ಕಲ್ಪ ಮೀಡಿಯಾ ಹೌಸ್ | ಹಮೀರ್‌ಪುರ (ಉತ್ತರ ಪ್ರದೇಶ) |
ಹಣದ ದುರಾಸೆಗೆ ಬಿದ್ದ ವ್ಯಕ್ತಿಯೊಬ್ಬ ತನ್ನ ಪತ್ನಿಯ ಹೆಸರಿನಲ್ಲಿದ್ದ ₹44 ಲಕ್ಷ ಜೀವವಿಮೆ ಹಣ ಪಡೆಯಲು ಆಕೆಯನ್ನೇ ಭೀಕರವಾಗಿ ಕೊಲೆ ಮಾಡಿ, ಬಳಿಕ ಅಪಘಾತವೆಂದು ಬಿಂಬಿಸಲು ಯತ್ನಿಸಿದ ಪೈಶಾಚಿಕ ಘಟನೆ ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ನಡೆದಿದೆ.
ಕೊಲೆಯಾದ ಮಹಿಳೆಯನ್ನು ರೀಟಾ ಎಂದು ಗುರುತಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪತಿ ಅಮರ್ ಸಿಂಗ್ ಹಾಗೂ ಆತನ ಮೂವರು ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ.
ಪತ್ನಿ ನಾಪತ್ತೆ ಎಂದು ದೂರು ನೀಡಿದ್ದ ಆರೋಪಿ
ಪತ್ನಿ ಕಾಣೆಯಾಗಿದ್ದಾಳೆ ಎಂದು ಅಮರ್ ಸಿಂಗ್ ಸ್ವತಃ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದ. ಆದರೆ ಆತನ ಹೇಳಿಕೆಗಳಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಪೊಲೀಸರು ಅನುಮಾನಗೊಂಡು ವಿಚಾರಣೆ ನಡೆಸಿದಾಗ ಭೀಕರ ಸತ್ಯ ಬಯಲಾಗಿದೆ.
Also read>> ತಿರುಮಲದಲ್ಲಿ ಮುಡಿ ಕೊಟ್ಟ ಹಾರ್ದಿಕ್ ಪಾಂಡ್ಯ; ಮಹೀಕಾ ಜೊತೆ ಶ್ರೀ ವೆಂಕಟೇಶ್ವರ ದರ್ಶನ
ವಿಚಾರಣೆ ವೇಳೆ ಆರೋಪಿ, ಲಾಲ್‌ಪುರ ಪ್ರದೇಶದ ಬೈತ್ಕಾ ಧಾಮ್ ದೇವಾಲಯದ ಬಳಿ ಪತ್ನಿಯನ್ನು ಕೋಲು ಹಾಗೂ ದೊಣ್ಣೆಗಳಿಂದ ಹೊಡೆದು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಅಪಘಾತದಂತೆ ಬಿಂಬಿಸಲು ಯತ್ನ
ಕೊಲೆ ಮಾಡಿದ ಬಳಿಕ ಪ್ರಕರಣವನ್ನು ರಸ್ತೆ ಅಪಘಾತವೆಂದು ತೋರಿಸಲು ರೀಟಾ ಅವರ ಮೃತದೇಹದ ಮೇಲೆ ಕಾರು ಹರಿಸಿದ್ದು, ಬಳಿಕ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಬೆಂಕಿ ಹಚ್ಚಿ ಸುಡಲು ಯತ್ನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆಯಲ್ಲಿ ಭೀಕರ ಗಾಯಗಳು
ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ರೀಟಾ ಅವರ ದೇಹದ ಮೇಲೆ 12ಕ್ಕೂ ಹೆಚ್ಚು ಗಂಭೀರ ಹೊರಗಾಯಗಳು ಪತ್ತೆಯಾಗಿವೆ. ಮೂತ್ರಪಿಂಡ ಹೊರತುಪಡಿಸಿ ದೇಹದ ಬಹುತೇಕ ಆಂತರಿಕ ಅಂಗಾಂಗಗಳು ತೀವ್ರವಾಗಿ ಜಜ್ಜಲ್ಪಟ್ಟು ಹಾನಿಗೊಳಗಾಗಿದ್ದವು ಎಂದು ವರದಿ ತಿಳಿಸಿದೆ.
₹44 ಲಕ್ಷ ವಿಮೆ ಹಣಕ್ಕಾಗಿ ಸಂಚು
ರೀಟಾ ಅವರ ಮೊದಲ ಪತಿ ಮೃತಪಟ್ಟ ಬಳಿಕ ಅವರು ಕಾನ್ಪುರದಲ್ಲಿ ಹಿಟ್ಟಿನ ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದ ಅಮರ್ ಸಿಂಗ್ ಅವರನ್ನು ಭೇಟಿಯಾಗಿ, ಸುಮಾರು ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದರು. ರೀಟಾಗೆ ಮೊದಲ ಮದುವೆಯಿಂದ ನಾಲ್ವರು ಮಕ್ಕಳಿದ್ದಾರೆ.
ರೀಟಾ ಅವರ ತಂದೆ ಸರ್ವೇಶ್ ಕುಮಾರ್ ನೀಡಿದ ಮಾಹಿತಿಯ ಪ್ರಕಾರ, ಅಮರ್ ಸಿಂಗ್ ಎರಡು ತಿಂಗಳ ಹಿಂದಷ್ಟೇ ಪತ್ನಿಯ ಹೆಸರಿನಲ್ಲಿ ₹44 ಲಕ್ಷ ಜೀವವಿಮೆ ಪಾಲಿಸಿ ಮಾಡಿಸಿದ್ದ. ಇದಕ್ಕಾಗಿ ₹2.60 ಲಕ್ಷ ಪ್ರೀಮಿಯಂ ಪಾವತಿಸಿದ್ದು, ವಿಮೆ ಹಣ ದೊರೆತ ಬಳಿಕ ಆಕೆಯನ್ನು ಕೊಲೆ ಮಾಡುವ ಸಂಚು ರೂಪಿಸಿದ್ದ ಎಂದು ಆರೋಪಿಸಲಾಗಿದೆ.
24 ಗಂಟೆಯಲ್ಲಿ ಪ್ರಕರಣ ಭೇದಿಸಿದ ಪೊಲೀಸರು
ಹಮೀರ್‌ಪುರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅರವಿಂದ್ ಕುಮಾರ್ ವರ್ಮಾ ಮಾತನಾಡಿ, ಆರೋಪಿಗಳು ಸಾಕ್ಷ್ಯ ನಾಶಪಡಿಸಲು ಪ್ರಯತ್ನಿಸಿದ್ದರೂ ವೈಜ್ಞಾನಿಕ ಸಾಕ್ಷ್ಯಗಳ ಆಧಾರದ ಮೇಲೆ ಕೇವಲ 24 ಗಂಟೆಗಳಲ್ಲಿ ಪ್ರಕರಣವನ್ನು ಭೇದಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ತಾಯಿಯನ್ನು ಕಳೆದುಕೊಂಡ ರೀಟಾ ಅವರ ನಾಲ್ವರು ಮಕ್ಕಳು ಪ್ರಸ್ತುತ ಮೈನ್‌ಪುರಿಯಲ್ಲಿ ಅಜ್ಜ-ಅಜ್ಜಿಯ ಆಶ್ರಯದಲ್ಲಿ ಜೀವನ ಸಾಗಿಸುತ್ತಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








