ಕಲ್ಪ ಮೀಡಿಯಾ ಹೌಸ್ | ಸೊರಬ |
ರೈತರ ಜೀವನಾಡಿಯಾದ ಕೆರೆಗಳ ಸಂರಕ್ಷಣೆಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಜೀವವೈವಿಧ್ಯ ಮಂಡಳಿ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶಿಸರ ಹೇಳಿದರು.
ಪಟ್ಟಣದ ಅರಣ್ಯ ಇಲಾಖೆ ಹಾಗೂ ತಾಲೂಕು ಪಂಚಾಯತ್ ಅಧಿಕಾರಿಗಳೊಂದಿಗೆ ನಡೆದ ಅರಣ್ಯ ಸಂರಕ್ಷಣೆ, ಸಾರ್ವಜನಿಕ ಭೂಮಿ ಮತ್ತು ಸಾಮಾಜಿಕ ಅರಣ್ಯ ರಕ್ಷಣೆ ಕುರಿತ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
Also Read>> From Coast to Glory: Naija Hegde’s Inspiring Rise to Success
ತಾಲೂಕಿನ ಸುಮಾರು 1300 ಕೆರೆಗಳಲ್ಲಿ 500ಕ್ಕೂ ಹೆಚ್ಚು ಕೆರೆಗಳು ಒತ್ತುವರಿಯಾಗಿರುವುದನ್ನು ಉಲ್ಲೇಖಿಸಿದ ಅವರು, ಕೆರೆಗಳ ಪುನರುಜ್ಜೀವನ ಮತ್ತು ಸಂರಕ್ಷಣೆಗೆ ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇಂಡುವಳ್ಳಿ ಹುಲಿ ಕಣಿವೆಗೆ ಜೀವ ವೈವಿಧ್ಯ ತಾಣದ ಮಾನ್ಯತೆ ನೀಡುವಂತೆ ಹಾಗೂ ಉಳವಿ ಬಳಿಯ ಕಾನಳ್ಳಿ ಸೀತಾ–ಅಶೋಕಾವನ, ಹೊಳೆಮರೂರು ಮತ್ತು ಅಂದವಳ್ಳಿ ಕಾನು ಅರಣ್ಯಗಳ ರಕ್ಷಣೆಗೆ ಅರಣ್ಯ ಇಲಾಖೆ ಮುಂದಾಗಬೇಕು ಎಂದು ಸೂಚಿಸಿದರು.
ಪಾರಂಪರಿಕ ದೇವರಕಾಡು ಎಂದು ಘೋಷಿಸುವಂತೆ ಮನವಿ
ಕಂದಾಯ ಇಲಾಖೆ ಸಹ ಅಗತ್ಯ ಸಹಕಾರ ನೀಡಬೇಕು. ಕಂತನಳ್ಳಿ ಪ್ರದೇಶದ ನಿತ್ಯಹರಿದ್ವರ್ಣದ ದಟ್ಟ ಅರಣ್ಯ ನಾಶ ತಡೆಯಲು ವಿಶೇಷ ಯೋಜನೆ ಜಾರಿಗೆ ತರಬೇಕು ಹಾಗೂ ಅದನ್ನು ಪಾರಂಪರಿಕ ದೇವರಕಾಡು ಎಂದು ಘೋಷಿಸುವಂತೆ ಮನವಿ ಮಾಡಿದರು.
ಗೊಗ್ಗೇಹಳ್ಳಿ, ಹರಳಿಗೆ ಗ್ರಾಮಗಳ ಕಾನು ಅರಣ್ಯಗಳು ಹಾಗೂ ಕಸಬಾ ಹೋಬಳಿ ಚಿಮ್ಮನೂರು ಗ್ರಾಮದ ಗೋಮಾಳ ಭೂಮಿಗಳ ಸಂರಕ್ಷಣೆಗೆ ಅರಣ್ಯ, ಕಂದಾಯ ಇಲಾಖೆ ಮತ್ತು ಗ್ರಾಮ ಪಂಚಾಯತಿಗಳು ಜಂಟಿಯಾಗಿ ಕಾರ್ಯನಿರ್ವಹಿಸಬೇಕೆಂದು ತಿಳಿಸಿದರು.
ಸ್ಪೆಷಲ್ ಸ್ಕ್ವಾಡ್ ರಚಿಸಿ
ದಂಡಾವತಿ ಮತ್ತು ವರದಾ ನದಿ ಕಣಿವೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಲು ವಿಶೇಷ ದಳ (ಸ್ಪೆಷಲ್ ಸ್ಕ್ವಾಡ್) ರಚಿಸುವ ಅಗತ್ಯವಿದೆ ಎಂದು ಹೇಳಿದರು.
ಸಭೆಯಲ್ಲಿ ಅರಣ್ಯ, ತಾಪಂ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು, ವೃಕ್ಷಲಕ್ಷ ಸಂಚಾಲಕ ಶ್ರೀಪಾದ ಬಿಚ್ಚುಗತ್ತಿ, ಪಜಾ ಟ್ರಸ್ಟ್ ಕಾರ್ಯದರ್ಶಿ ವೀರೇಶಗೌಡ, ನಾಟಿ ವೈದ್ಯೆ ಸುಮನಾ ಮಳಲಗದ್ದೆ, ಕೃಷಿಕ ಗಂಗಾಧರಗೌಡ ಹೊಳೆಮರೂರು, ದೀಪಕ್ ಮಳಲಗದ್ದೆ, ವಿನಾಯಕ ಅವಲಗೋಡ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















