ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಕಲಿ ದಾಖಲೆಗಳು, ಸರ್ಕಾರಿ ಸ್ಟ್ಯಾಂಪ್ ಹಾಗೂ ವಿವಿಧ ಸರ್ಕಾರಿ ಕಚೇರಿಗಳ ಮೊಹರುಗಳನ್ನು ಅಕ್ರಮವಾಗಿ ಸೃಷ್ಟಿಸಿ, ಅವುಗಳನ್ನು ಸರ್ಕಾರಿ ಕಚೇರಿಗಳು ಹಾಗೂ ಬ್ಯಾಂಕ್‌ಗಳಿಗೆ ಸಲ್ಲಿಸುವ ಮೂಲಕ ಸರ್ಕಾರ ಮತ್ತು ಬ್ಯಾಂಕ್‌ಗಳಿಗೆ ವಂಚನೆ (Fraud) ಹಾಗೂ ಅಕ್ರಮ ನಷ್ಟ ಉಂಟುಮಾಡಿದ ಪ್ರಕರಣದಲ್ಲಿ ಆರೋಪಿಗೆ (Shivamogga) ಶಿವಮೊಗ್ಗ ನ್ಯಾಯಾಲಯ 5 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹17 ಸಾವಿರ ದಂಡ ವಿಧಿಸಿದೆ.
ಶಿವಮೊಗ್ಗ ನಗರದ ಎಎನ್‌ಕೆ ರಸ್ತೆಯ ಗೋವಿಂದಪ್ಪ ಕಾಂಪ್ಲೆಕ್ಸ್‌ನಲ್ಲಿರುವ ‘ಇಮೇಜ್ ಟೆಕ್ನಾಲಜೀಸ್’ ಎಂಬ ಕಂಪ್ಯೂಟರ್ ಅಂಗಡಿಯಲ್ಲಿ ಈ ಕೃತ್ಯ ನಡೆದಿರುವುದು ತನಿಖೆಯಿಂದ ಬೆಳಕಿಗೆ ಬಂದಿತ್ತು. ಪ್ರಕರಣದ ಆರೋಪಿಯನ್ನು ವಿಷ್ಣುಭಕ್ತ (39) ಎಂದು ಗುರುತಿಸಲಾಗಿದೆ.
ನಕಲಿ ದಾಖಲೆ, ಸರ್ಕಾರಿ ಮೊಹರು ಸೃಷ್ಟಿಸಿ ವಂಚನೆ
ಆರೋಪಿಯು ಮೋಸದ ಉದ್ದೇಶದಿಂದ ನಕಲಿ ದಾಖಲೆಗಳನ್ನು ಸೃಷ್ಟಿಸುವುದರ ಜೊತೆಗೆ ಸರ್ಕಾರಿ ಸ್ಟ್ಯಾಂಪ್ ಹಾಗೂ ವಿವಿಧ ಸರ್ಕಾರಿ ಕಚೇರಿಗಳ ಮೊಹರುಗಳನ್ನು ಅಕ್ರಮವಾಗಿ ತಯಾರಿಸಿಕೊಂಡಿದ್ದನು. ಬಳಿಕ ಅವುಗಳನ್ನು ಬಳಸಿಕೊಂಡು ಸರ್ಕಾರಿ ಕಚೇರಿಗಳು ಮತ್ತು ಬ್ಯಾಂಕ್‌ಗಳಿಗೆ ದಾಖಲೆಗಳನ್ನು ಸಲ್ಲಿಸಿ ವಂಚನೆ ನಡೆಸಿದ್ದಾನೆ ಎಂದು ಆರೋಪಿಸಲಾಗಿತ್ತು.
ಈ ಮೂಲಕ ಸರ್ಕಾರಕ್ಕೆ ಹಾಗೂ ಬ್ಯಾಂಕ್‌ಗಳಿಗೆ ಅಕ್ರಮ ನಷ್ಟ ಉಂಟುಮಾಡಿದ ಆರೋಪದ ಹಿನ್ನೆಲೆಯಲ್ಲಿ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
Also read>> ಭೀಕರ ಅಪಘಾತ: ಹಾದಿಹೋಕನಿಗೆ ಡಿಕ್ಕಿ ಹೊಡೆದು ಗಾಳಿಗೆ ಹಾರಿಸಿದ ಕಾರು; CCTV ದೃಶ್ಯ ವೈರಲ್
2021ರಲ್ಲಿ ಪ್ರಕರಣ ದಾಖಲು
ಆರೋಪಿಯ ವಿರುದ್ಧ ನೀಡಲಾದ ದೂರಿನ ಆಧಾರದ ಮೇಲೆ ಜಯನಗರ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 21/2021ರಂತೆ ಭಾರತೀಯ ದಂಡ ಸಂಹಿತೆಯ ಕಲಂ 255, 256, 258, 420, 465, 467 ಹಾಗೂ 468ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣದ ತನಿಖೆಯನ್ನು ಶಿವಮೊಗ್ಗದ ಡಿವೈಎಸ್ಪಿ ಪ್ರಶಾಂತ್ ಮುನ್ನೊಳಿ ಅವರು ನಡೆಸಿ, ತನಿಖೆ ಪೂರ್ಣಗೊಳಿಸಿದ ಬಳಿಕ ಆರೋಪಿಯ ವಿರುದ್ಧ ದೋಷಾರೋಪಣ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
5 ವರ್ಷ ಕಠಿಣ ಕಾರಾಗೃಹ ಶಿಕ್ಷೆ
ಪ್ರಕರಣದ ವಿಚಾರಣೆ ಶಿವಮೊಗ್ಗದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆಯಿತು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಶ್ರೀಮತಿ ಮಮತಾ ಬಿ.ಎಸ್. ಅವರು ವಾದ ಮಂಡಿಸಿದ್ದರು.
ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಲಯದ ಮಾನ್ಯ ನ್ಯಾಯಾಧೀಶರಾದ ಯಶವಂತ ಕುಮಾರ್ ಅವರು 2026ರ ಆಗಸ್ಟ್ 12ರಂದು ತೀರ್ಪು ಪ್ರಕಟಿಸಿದ್ದಾರೆ.
ಆರೋಪಿಗೆ 5 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹17,000 ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










