ಕಲ್ಪ ಮೀಡಿಯಾ ಹೌಸ್ | ಫರಿದಾಬಾದ್ (ಹರಿಯಾಣ) |
ಸಾರ್ವಜನಿಕವಾಗಿ ಕ್ಷಮೆ ಕೇಳಬೇಕಾದ ಪರಿಸ್ಥಿತಿ ಬಂದಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಮುಂದಾದ ಯುವಕನೊಬ್ಬ ಶಾಲಾ ಆವರಣದಲ್ಲೇ ಶಿಕ್ಷಕಿಯನ್ನು ಭೀಕರವಾಗಿ ಹತ್ಯೆ (Faridabad Teacher Murder)ಮಾಡಿರುವ ಆಘಾತಕಾರಿ ಘಟನೆ ಹರಿಯಾಣದ (Haryana) ಫರಿದಾಬಾದ್ ಜಿಲ್ಲೆಯ ಸಿಕ್ರೋನಾ ಗ್ರಾಮದಲ್ಲಿ ನಡೆದಿದೆ.
ಸಿಕ್ರೋನಾ ಗ್ರಾಮದ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ 29 ವರ್ಷದ ಸಂಧ್ಯಾ ಅವರು ಬುಧವಾರ ಬೆಳಿಗ್ಗೆ ಎಂದಿನಂತೆ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಶಾಲೆಯ ಗೇಟ್ ಬಳಿ ಕರೆದೊಯ್ದು ಹತ್ಯೆ
ಮಾಹಿತಿಯ ಪ್ರಕಾರ, ಬೆಳಿಗ್ಗೆ ಸುಮಾರು 9.30ರ ವೇಳೆಗೆ ಮುಖವಾಡ ಧರಿಸಿಕೊಂಡು ಶಾಲೆಗೆ ಬಂದ ಯುವಕನೊಬ್ಬ, ತಾನು ಸಂಧ್ಯಾ ಅವರೊಂದಿಗೆ ಮಾತನಾಡಬೇಕು ಎಂದು ಶಾಲಾ ಆಡಳಿತಾಧಿಕಾರಿಯ ಬಳಿ ತಿಳಿಸಿದ್ದಾನೆ.
ಈ ವೇಳೆ ಸಂಧ್ಯಾ ಅವರು ಶಾಲೆಯ ಗೇಟ್ ಬಳಿ ಬಂದಾಗ, ಮುಖವಾಡದ ಹಿಂದೆ ಅಡಗಿದ್ದ ಆರೋಪಿಯ ಕ್ರೌರ್ಯ ಬಯಲಾಗಿದೆ. ಏಕಾಏಕಿ ಆಕೆಯ ಮೇಲೆ ದಾಳಿ ನಡೆಸಿದ ಆತ, ಆಕೆಯ ಕುತ್ತಿಗೆ ಹಿಡಿದು ಎಳೆದಾಡಿದ್ದಾನೆ. ಬಳಿಕ ತನ್ನ ಬಳಿ ತಂದಿದ್ದ ಚಾಕುವಿನಿಂದ ಮುಖ, ಕುತ್ತಿಗೆ ಹಾಗೂ ಎದೆ ಭಾಗಕ್ಕೆ ಮನಬಂದಂತೆ ಇರಿಯಲು ಆರಂಭಿಸಿದ್ದಾನೆ.
ಕೇವಲ 30 ಸೆಕೆಂಡುಗಳ ಅವಧಿಯಲ್ಲಿ 30ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಆರೋಪಿ ಪರಾರಿಯಾಗಲು ಯತ್ನಿಸಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ತಡೆಯಲು ಬಂದವರಿಗೂ ಬೆದರಿಕೆ
ಸಂಧ್ಯಾ ಅವರ ಕಿರುಚಾಟ ಕೇಳಿ ಸ್ಥಳಕ್ಕೆ ಧಾವಿಸಿದ ಶಾಲಾ ಆಡಳಿತಾಧಿಕಾರಿ ದಾಳಿಯನ್ನು ತಡೆಯಲು ಪ್ರಯತ್ನಿಸಿದ್ದಾರೆ. ಆದರೆ ಆರೋಪಿ ಅವರ ಮೇಲೆಯೂ ತಿರುಗಿಬಿದ್ದು ಬೆದರಿಕೆ ಹಾಕಿದ್ದಾನೆ.
ಬಳಿಕ ನೆಲಕ್ಕೆ ಬಿದ್ದಿದ್ದ ಸಂಧ್ಯಾ ಅವರ ಮೇಲೆ ಮತ್ತೆ ದಾಳಿ ನಡೆಸಿದ ಆರೋಪಿ, ಹೊಟ್ಟೆ ಹಾಗೂ ಮುಖದ ಭಾಗಕ್ಕೆ ಹಲವು ಬಾರಿ ಚಾಕುವಿನಿಂದ ಇರಿದಿದ್ದಾನೆ. ನಂತರ ನಂಬರ್ ಪ್ಲೇಟ್ ಇಲ್ಲದ ಬೈಕ್‌ನಲ್ಲಿ ಸ್ಥಳದಿಂದ ಪರಾರಿಯಾಗಿದ್ದಾನೆ.
Also read>> ಭಂಡಾರಕೇರಿ ಮಠದಲ್ಲಿ ಚತುರ್ವೇದ ಪಾರಾಯಣ ಮಹಾಯಜ್ಞ | 10 ವೇದವಿದ್ವಾಂಸರಿಗೆ ಪ್ರಶಸ್ತಿ ಪ್ರದಾನ
ತೀವ್ರವಾಗಿ ಗಾಯಗೊಂಡಿದ್ದ ಸಂಧ್ಯಾ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಎರಡು ಗಂಟೆಯಲ್ಲೇ ಆರೋಪಿ ಬಂಧನ
ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಕೋಟ್ ಗ್ರಾಮದ ನಿವಾಸಿ 21 ವರ್ಷದ ಅಮಿತ್ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ವಿಚಾರಣೆ ವೇಳೆ ಕೊಲೆ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಎರಡು ವರ್ಷಗಳಿಂದ ಕಿರುಕುಳ ನೀಡುತ್ತಿದ್ದ ಆರೋಪಿ
ಪೊಲೀಸರ ಪ್ರಕಾರ, ಅಮಿತ್ ಕಳೆದ ಎರಡು ವರ್ಷಗಳಿಂದ ಸಂಧ್ಯಾ ಅವರನ್ನು ಹಿಂಬಾಲಿಸುತ್ತಿದ್ದ ಹಾಗೂ ಕಿರುಕುಳ ನೀಡುತ್ತಿದ್ದ. ಆರೋಪಿಯ ಕಿರುಕುಳದಿಂದ ಬೇಸತ್ತಿದ್ದ ಸಂಧ್ಯಾ ಇತ್ತೀಚೆಗೆ ಪೊಲೀಸರಿಗೆ ದೂರು ನೀಡಿದ್ದರು.
ಈ ಪ್ರಕರಣದ ಸಂದರ್ಭದಲ್ಲಿ ಅಮಿತ್ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದ. ಆದರೆ, ತನ್ನಿಂದ ಬಹಿರಂಗವಾಗಿ ಕ್ಷಮೆ ಕೇಳಿಸಿದ ಕಾರಣಕ್ಕೆ ಸಂಧ್ಯಾ ಅವರ ಮೇಲೆ ದ್ವೇಷ ಬೆಳೆಸಿಕೊಂಡಿದ್ದ ಆರೋಪಿ ಸೇಡಿನ ಮನೋಭಾವದಿಂದ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಸಿಟಿವಿ ಆಧಾರದಲ್ಲಿ ತನಿಖೆ
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಶಾಲೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಆಧಾರವಾಗಿಟ್ಟುಕೊಂಡು ತನಿಖೆ ಮುಂದುವರಿಸಿದ್ದಾರೆ.
ಶಾಲಾ ಆವರಣದಲ್ಲೇ ನಡೆದ ಈ ಭೀಕರ ಹತ್ಯೆ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಮಹಿಳೆಯರ ಸುರಕ್ಷತೆ ಕುರಿತು ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








