ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಗವಹಿಸಿದ್ದ ಸಭೆ ನಡೆದ ಸ್ಥಳವನ್ನು ಬಿಜೆಪಿ ಹಾಗೂ ಸಂಘ ಪರಿವಾರದ ಕಾರ್ಯಕರ್ತರು ‘ಅಶುದ್ಧವಾಗಿದೆ’ ಎಂದು ಹೇಳಿ ಗಂಗಾಜಲದಿಂದ ಶುದ್ಧೀಕರಿಸಿದ ಘಟನೆಯನ್ನು ಖಂಡಿಸಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಶಿವಪ್ಪ ನಾಯಕ ಪ್ರತಿಮೆ ಬಳಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿ ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡರು, ದೇಶದ ಹಿರಿಯ ರಾಷ್ಟ್ರೀಯ ನಾಯಕರೊಬ್ಬರು ಭಾಗವಹಿಸಿದ್ದ ಸಭೆಯ ಸ್ಥಳವನ್ನು ಜಾತಿಯ ಆಧಾರದ ಮೇಲೆ ಅವಮಾನಿಸಿರುವುದು ಖಂಡನೀಯ. ಇಂತಹ ಘಟನೆ ಸಂವಿಧಾನದ ಸಮಾನತೆ ಹಾಗೂ ಸಾಮಾಜಿಕ ನ್ಯಾಯದ ಮೌಲ್ಯಗಳ ಮೇಲಿನ ನೇರ ದಾಳಿಯಾಗಿದೆ ಎಂದು ಆರೋಪಿಸಿದರು.
Also read>> ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬಿಎಂಎಸ್ ಬೃಹತ್ ಪ್ರತಿಭಟನೆ
ಬಿಜೆಪಿಯ ಜಾತೀಯ ಹಾಗೂ ಸಂಕುಚಿತ ಮನಸ್ಥಿತಿ ಈ ಘಟನೆಯಿಂದ ಬಹಿರಂಗವಾಗಿದೆ. ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವವರು ಇಂತಹ ಕೃತ್ಯಕ್ಕೆ ಕೈ ಹಾಕಿರುವುದು ವಿಷಾದನೀಯ. 75 ವರ್ಷಗಳ ಸ್ವಾತಂತ್ರ್ಯದ ಬಳಿಕವೂ ಇಂತಹ ಘಟನೆಗಳು ನಡೆಯುತ್ತಿರುವುದು ದೇಶಕ್ಕೆ ಅವಮಾನಕರ ಸಂಗತಿಯಾಗಿದೆ ಎಂದು ಕಾಂಗ್ರೆಸ್ ಮುಖಂಡರು ಹೇಳಿದರು.
ಕಾಂಗ್ರೆಸ್ ಪಕ್ಷ ಇಂತಹ ಕೃತ್ಯಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಘಟನೆಯ ವಿರುದ್ಧ ರಾಜ್ಯಾದ್ಯಂತ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕಾರ್ಯಕರ್ತರು ‘ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ’, ‘ಜಾತೀಯತೆಯನ್ನು ಕಿತ್ತೊಗೆಯಿರಿ’, ‘ಸಂವಿಧಾನ ಉಳಿಸಿ’ ಎಂಬ ಘೋಷಣೆಗಳನ್ನು ಕೂಗಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ಜವಳಿ ನಿಗಮದ ಅಧ್ಯಕ್ಷ ಕೆ. ಚೇತನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್. ರಮೇಶ್, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಶ್ವೇತಾ ಬಂಡಿ, ಪ್ರಮುಖರಾದ ಜಿ.ಡಿ. ಮಂಜುನಾಥ್, ರಮೇಶ್ ಶಂಕರಘಟ್ಟ, ಎಸ್.ಟಿ. ಚಂದ್ರಶೇಖರ್, ವಿಜಯಕುಮಾರ್, ವೇದಾ ವಿಜಯಕುಮಾರ್, ಭಾರತಿ ರಾಮಕೃಷ್ಣ, ನೇತ್ರಾವತಿ ಗೌಡ, ಆರೀಫ್, ಪಾಲಾಕ್ಷಿ, ಎಸ್.ಟಿ. ಹಾಲಪ್ಪ, ಕಲೀಂ ಪಾಶ, ಶಿವಕುಮಾರ್, ಹೆಚ್.ಸಿ. ಯೋಗೀಶ್, ರಂಗನಾಥ್, ಮಧುಸೂದನ್ ಸಿ.ಜಿ., ದೇವೇಂದ್ರಪ್ಪ, ಆರ್. ರಾಜಶೇಖರ್, ವಿಶ್ವನಾಥ್ ಕಾಶಿ, ನೇತಾಜಿ, ಶಿವಾನಂದ್, ದೇವಿಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








