ಕಲ್ಪ ಮೀಡಿಯಾ ಹೌಸ್ | ಮೈಸೂರು |
ಮೈಸೂರಿನ (Mysuru) ಸೋಸಲೆ ಶ್ರೀ ವ್ಯಾಸರಾಜರ ಮಹಾ ಸಂಸ್ಥಾನ ಮಠದ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಅವರ ದಶಮ ಚಾತುರ್ಮಾಸ್ಯ (Chaturmasya) ಉತ್ಸವ ಕಾರ್ಯಕ್ರಮವು ತಿರುಮಕೂಡಲು ಮಠದಲ್ಲಿ ಆಗಸ್ಟ್ 8 ರಿಂದ ಸೆಪ್ಟೆಂಬರ್ 26 ವರೆಗೆ ಆಯೋಜನೆಗೊಂಡಿದೆ.
ತಿರುಮಕೂಡಲು ಗ್ರಾಮವು ಪವಿತ್ರವಾದ ಕಾವೇರಿ, ಕಪಿಲಾ ಮತ್ತು ಸ್ಫಟಿಕ ಸರೋವರದ ಸಂಗಮ ಕ್ಷೇತ್ರವಾಗಿದ್ದು, ಸೋಸಲೆ ಮಠದ ಶ್ರೀ ಶೇಷಚಂದ್ರಿಕಾಚಾರ್ಯರ ( 271ವರ್ಷಗಳ ಭವ್ಯ ಇತಿಹಾಸ) ಮೂಲ ವೃಂದಾವನ ಸನ್ನಿಧಾನ ಹೊಂದಿದೆ.
Also Read>> ಬಾರಕೂರು | ಭಂಡಾರಕೇರಿ ಶ್ರೀಗಳ ಚಾರ್ತುಮಾಸ್ಯ | ಆ.6ರಂದು ಏನೆಲ್ಲಾ ಕಾರ್ಯಕ್ರಮಗಳು ನಡೆಯಲಿವೆ?
ಸ್ವಾಗತ ಸಮಾರಂಭ
10ನೇ ವರ್ಷದ ವ್ರತಾನುಷ್ಠಾನಕ್ಕಾಗಿ ಆಗಸ್ಟ್ 7ರ ಸಂಜೆ 5ಕ್ಕೆ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಅವರನ್ನು ಶ್ರೀಮಠಕ್ಕೆ ಭವ್ಯವಾಗಿ ಸ್ವಾಗತಿಸಲಾಗುವುದು. ವಿವಿಧ ಭಜನಾ ಮಂಡಳಿಗಳಿಂದ ದಾಸ ಪದ ಸಂಕೀರ್ತನೆ, ಕೋಲಾಟ ವಿದ್ವಾಂಸರಿಂದ ವೇದ ಘೋಷ, ಚಂಡೆ ವಾದನ, ವ್ಯಾಸ ತೀರ್ಥ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಮಂತ್ರಘೋಷ ಆಯೋಜಿಸಲಾಗಿದೆ.
ನಂತರ ಸಂಜೆ 6 ಗಂಟೆಗೆ ಮಠದಲ್ಲಿ ದಶಮ ಚಾತುರ್ಮಾಸ್ಯ ಉದ್ಘಾಟನೆಗೊಳ್ಳಲಿದೆ. ಡಾ . ಗುರುರಾಜ್, ಉದ್ಯಮಿ ನಾಗೇಂದ್ರ, ವಿಧಾನ ಪರಿಷತ್ ಮಾಜಿ ಸದಸ್ಯ ಗೋ. ಮಧುಸೂದನ , ಡಾ. ಎಚ್.ಎಸ್. ರಾಘವೇಂದ್ರ, ಎಚ್.ಎಸ್. ಸುಬ್ಬಣ್ಣ, ಪ್ರಮತಿ ಶಾಲೆ ಫಣಿರಾಜ್, ಡಿ.ಪಿ. ಮಧುಸೂದನ ಆಚಾರ್ಯ ಸೇರಿದಂತೆ ವಿವಿಧ ರಂಗದ ಗಣ್ಯರು ಭಾಗವಹಿಸಲಿದ್ದಾರೆ. ನಂತರ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಅನುಗ್ರಹ ಸಂದೇಶ ನೀಡಲಿದ್ದಾರೆ.
Mysuru – Tirumakudalu : ಉಚಿತ ಆಂಬುಲೆನ್ಸ್ – ವಾರ್ಷಿಕೋತ್ಸವ
ಶ್ರೀ ಮಠದಿಂದ ಕಳೆದ ವರ್ಷ ತಾಲೂಕಿನ ಕುಗ್ರಾಮಗಳ ಜನರ ಆರೋಗ್ಯ ಸೇವೆಗೆ ಆರಂಭಗೊಳಿಸಿದ ವ್ಯಾಸ ಶ್ರೀಷ ಉಚಿತ ಸಂಚಾರಿ ಆರೋಗ್ಯ ಸೇವಾ ಘಟಕ, ಅಂಬುಲೆನ್ಸ್ ಸಾವಿರಾರು ಜನರಿಗೆ ಸ್ವಾಸ್ಥೃ ನೀಡಿದೆ. ವಾಹನಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಶ್ರೀಗಳು 2ನೇ ವರ್ಷದ ಸೇವೆ ವಿಸ್ತರಣೆಗೆ ಅನುಗ್ರಹಿಸಲಿದ್ದಾರೆ.
ಸನಾತನ ವೈದಿಕ ಪರಂಪರೆಯಲ್ಲಿ ಚಾತುರ್ಮಾಸವು ಯತಿಗಳಿಗೆ ಅತ್ಯಂತ ಪವಿತ್ರ ವ್ರತವಾಗಿದೆ. ಜನರಲ್ಲಿ ಭಕ್ತಿ ಮತ್ತು ಶ್ರದ್ಧೆ , ಸಂಸ್ಕಾರ ವೃದ್ಧಿಸಲು, ಸಮಾಜದಲ್ಲಿ ಅಧ್ಯಾತ್ಮಿಕ ಜಾಗೃತಿ ಮೂಡಿಸಲು ನಮಗಿದು ಸಕಾಲ. ನಾಡಿನ ಪ್ರಗತಿಗೂ ಇದು ಪೂರಕ.
-ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ, ಸೋಸಲೆ ಮಠ
ಪ್ರತಿನಿತ್ಯದ ಕಾರ್ಯಕ್ರಮಗಳು
ಚಾತುರ್ಮಾಸ್ಯ ವ್ರತದ ಅಂಗವಾಗಿ ಆ. 8 ರಿಂದ ಸೆಪ್ಟೆಂಬರ್ 26ರವರೆಗೆ ಪ್ರತಿನಿತ್ಯವೂ ಶ್ರೀ ಮಠದಲ್ಲಿ ನಿತ್ಯ ಜ್ಞಾನ ಯಜ್ಞ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ . ಇದರ ಅಂಗವಾಗಿ ಪ್ರತಿದಿನವೂ ಬೆಳಗ್ಗೆ 7ಕ್ಕೆ ಸ್ವಾಮೀಜಿ ಅವರಿಂದ ಮಧ್ವ ಶಾಸ್ತ್ರ ಗ್ರಂಥಗಳ ಪಾಠ , 8.30ಕ್ಕೆ ಸಂಸ್ಥಾನ ಪೂಜೆ, ಬೆಳಗ್ಗೆ 11ಕ್ಕೆ ಪಾದಪೂಜೆ, 11.30ಕ್ಕೆ ವಿದ್ವಾಂಸರಿಂದ ಪ್ರವಚನ, ಮಧ್ಯಾಹ್ನ 2.30ಕ್ಕೆ ಫಲ ಮಂತ್ರಾಕ್ಷತೆ, ಸಂಜೆ 7.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 9ಕ್ಕೆ ಸಂಸ್ಥಾನದ ದೇವರಿಗೆ ತೊಟ್ಟಿಲು ಪೂಜೆ ಸಂಪನ್ನ ಗೊಳ್ಳಲಿದೆ.
ಶ್ರೀ ಮಠದಲ್ಲಿರುವ ಗೋಶಾಲೆಗೆ ಭಕ್ತರು ಗೋಗ್ರಾಸ ಮತ್ತು ಗೋದಾನಗಳನ್ನು ನೀಡುವ ಮೂಲಕ ಗೋಪಾಲಕೃಷ್ಣನ ಸೇವೆಯನ್ನು ಮಾಡಬಹುದು ಎಂದು ಚಾತುರ್ಮಾಸದ ಮುಖ್ಯ ಆಯೋಜಕ ಡಾ.ಡಿ.ಪಿ.ಮಧುಸೂದನ ಆಚಾರ್ಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










