ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ತೀರ್ಥಹಳ್ಳಿ ತಾಲ್ಲೂಕಿನ ಬಿದರಗೋಡು ಗ್ರಾಮದಲ್ಲಿ 2022ರಲ್ಲಿ ನಡೆದಿದ್ದ ಮಹಿಳೆಯ ಕೊಲೆ ಪ್ರಕರಣದಲ್ಲಿ ಆರೋಪಿಗೆ ಶಿವಮೊಗ್ಗದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
2022ರ ಡಿಸೆಂಬರ್ 18ರಂದು ಬಿದರಗೋಡು ಗ್ರಾಮದ ಸಾವಿತ್ರಮ್ಮ ಅವರಿಗೆ ಸೇರಿದ ಜಮೀನಿನಲ್ಲಿ ಆರೋಪಿ ರಾಜಪ್ಪ (36) ಹಾಗೂ ಪಾರ್ವತಮ್ಮ (50) ಅಡಿಕೆ ಸಸಿಗಳನ್ನು ನೆಡುತ್ತಿದ್ದ ವೇಳೆ, ರಾಜಪ್ಪ ಪಾರ್ವತಮ್ಮ ಅವರೊಂದಿಗೆ ದೈಹಿಕ ಸಂಪರ್ಕಕ್ಕೆ ಒತ್ತಾಯಿಸಿ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾನೆ ಎನ್ನಲಾಗಿದೆ. ಈ ವಿಚಾರವನ್ನು ಕುಟುಂಬದವರಿಗೆ ತಿಳಿಸುವುದಾಗಿ ಪಾರ್ವತಮ್ಮ ಹೇಳಿದ ಹಿನ್ನೆಲೆಯಲ್ಲಿ, ತನ್ನ ಕೃತ್ಯ ಬಯಲಾಗುವ ಭೀತಿಯಿಂದ ರಾಜಪ್ಪ ಗುದ್ದಲಿಯ ಹಿಂಭಾಗದಿಂದ ಅವರ ತಲೆಗೆ ಹಾಗೂ ಕಿವಿಯ ಬಳಿ ಹೊಡೆದು ಕೊಲೆ ಮಾಡಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಬಳಿಕ ಪಾರ್ವತಮ್ಮ ಅವರ ಮೃತದೇಹವನ್ನು ಕಪ್ಪು ಬಣ್ಣದ ಡ್ರಿಪ್ ಪೈಪ್‌ನಿಂದ ಹೊಟ್ಟೆಗೆ ಸುತ್ತಿ ಕಟ್ಟಿ, ಜಮೀನಿನಲ್ಲಿದ್ದ ಬಾವಿಗೆ ಎಸೆದು ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.
Also read: ದೇಶದಲ್ಲಿ ಉಚಿತ ಶಿಕ್ಷಣ, ಆರೋಗ್ಯ ಸೇವೆ ಲಭ್ಯವಾದಾಗ ಸಾಧನೆ ಸಾಧ್ಯ: ಶಾಸಕ ಡಿ.ಎಸ್. ಅರುಣ್
ಈ ಸಂಬಂಧ ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಯನ್ನು ಆಗಿನ ಮಾಳೂರು ವೃತ್ತದ ಪೊಲೀಸ್ ಇನ್ಸ್‌ಪೆಕ್ಟರ್ ಪ್ರವೀಣ್ ನೀಲಮ್ಮನವರ್ ಪೂರ್ಣಗೊಳಿಸಿ, ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಆರೋಪಿಯ ವಿರುದ್ಧದ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ರಾಜಪ್ಪಗೆ ಜೀವಾವಧಿ ಶಿಕ್ಷೆ ಹಾಗೂ ₹10,000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








