ಕಲ್ಪ ಮೀಡಿಯಾ ಹೌಸ್ | ಮೈಸೂರು |
ಮೈಸೂರಿನ (Mysuru) ತೊಣಚಿ ಕೊಪ್ಪಲು ( ಟಿ.ಕೆ.) ಬಡಾವಣೆಯಲ್ಲಿ ಪ್ರಖ್ಯಾತ ಶ್ರೀ ರಾಯರ ಮಠದ ಶ್ರೀ ಗುರುರಾಘವೇಂದ್ರ ಸೇವಾ ಟ್ರಸ್ಟ್‌ನ ರಜತ ಸಂಭ್ರಮ ಮಹೋತ್ಸವ ಆಗಸ್ಟ್ 2ರಂದು ವಿಜೃಂಭಣೆಯಿಂದ ನೆರವೇರಲಿದೆ.
ಈ ಸಮಾರಂಭಕ್ಕೆ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ವಿ. ಶ್ರೀಶಾನಂದ, ಬ್ರಹ್ಮೋಸ್ ಕ್ಷಿಪಣಿ ಸಂಶೋಧಿಸಿದ ಹಿರಿಯ ವಿಜ್ಞಾನಿ ಡಾ. ಪ್ರಹ್ಲಾದ ರಾಮರಾವ್, ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಟ್ರಸ್ಟ್ ಅಧ್ಯಕ್ಷ ಎಸ್. ಜಯರಾಂ ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ವಕೀಲ ಕೆ.ಆರ್. ಶಿವಶಂಕರ್ ಮತ್ತು ಟ್ರಸ್ಟ್ ಪದಾಧಿಕಾರಿಗಳು ಹಾಜರಿರಲಿದ್ದಾರೆ.
Also Read>> ವಾಸ್ಕೋ ಡ ಗಾಮ–ವೇಲಂಕಣ್ಣಿ ನಡುವೆ 3 ವಿಶೇಷ ರೈಲು | ಉತ್ತರ ಕರ್ನಾಟಕಕ್ಕೂ ಉಪಯೋಗ
1987ರಲ್ಲಿ ಟಿಕೆ ಬಡಾವಣೆಯಲ್ಲಿ ಶ್ರೀ ಮಠವು ಪ್ರತಿಷ್ಠಾಪನೆಯಾಯಿತು. 39 ವರ್ಷಗಳಿಂದ ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಸಾಮಾಜಿಕ ರಂಗಕ್ಕೆ ತನ್ನದೇ ಆದ ವಿಶೇಷ ಸೇವೆಗಳನ್ನು ನೀಡುತ್ತಿರುವುದು ವಿಶೇಷವಾಗಿ ಗಮನ ಸೆಳೆದಿದೆ. ಸೇವಾ ಕಾರ್ಯ ಮತ್ತು ಆಡಳಿತ ವ್ಯವಸ್ಥೆಯನ್ನು ಸುಗಮಗೊಳಿಸುವ ಮಹತ್ತರ ಉದ್ದೇಶದಿಂದ ಶ್ರೀ ಗುರುರಾಘವೇಂದ್ರ ಸೇವಾ ಟ್ರಸ್ಟ್ 1999ರಲ್ಲಿ ನೋಂದಣಿಯಾಯಿತು.
25 ವರ್ಷಗಳ ಸಾರ್ಥಕ ಸೇವೆಯನ್ನು ಸಮಾಜಕ್ಕೆ ಸಮರ್ಪಣೆ ಮಾಡಿದ ಧನ್ಯತೆಯಲ್ಲಿರುವ ಟ್ರಸ್ಟ್ ರಜತ ಸಂಭ್ರಮ ಮಹೋತ್ಸವ ಹಮ್ಮಿಕೊಂಡಿರುವುದು ಧನ್ಯತೆಯ ಪ್ರತೀಕವಾಗಿದೆ. ಈ ಸಮಾರಂಭದಲ್ಲಿ ಮಾಜಿ ಅಧ್ಯಕ್ಷರು ಮತ್ತು ವಿಶೇಷ ಸೇವೆ ಸಲ್ಲಿಸಿದ ಕಾರ್ಯಕರ್ತರಿಗೆ ಸನ್ಮಾನ ನೆರವೇರಲಿದೆ.
Mysuru | ನಡೆದು ಬಂದ ಮಹಾ ಪಥ
ಧಾರ್ಮಿಕ ಕ್ಷೇತ್ರದಲ್ಲಿ ಮಹಿಳೆ ಮತ್ತು ಕಾನೂನು ಎಂಬ ವಿಷಯಕ್ಕೆ ಟ್ರಸ್ಟ್ ವಿಶೇಷ ಮನ್ನಣೆ ನೀಡಿದೆ. ಇದಕ್ಕಾಗಿ ಮಠದಲ್ಲಿ ಪ್ರತಿನಿತ್ಯವೂ ಸಂಜೆ ಉಚಿತ ಕಾನೂನು ಸಲಹೆ ಲಭ್ಯವಿದೆ. ಸಾಮಾಜಿಕ, ಕೌಟುಂಬಿಕ ಸಾಮರಸ್ಯ ಸ್ಥಾಪಿಸಲು ವಕೀಲರ ತಂಡ ದಿನವೂ ಸಾರ್ವಜನಿಕರಿಗೆ ಉಚಿತ ಕಾನೂನು ಸೇವೆ ನೀಡುತ್ತಿದೆ.
ವರ್ಷಕ್ಕೆ 2 ಬಾರಿ ಉಚಿತ ಆರೋಗ್ಯ ತಪಾಸಣೆ ಶಿಬಿರ, ಪಾಲಿಕೆ ನೆರವಿನಿಂದ 6 ವರ್ಷಗಳಿಂದ ಪರಿಶುದ್ಧ ಕುಡಿಯುವ ನೀರು ವಿತರಣಾ ಘಟಕ ನಿರ್ವಹಣೆ, ಮ್ಯಾಟ್ರಿಮೋನಿ, ಉಚಿತ ಸಾಮೂಹಿಕ ಉಪನಯನ, ಬಡ ವಿದ್ಯಾರ್ಥಿಗಳಿಗೆ ನೆರವು ನೀಡುವ ಸೇವೆಯನ್ನು ಟ್ರಸ್ಟ್ ಮಾಡುತ್ತಿದೆ.
ಅನ್ನದಾನ ಸೇವೆ
ಪ್ರತಿ ಗುರುವಾರ ಸಂಜೆ ಭಜನೆ, ಪ್ರಾಕಾರೋತ್ಸವ, ಮಧ್ಯಾಹ್ನ ಸಕಲ ಭಕ್ತರಿಗೆ ಅನ್ನದಾನ ಸೇವೆ, ಶ್ರಾವಣದಲ್ಲಿ ರಾಯರ ಆರಾಧನೆ ಸಂದರ್ಭ 3 ದಿನ ವೈಭವಪೂರ್ಣ ಉತ್ಸವ ವಿಜೃಂಭಿಸುತ್ತದೆ. ಜನವರಿಯಲ್ಲಿ ಶ್ರೀನಿವಾಸ ಕಲ್ಯಾಣ, ರಾಷ್ಟ್ರದ ಅಭ್ಯಯದಯಕ್ಕಾಗಿ ವಿವಿಧ ಹೋಮವನ್ನೂ ಟ್ರಸ್ಟ್ ನೆರವೇರಿಸುವ ಮೂಲಕ ದೇಶ ಭಕ್ತರನ್ನು ಸಂಗಮಗೊಳಿಸುವುದು ಮಾದರಿ ಕಾರ್ಯವಾಗಿದೆ.
ಭವ್ಯ ಶಕ್ತಿಯುಳ್ಳ ಸನ್ನಿಧಾನಕ್ಕೆ 39 ವರ್ಷದ ಸುದೀರ್ಘ ಅವಧಿಯಲ್ಲಿ ಹಲವು ಮಠದ ಪೀಠಾಧಿಪತಿಗಳು ದಯಮಾಡಿಸಿ ಪೂಜಾದಿಗಳನ್ನು ಸಮರ್ಪಿಸಿದ್ದಾರೆ. ಖ್ಯಾತ ಪ್ರವಚನಕಾರರು, ಪಂಡಿತರ ಉಪನ್ಯಾಸ ಸರಣಿ ನೀಡಿದ್ದಾರೆ. ವಿಶ್ವಖ್ಯಾತ ಗಾಯಕರು ಸಂಗೀತ ಸೇವೆ ಮಾಡಿ ಧನ್ಯರಾಗಿದ್ದಾರೆ. ಸಮಿತಿ ಪದಾಧಿಕಾರಿಗಳೂ ಸೇರಿದಂತೆ ದಾನಿಗಳು ರಾಯರ ಸೇವೆಗೆ ಟೊಂಕ ಕಟ್ಟಿ ನಿಂತಿದ್ದಾರೆ.
ಸಕಲ ಸಮುದಾಯದವರನ್ನೂ ಮಠ ಭಕ್ತರೆಂದು ಸ್ವೀಕರಿಸಿದೆ. ಅವರೆಲ್ಲರ ಅಪೇಕ್ಷೆ ಮೇರೆಗೆ ಮನೆ ಮನೆಗೆ ರಾಯರ ಪಾದುಕೆ, ಮೂರ್ತಿಗಳನ್ನು ಕೊಂಡೊಯ್ದು ಪೂಜೆ ಸಲ್ಲಿಸಲಾಗುತ್ತದೆ. ವಿವರಗಳಿಗೆ 76248 77447 ಸಂಪರ್ಕಿಸಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










