ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ತೇವರಚಟ್ನಹಳ್ಳಿಯಲ್ಲಿರುವ ಪೇಸ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ಗುರು ಪೂರ್ಣಿಮೆಯನ್ನು ಭಕ್ತಿಭಾವ, ಸಂಭ್ರಮ ಹಾಗೂ ಸಾಂಸ್ಕೃತಿಕ ವೈಭವದೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಭಾರತೀಯ ಗುರು-ಶಿಷ್ಯ ಪರಂಪರೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವುದು ಹಾಗೂ ಗುರುವಿನ ಬಗ್ಗೆ ಗೌರವ, ಕೃತಜ್ಞತೆ ಮತ್ತು ಜೀವನ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಆಯೋಜಿಸಿದ್ದ ಕಾರ್ಯಕ್ರಮ ವಿದ್ಯಾರ್ಥಿಗಳಲ್ಲಿ ಉತ್ತಮ ಸಂಸ್ಕಾರವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿತು.
ಕಾರ್ಯಕ್ರಮದಲ್ಲಿ ಶಿಕ್ಷಕಿ ಶ್ರೀಮತಿ ಭಾರತಿ ಅವರು ಗುರು ಪೂರ್ಣಿಮೆಯ ಮಹತ್ವವನ್ನು ವಿವರಿಸಿ, “ಜೀವನದ ದಾರಿಯನ್ನು ತೋರಿಸಿ ಅಜ್ಞಾನದ ಕತ್ತಲೆಯನ್ನು ದೂರ ಮಾಡಿ ಜ್ಞಾನದ ಬೆಳಕನ್ನು ನೀಡುವವರೇ ಗುರು” ಎಂದು ಹೇಳಿದರು. ಆಷಾಢ ಪೌರ್ಣಿಮೆಯಂದು ವ್ಯಾಸ ಮಹರ್ಷಿಗಳ ಜನ್ಮಸ್ಮರಣಾರ್ಥ ಗುರು ಪೂರ್ಣಿಮೆಯನ್ನು ಆಚರಿಸಲಾಗುತ್ತದೆ ಎಂದು ತಿಳಿಸಿದ ಅವರು, ಭಾರತ ವಿಶ್ವಕ್ಕೆ ಗುರು-ಶಿಷ್ಯ ಪರಂಪರೆಯನ್ನು ನೀಡಿದ ಪುಣ್ಯಭೂಮಿ ಎಂದರು.
Also read>> ವಿದ್ಯೇಶತೀರ್ಥರ 47ನೇ ಚಾತುರ್ಮಾಸ್ಯ | ಅಥರ್ವಣ ವೇದ ಶೌನಕ ಶಾಖಾ ಪಾರಾಯಣ
“ಗುರು ಬ್ರಹ್ಮಾ, ಗುರು ವಿಷ್ಣುಃ, ಗುರು ದೇವೋ ಮಹೇಶ್ವರಃ” ಎಂಬ ಶ್ಲೋಕವನ್ನು ಉಲ್ಲೇಖಿಸಿದ ಅವರು, ತಾಯಿಯೇ ಮೊದಲ ಗುರು ಎಂಬ ಸಂದೇಶವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. “ಆಚಾರ್ಯ ದೇವೋ ಭವ” ಹಾಗೂ “ಅತಿಥಿ ದೇವೋ ಭವ” ಎಂಬ ಭಾರತೀಯ ಸಂಸ್ಕೃತಿಯ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.
ಗುರು-ಶಿಷ್ಯ ಸಂಬಂಧದ ಮಹತ್ವವನ್ನು ವಿವರಿಸುವ ಸಂದರ್ಭದಲ್ಲಿ ಕನಕದಾಸರ ಪ್ರಸಿದ್ಧ ಬಾಳೆಹಣ್ಣಿನ ಕಥೆಯನ್ನು ಉದಾಹರಿಸಿದ ಅವರು, ಗುರುವಿನ ಮಾರ್ಗದರ್ಶನದ ಮಹತ್ವವನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟರು. “ಮನೆಯೇ ಮೊದಲ ಪಾಠಶಾಲೆ, ತಾಯಿ-ತಂದೆಯರೇ ಮೊದಲ ಗುರುಗಳು” ಎಂಬ ಸಂದೇಶವನ್ನೂ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಪ್ರಾಂಶುಪಾಲ ಎನ್.ಆರ್. ಪವನ್ ಕುಮಾರ್ ಮಾತನಾಡಿ, ಮಕ್ಕಳ ವ್ಯಕ್ತಿತ್ವ ವಿಕಸನ ಹಾಗೂ ಸದೃಢ ಸಮಾಜ ನಿರ್ಮಾಣದಲ್ಲಿ ಗುರುಗಳ ಸೇವೆ ಅಮೂಲ್ಯವಾಗಿದೆ ಎಂದು ಹೇಳಿದರು. ಗುರು ಪರಂಪರೆಯ ಎಲ್ಲ ಮಹನೀಯರಿಗೆ ಕೃತಜ್ಞತೆ ಸಲ್ಲಿಸುವಂತೆ ಅವರು ಕರೆ ನೀಡಿದರು.
ಪ್ರಜ್ಞಾ ಎಜುಕೇಶನ್ ಟ್ರಸ್ಟ್ನ ಆಡಳಿತ ಮಂಡಳಿ ಸದಸ್ಯೆ ಶಾಲಿನಿ ಕಾಂತೇಶ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಲೆಯ ಕೋ-ಆರ್ಡಿನೇಟರ್ ಶುಭ ಜಗದೀಶ್ ಉಪಸ್ಥಿತರಿದ್ದರು.
ಶಾಲೆಯ ಸಂಗೀತ ಶಿಕ್ಷಕಿ ವಿದ್ಯಾ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳು “ಕಲಿಸು ಗುರುವೇ ಕಲಿಸು” ಹಾಗೂ “ಗುರುವೇ ರಾಮ, ಗುರುವೇ ಶ್ಯಾಮ” ಭಕ್ತಿಗೀತೆಗಳನ್ನು ಸಮೂಹವಾಗಿ ಹಾಡಿ ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು.
ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಅಹನಾ ನಿರೂಪಿಸಿದರು. ಶಾಲೆಯ ಶಿಕ್ಷಕ ವೃಂದ ಹಾಗೂ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.
ಗುರು-ಶಿಷ್ಯ ಪರಂಪರೆಯ ಶ್ರೇಷ್ಠತೆ, ಭಾರತೀಯ ಸಂಸ್ಕೃತಿಯ ಮೌಲ್ಯಗಳು ಹಾಗೂ ಗುರುವಿನ ಬಗ್ಗೆ ಗೌರವ ಮತ್ತು ಕೃತಜ್ಞತೆಯ ಭಾವವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವಲ್ಲಿ ಈ ಗುರು ಪೂರ್ಣಿಮೆ ಆಚರಣೆ ಮಹತ್ವದ ಪಾತ್ರ ವಹಿಸಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








