ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಜ್ಯದ ಕೃಷಿ ವಿಶ್ವವಿದ್ಯಾನಿಲಯಗಳ ಕುಲಪತಿ ಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಸ್ವಾಯತ್ತತೆ ಮತ್ತು ಸಾರ್ವಜನಿಕ ವಿಶ್ವಾಸಾರ್ಹತೆಯನ್ನು ಕಾಪಾಡಬೇಕೆಂದು ಒತ್ತಾಯಿಸಿ ನಿವೃತ್ತ ಪ್ರಾಧ್ಯಾಪಕರು, ವಿಜ್ಞಾನಿಗಳು ಹಾಗೂ ಹಳೆಯ ವಿದ್ಯಾರ್ಥಿಗಳ ಒಕ್ಕೂಟವು ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ. ಈ ಹೋರಾಟಕ್ಕೆ ಶಿಕ್ಷಣ ವಲಯದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ಈ ನಡುವೆ, ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಕುಲಪತಿ ಆಯ್ಕೆಗಾಗಿ ರಚಿಸಲಾದ ಶೋಧನಾ ಸಮಿತಿಗೆ ಸಂಬಂಧಿಸಿದಂತೆ ವಿವಾದ ಉಂಟಾಗಿದೆ. ಸಹೋದರ ಸಂಸ್ಥೆಯಾದ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಹಾಲಿ ಕುಲಪತಿಯನ್ನು ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದನ್ನು ಒಕ್ಕೂಟ ತೀವ್ರವಾಗಿ ವಿರೋಧಿಸಿದೆ. ಈ ಕುರಿತು ಕೃಷಿ ಸಚಿವರಿಗೆ ಪ್ರತ್ಯೇಕ ಮನವಿ ಸಲ್ಲಿಸಲಾಗಿದೆ.
ಇತ್ತೀಚೆಗೆ ಬೀದರ್‌ನ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾನಿಲಯಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ವಿಶ್ರಾಂತ ಕುಲಪತಿ ಹಾಗೂ ನಿವೃತ್ತ ಹಣಕಾಸು ಅಧಿಕಾರಿಯನ್ನು ಲೋಕಾಯುಕ್ತ ಪೊಲೀಸರು ಬಂಧಿಸಿರುವ ಘಟನೆ ಈ ಆತಂಕವನ್ನು ಮತ್ತಷ್ಟು ಗಂಭೀರಗೊಳಿಸಿದೆ. ಈ ಘಟನೆಗಳು “ಹಿಮಪರ್ವತದ ತುದಿ” ಮಾತ್ರವಾಗಿದ್ದು, ವ್ಯವಸ್ಥೆಯ ಆಳದಲ್ಲಿ ಇನ್ನಷ್ಟು ಸಮಸ್ಯೆಗಳಿರುವ ಸಾಧ್ಯತೆ ಇದೆ ಎಂದು ಒಕ್ಕೂಟ ಹೇಳಿದೆ.
Also read: ಪ್ರವಾಸ ಪ್ರೇಮಿ ಕಂಟೆಂಟ್ ಕ್ರಿಯೇಟರ್ ಗಳಿಗಾಗಿ ಕ್ಲಿಯರ್ ಟ್ರಿಪ್ ನಿಂದ ಕ್ರಿಯೇಟರ್ಸ್ ಕ್ಲಬ್ ಆರಂಭ
ಹಿತಾಸಕ್ತಿ ಸಂಘರ್ಷ, ಸಂಸ್ಥಾತ್ಮಕ ನೈತಿಕತೆ ಹಾಗೂ ಆಯ್ಕೆ ಪ್ರಕ್ರಿಯೆಯ ಸ್ವಾಯತ್ತತೆ ಕಾಪಾಡುವ ದೃಷ್ಟಿಯಿಂದ ಶೋಧನಾ ಸಮಿತಿಯನ್ನು ಸಂಪೂರ್ಣ ಸ್ವತಂತ್ರ ಮತ್ತು ನಿಷ್ಪಕ್ಷಪಾತ ತಜ್ಞರನ್ನು ಒಳಗೊಂಡಂತೆ ಪುನರ್‌ರಚಿಸಬೇಕೆಂದು ಒತ್ತಾಯಿಸಲಾಗಿದೆ.
ಈ ಮನವಿಗೆ ಖ್ಯಾತ ಪರಿಸರವಾದಿ ಡಾ. ಎ.ಎನ್. ಯಲ್ಲಪ್ಪ ರೆಡ್ಡಿ, ಐಸಿಆರ್‌ಐಸಾಟ್‌ನ ಮಾಜಿ ಉಪ ಮಹಾನಿರ್ದೇಶಕ ಡಾ. ಸಿ.ಎಲ್. ಲಕ್ಷ್ಮೀಪತಿ ಗೌಡ, ಹಿರಿಯ ಕಮ್ಯೂನಿಸ್ಟ್ ನಾಯಕ ಜಿ.ಎನ್. ನಾಗರಾಜ್ ಸೇರಿದಂತೆ ಸುಮಾರು 40 ಗಣ್ಯರು ಬೆಂಬಲ ನೀಡಿದ್ದಾರೆ. ಜೊತೆಗೆ ವಿವಿಧ ಕೃಷಿ ವಿಶ್ವವಿದ್ಯಾನಿಲಯಗಳ ಮಾಜಿ ಅಧಿಕಾರಿಗಳು, ನಿವೃತ್ತ ಪ್ರಾಧ್ಯಾಪಕರು, ವಿಜ್ಞಾನಿಗಳು ಹಾಗೂ ದೇಶ-ವಿದೇಶಗಳ ಹಳೆಯ ವಿದ್ಯಾರ್ಥಿಗಳೂ ಸಹ ಸಹಿ ಹಾಕಿದ್ದಾರೆ.
ರಾಜ್ಯದ ಕೃಷಿ ಮತ್ತು ತೋಟಗಾರಿಕಾ ಉನ್ನತ ಶಿಕ್ಷಣ ವ್ಯವಸ್ಥೆಯ ಭವಿಷ್ಯಕ್ಕೆ ಸಂಬಂಧಿಸಿದ ಈ ವಿಷಯದ ಕುರಿತು ಸಾರ್ವಜನಿಕ ಚರ್ಚೆ ಅಗತ್ಯವಿದ್ದು, ಮಾಧ್ಯಮಗಳು ಸೂಕ್ತ ಪ್ರಚಾರ ನೀಡಬೇಕು ಎಂದು ಒಕ್ಕೂಟ ಮನವಿ ಮಾಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








