ಕಲ್ಪ ಮೀಡಿಯಾ ಹೌಸ್ | ಉಡುಪಿ |
ಆದರ್ಶ ಕೀರ್ತಿಶೇಷ ಶ್ರೀ ವಿದ್ಯಾಮಾನ್ಯತೀರ್ಥ ಶ್ರೀಪಾದರ ಸತ್ಯತೀರ್ಥ ಪೀಠಾರೋಹಣ ಶತಮಾನೋತ್ಸವದ ಸಂಭ್ರಮ ಹಾಗೂ ಅವರ ಕರಕಮಲ ಸಂಜಾತರಾದ ಶ್ರೀ ವಿದ್ಯೇಶತೀರ್ಥ ಶ್ರೀಪಾದರ 47ನೇ ಚಾತುರ್ಮಾಸ್ಯ (Chaturmasya) ವ್ರತದ ಶುಭಸಂದರ್ಭದಲ್ಲಿ ಉಡುಪಿ (Udupi) ಸಮೀಪದ ಬಾರ್ಕೂರಿನ ಶ್ರೀ ಭಂಡಾರಕೇರಿ ಮಠದಲ್ಲಿ ನಡೆಯುತ್ತಿರುವ ಚತುರ್ವೇದ ಪಾರಾಯಣ ಮಹಾಯಜ್ಞ ವಿಶೇಷ ಗಮನ ಸೆಳೆಯುತ್ತಿದೆ.
ಚಾತುರ್ಮಾಸ್ಯದ ಅಂಗವಾಗಿ ಸಂಕಲ್ಪಿಸಲಾದ ಈ ಮಹಾಯಜ್ಞದಲ್ಲಿ ವಿವಿಧ ವೇದ ಶಾಖೆಗಳ ಪಾರಾಯಣ ಹಾಗೂ ಮಂತ್ರಜಪ ಕಾರ್ಯಕ್ರಮಗಳು ನಡೆಯುತ್ತಿವೆ. ಇದರ ಭಾಗವಾಗಿ ಜುಲೈ 30ರಿಂದ ಆಗಸ್ಟ್ 7ರವರೆಗೆ ಅಥರ್ವಣ ವೇದದ ಶೌನಕ ಶಾಖೆಯ ಪಾರಾಯಣ ಹಾಗೂ ರಾಮ-ಕೃಷ್ಣ ಮಂತ್ರ ಜಪಗಳು ಸಂಪನ್ನಗೊಂಡಿವೆ.
ಈ ಪಾರಾಯಣ ಮತ್ತು ಜಪ ಕಾರ್ಯಕ್ರಮಗಳನ್ನು ಭಕ್ತಿಭಾವದಿಂದ ನೆರವೇರಿಸಿದ ಹತ್ತು ಮಂದಿ ವೇದವಿದ್ವಾಂಸರನ್ನು ಆಗಸ್ಟ್ 7ರಂದು ಸಂಜೆ ನಡೆಯಲಿರುವ ವಿದ್ವತ್ ಸಭೆಯಲ್ಲಿ ಪ್ರಶಸ್ತಿ ಪ್ರದಾನಪೂರ್ವಕವಾಗಿ ಗೌರವಿಸಲಾಗುವುದು.
ಪ್ರಹ್ಲಾದಾಚಾರ್ಯ ಕಾನಡೆ ಅವರಿಗೆ ‘ಅಥರ್ವೋದ್ಘೋಷ ವಾಕ್ಪತಿ’ ಪ್ರಶಸ್ತಿ
ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಸಂಸ್ಕೃತ ಪಾಠಶಾಲೆಯ ವೇದಪಾಠ ಉಪನ್ಯಾಸಕರಾದ ವಿ. ಶ್ರೀ ಪ್ರಹ್ಲಾದಾಚಾರ್ಯ ಕಾನಡೆ ಅವರಿಗೆ ಶ್ರೀ ಭಂಡಾರಕೇರಿ ಮಠದ ಪ್ರತಿಷ್ಠಿತ ‘ಅಥರ್ವೋದ್ಘೋಷ ವಾಕ್ಪತಿ’ ಪ್ರಶಸ್ತಿ ಲಭಿಸಲಿದೆ.
ಅಥರ್ವಣ ವೇದವನ್ನು ಸಮಗ್ರವಾಗಿ ಅಧ್ಯಯನ ಮಾಡಿ, ಅದರ ಜ್ಞಾನವನ್ನು ನೂರಾರು ವಿದ್ಯಾರ್ಥಿಗಳಿಗೆ ಕಂಠಪಾಠ ಹಾಗೂ ಶಾಸ್ತ್ರೀಯ ಕ್ರಮದಲ್ಲಿ ಬೋಧಿಸುತ್ತಿರುವ ಅಪೂರ್ವ ಸಾಧನೆಗಾಗಿ ಪ್ರಹ್ಲಾದಾಚಾರ್ಯ ಕಾನಡೆ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಶ್ರೀ ಭಂಡಾರಕೇರಿ ಮಠದ ಪೀಠಾಧಿಪತಿಗಳಾದ ಶ್ರೀ ವಿದ್ಯೇಶತೀರ್ಥ ಶ್ರೀಪಾದರು ತಿಳಿಸಿದ್ದಾರೆ.
ಪ್ರಶಸ್ತಿಯು ಸನ್ಮಾನ ಪತ್ರ, ಸ್ಮರಣಿಕೆ ಹಾಗೂ ನಗದು ಪುರಸ್ಕಾರ ಒಳಗೊಂಡಿದೆ. ಆಗಸ್ಟ್ 7ರಂದು ಸಂಜೆ 6 ಗಂಟೆಗೆ ಬಾರ್ಕೂರಿನ ಮೂಲ ಮಠದಲ್ಲಿ ನಡೆಯುವ ವಿದ್ವತ್ ಸಭೆಯಲ್ಲಿ ಶ್ರೀ ವಿದ್ಯೇಶತೀರ್ಥ ಶ್ರೀಪಾದರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಅಥರ್ವೋದ್ಘೋಷ ಸುಗ್ರೀವ ಮತ್ತು ಸುವ್ರತ ಪ್ರಶಸ್ತಿಗಳು
ಅಥರ್ವಣ ವೇದದ ಶೌನಕ ಶಾಖೆಯ ಪಾರಾಯಣ ಹಾಗೂ ರಾಮ-ಕೃಷ್ಣ ಮಂತ್ರ ಜಪವನ್ನು ನೆರವೇರಿಸಿದ ಇತರ ವೇದವಿದ್ವಾಂಸರಿಗೂ ಇದೇ ಸಂದರ್ಭದಲ್ಲಿ ಗೌರವ ಸಲ್ಲಿಸಲಾಗುವುದು.
Also Read>> ಕಟೀಲ್ ಅಶೋಕ್ ಪೈ ಕಾಲೇಜಿನ MSc Psychology ವಿಭಾಗಕ್ಕೆ ಶೇ.100 ಫಲಿತಾಂಶ
‘ಅಥರ್ವೋದ್ಘೋಷ ಸುಗ್ರೀವ’ ಪ್ರಶಸ್ತಿಗೆ ಆಯ್ಕೆಯಾದವರು:
- ವಿ. ಶ್ರೀ ಕಿರಣಾಚಾರ್ಯ
- ವಿ. ಶ್ರೀ ದಿನೇಶಾಚಾರ್ಯ
- ವಿ. ಶ್ರೀ ಮುಕುಲಾಚಾರ್ಯ
- ವಿ. ಶ್ರೀ ಸಚಿನ್ ಆಚಾರ್ಯ
- ವಿ. ಶ್ರೀ ಮಲ್ಹಾರ ಆಚಾರ್ಯ
- ವಿ. ಶ್ರೀ ದೇವಿದಾಸಾಚಾರ್ಯ
- ವಿ. ಶ್ರೀ ಪದ್ಮನಾಭಾಚಾರ್ಯ ಜೋಶಿ
‘ಅಥರ್ವೋದ್ಘೋಷ ಸುವ್ರತ’ ಪ್ರಶಸ್ತಿಗೆ ಆಯ್ಕೆಯಾದವರು:
- ವಿ. ಶ್ರೀ ಲಕ್ಷ್ಮೀನಾರಾಯಣ ಭಟ್ಟ
- ವಿ. ಶ್ರೀ ಸುಬ್ರಹ್ಮಣ್ಯ ಸರಳಾಯ
ರಾಜ್ಯ ಹಾಗೂ ಹೊರ ರಾಜ್ಯಗಳ ಈ ವೇದವಿದ್ವಾಂಸರನ್ನು ಅವರ ವೇದಸಾಧನೆ ಮತ್ತು ಪಾರಾಯಣ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಗುತ್ತಿದೆ.
ವಿಶೇಷ ಅತಿಥಿಗಳ ಉಪಸ್ಥಿತಿ
ಆಗಸ್ಟ್ 7ರಂದು ನಡೆಯುವ ಸಮಾರಂಭದಲ್ಲಿ ವಿಶೇಷ ಆತಿಥ್ಯವನ್ನು:
- ಶ್ರೀ ಸೂರ್ಯನಾರಾಯಣ ಉಪಾಧ್ಯಾಯ, ಆನೆಗುಡ್ಡೆ ಶ್ರೀ ವಿನಾಯಕ ದೇವಾಲಯದ ಅರ್ಚಕರು
- ಶ್ರೀ ಶ್ರೀರಮಣ ಉಪಾಧ್ಯಾಯ, ಆನೆಗುಡ್ಡೆ ಶ್ರೀ ವಿನಾಯಕ ದೇವಾಲಯದ ಆಡಳಿತ ಮೊಕ್ತೇಸರರು
ವಹಿಸಲಿದ್ದಾರೆ. ಶ್ರೀ ವಿದ್ಯೇಶತೀರ್ಥ ಶ್ರೀಪಾದರು ಸಮಾರಂಭದ ಸಾನ್ನಿಧ್ಯ ವಹಿಸಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಪ್ರಹ್ಲಾದಾಚಾರ್ಯ ಕಾನಡೆ ಅವರ ವೇದಸಾಧನೆ
ಪುರುಷೋತ್ತಮ ಕಾನಡೆ ಮತ್ತು ಪುಷ್ಪಾ ದಂಪತಿಯ ಪುತ್ರರಾದ ಪ್ರಹ್ಲಾದಾಚಾರ್ಯ ಕಾನಡೆ ಅವರು 1994ರಿಂದ 2003ರವರೆಗೆ ವೇದಮೂರ್ತಿ ಶ್ರೀಧರಾಚಾರ್ಯ ಹಾಗೂ ದಿನಕರ ಜೋಶಿ ಅವರಲ್ಲಿ ಅಥರ್ವಣ ವೇದವನ್ನು ಅಧ್ಯಯನ ಮಾಡಿದ್ದಾರೆ.
ಅಥರ್ವಣ ವೇದದ ಅಧ್ಯಯನ ಹಾಗೂ ಬೋಧನೆಯಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು ಪ್ರಸ್ತುತ ಶ್ರೀ ರವಿಶಂಕರ್ ಗುರೂಜಿ ಅವರ ಆರ್ಟ್ ಆಫ್ ಲಿವಿಂಗ್ ಸಂಸ್ಕೃತ ಪಾಠಶಾಲೆಯಲ್ಲಿ ವೇದಪಾಠ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಅಥರ್ವಣ ವೇದದ ಅಪರೂಪದ ಜ್ಞಾನಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವಲ್ಲಿ ಇವರ ಕೊಡುಗೆ ಗಮನಾರ್ಹವಾಗಿದೆ.
Udupi : ಅಪರೂಪದ ವೇದ ಪರಂಪರೆಯ ಸಂರಕ್ಷಣೆಗೆ ಶ್ರೀಮಠದ ವಿಶೇಷ ಪ್ರಯತ್ನ
ಇತ್ತೀಚಿನ ವರ್ಷಗಳಲ್ಲಿ ಅಥರ್ವಣ ವೇದವನ್ನು ಅಧ್ಯಯನ ಮಾಡುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಈ ಮಹಾವಿದ್ಯೆಯ ಸಾಧಕರನ್ನು ಗುರುತಿಸಿ, ಅವರಿಗೆ ಗೌರವ ಸಲ್ಲಿಸುವ ಕಾರ್ಯವನ್ನು ಶ್ರೀ ಭಂಡಾರಕೇರಿ ಮಠವು ಚಾತುರ್ಮಾಸ್ಯದ ಸಂದರ್ಭದಲ್ಲಿ ಕೈಗೊಂಡಿರುವುದು ವಿಶೇಷವಾಗಿದೆ.
ವೇದಾಧ್ಯಯನ, ಪಾರಾಯಣ ಮತ್ತು ಮಂತ್ರಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಮಹತ್ವದ ಹೆಜ್ಜೆಯಾಗಿದೆ. ಭವಿಷ್ಯದಲ್ಲಿ ಅಥರ್ವಣ ವೇದವನ್ನು ಅಧ್ಯಯನ ಮಾಡಲು ಬಯಸುವ ಯುವಜನರಿಗೆ ಇದು ಪ್ರೇರಣೆಯಾಗಲಿದೆ ಎಂದು ಶ್ರೀಮಠದ ಮೂಲಗಳು ತಿಳಿಸಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








