮತ್ತು ಪ್ರಗತಿ’ಯ ಭವ್ಯ 12 ವರ್ಷಗಳನ್ನು ಪೂರೈಸಿರುವುದು ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಸಂದರ್ಭವಾಗಿದೆ. ಸರ್ಕಾರದ ಈ ಜನಕಲ್ಯಾಣ ಯೋಜನೆಗಳನ್ನು ಪ್ರತಿ ಮನೆ ಮನೆಗೆ ತಲುಪಿಸುವುದೇ ನಮ್ಮ ಸಂಘಟನೆಯ ಮೂಲ ಆಶಯವಾಗಿದೆ ಎಂದರು.
ವಿಶೇಷ ಪೂಜೆ ಹಾಗೂ ಸಂವಾದ : ವಾಸ್ತವ್ಯದ ಆರಂಭಕ್ಕೂ ಮುನ್ನ ನಿನ್ನೆ ಶಾಸಕರು ವಾರ್ಡ್ ನಂಬರ್ 01ರ ಪ್ರಸಿದ್ಧ ಶ್ರೀ ಓಂ ಶಕ್ತಿ ಮತ್ತು ಮುತ್ತು ಮಾರಮ್ಮ ದೇವಸ್ಥಾನಗಳಿಗೆ ಭೇಟಿ ನೀಡಿ, ದೇಶ ಮತ್ತು ನಾಡಿನ ಒಳಿತಿಗಾಗಿ ಕಾರ್ಯಕರ್ತರೊಂದಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ತದನಂತರ ಭವ್ಯ ಮೆರವಣಿಗೆಯ ಮೂಲಕ ವಾಸ್ತವ್ಯದ ಮನೆಗೆ ಭೇಟಿ ನೀಡಿದ ಅವರು, ಆಶ್ರಯ ಬಡಾವಣೆಯ ಮಹಿಳಾ ಪ್ರಮುಖರು ಹಾಗೂ ವಿವಿಧ ಜನಪರ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಿ ಕುಂದುಕೊರತೆಗಳನ್ನು ಆಲಿಸಿದರು.
ಬೂತ್ ಮಟ್ಟದ ಸಂಘಟನಾ ಚರ್ಚೆ : ಅಭಿಯಾನದ ಮುಂದುವರಿದ ಭಾಗವಾಗಿ ವಾರ್ಡ್ ನಂಬರ್ 02ರ ಬೂತ್ ಸಂಖ್ಯೆ 27ರ ಬೂತ್ ಅಧ್ಯಕ್ಷ ಶಿವಶಂಕರ್ ಅವರ ನಿವಾಸಕ್ಕೂ ಭೇಟಿ ನೀಡಿದ ಶಾಸಕರು, ಮುಂಬರುವ ದಿನಗಳಲ್ಲಿ ತಳಮಟ್ಟದಲ್ಲಿ ಪಕ್ಷವನ್ನು ಮತ್ತಷ್ಟು ಸಂಘಟಿಸುವ ನಿಟ್ಟಿನಲ್ಲಿ ಪ್ರಮುಖ ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿದರು. ದಿನದ ಕೊನೆಯ ಹಂತವಾಗಿ ಬೂತ್ ಅಧ್ಯಕ್ಷ ನಿವಾಸದಲ್ಲಿ ವಾಸ್ತವ್ಯ ಹೂಡಿದ ಶಾಸಕರು, ಶಾಂತಮ್ಮಅವರ ಕುಟುಂಬದ ಸದಸ್ಯರು ಹಾಗೂ ಕಾರ್ಯಕರ್ತರೊಂದಿಗೆ ಶಾಸಕರು ಪ್ರೀತಿಯ ಸಹಭೋಜನ ಸವಿದರು.ಬಿಜೆಪಿ ಮುಖಂಡರಾದ ಆಶಾ ಚಂದ್ರಪ್ಪ, ಚಂದ್ರಪ್ಪ, ಲಕ್ಷ್ಮೀಕಾಂತ್ ಭಟ್, ಕುಮಾರ್ ಗಾಡಿಕೊಪ್ಪ, ರವೀಂದ್ರ ಸೇರಿದಂತೆ ಪಕ್ಷದ ವಿವಿಧ ಸ್ತರದ ಪದಾಧಿಕಾರಿಗಳು ಹಾಗೂ ನೂರಾರು ಸಂಖ್ಯೆಯ ಉತ್ಸಾಹಿ ಕಾರ್ಯಕರ್ತ ಬಂಧುಗಳು ಸಕ್ರಿಯವಾಗಿ ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

