ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕಳಂಕದ ಆರೋಪ ಎದುರಿಸುತ್ತಿರುವ ಸಚಿವ ಬಿ. ನಾಗೇಂದ್ರ ಅವರನ್ನು ಸಚಿವ ಸ್ಥಾನದಿಂದ ಪದಚ್ಯುತಿಗೊಳಿಸಬೇಕು ಎಂದು ಆಗ್ರಹಿಸಿ ಭಾರತೀಯ ಜನತಾ ಪಕ್ಷದ ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಯಿತು.
ರಾಜ್ಯ ಬಿಜೆಪಿ ಅಧ್ಯಕ್ಷರ ಕರೆಯ ಮೇರೆಗೆ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್ ಮಾತನಾಡಿ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಚಿವ ಬಿ. ನಾಗೇಂದ್ರ ಅವರ ಮೌಖಿಕ ಆದೇಶದ ಮೇರೆಗೆ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ₹187 ಕೋಟಿ ಅವ್ಯವಹಾರ ನಡೆದಿದೆ ಎಂಬ ಆರೋಪಗಳಿವೆ. ಈ ಪೈಕಿ ₹88 ಕೋಟಿಯನ್ನು ನಾಗೇಂದ್ರ ಅವರು ಸ್ವಂತ ಬಳಕೆಗೆ ಮಾಡಿಕೊಂಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಆರೋಪಿಸಿದರು.
Also read>> ಆಗಸ್ಟ್ 18 | ಬೆಂಗಳೂರು–ಬಂಗಾರಪೇಟೆ ಸೇರಿ 22 ಮೆಮು ರೈಲುಗಳ ಸಂಚಾರ ರದ್ದು
ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿತ್ತು. ಅಲ್ಲದೆ, ಬಿ. ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಇದೀಗ ಡಿ.ಕೆ. ಶಿವಕುಮಾರ್ ಸಂಪುಟದಲ್ಲಿ ಪರಿಶಿಷ್ಟರ ಅನುದಾನ ದುರುಪಯೋಗದ ಆರೋಪ ಎದುರಿಸುತ್ತಿರುವ ನಾಗೇಂದ್ರ ಅವರನ್ನು ಮತ್ತೆ ಸಚಿವರನ್ನಾಗಿ ನೇಮಕ ಮಾಡಿರುವುದು ಯಾವ ನೈತಿಕತೆಯ ಆಧಾರದ ಮೇಲೆ ಎಂದು ಪ್ರಶ್ನಿಸಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ₹187 ಕೋಟಿ ಅನುದಾನವನ್ನು ಸಚಿವ ಬಿ. ನಾಗೇಂದ್ರ ಅವರ ಮೌಖಿಕ ಸೂಚನೆಯ ಮೇರೆಗೆ ಅಧಿಕಾರಿಗಳು ವಿವಿಧ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾರೆ ಎಂದು ನಿಗಮದ ಅಧಿಕಾರಿ ಚಂದ್ರಶೇಖರ್ ಅವರು ಆತ್ಮಹತ್ಯೆಗೂ ಮುನ್ನ ಬರೆದಿದ್ದ ಡೆತ್ ನೋಟ್‌ನಲ್ಲಿ ಉಲ್ಲೇಖಿಸಿದ್ದರು ಎಂದು ಜಗದೀಶ್ ಹೇಳಿದರು. ಮೃತ ಚಂದ್ರಶೇಖರ್ ಅವರ ಕುಟುಂಬಕ್ಕೆ ಸರ್ಕಾರದಿಂದ ದೊರೆಯಬೇಕಾದ ಪರಿಹಾರ ಇನ್ನೂ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಚಿವ ಸ್ಥಾನ ನೀಡದಿದ್ದರೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ವಿವರಗಳನ್ನು ಬಹಿರಂಗಪಡಿಸುವುದಾಗಿ ಬಿ. ನಾಗೇಂದ್ರ ಅವರು ಕಾಂಗ್ರೆಸ್ ಹೈಕಮಾಂಡ್‌ಗೆ ಒತ್ತಡ ಹೇರಿದ್ದಾರೆಯೇ? ಈ ಕಾರಣಕ್ಕೆ ಅವರಿಗೆ ಮತ್ತೆ ಸಚಿವ ಸ್ಥಾನ ನೀಡಲಾಗಿದೆಯೇ ಎಂಬುದನ್ನು ಕಾಂಗ್ರೆಸ್ ಸ್ಪಷ್ಟಪಡಿಸಬೇಕು ಎಂದು ಅವರು ಆಗ್ರಹಿಸಿದರು.
ಈ ಗಂಭೀರ ಪ್ರಕರಣವನ್ನು ಮುಚ್ಚಿಹಾಕುವ ಉದ್ದೇಶದಿಂದಲೇ ನಾಗೇಂದ್ರ ಅವರನ್ನು ಮತ್ತೆ ಸಚಿವರನ್ನಾಗಿ ಮಾಡಲಾಗಿದೆ ಎಂದು ಆರೋಪಿಸಿದ ಅವರು, ಪ್ರಕರಣದ ಸಂಪೂರ್ಣ ತನಿಖೆ ನಡೆಸಿ ಸತ್ಯವನ್ನು ಜನರ ಮುಂದೆ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.
ಅನಿರ್ದಿಷ್ಟಾವಧಿ ಧರಣಿಯಲ್ಲಿ ಆರ್.ಕೆ. ಸಿದ್ಧರಾಮಣ್ಣ, ಎಸ್. ದತ್ತಾತ್ರಿ, ಹರಿಕೃಷ್ಣ, ಮೋಹನ್ ರೆಡ್ಡಿ, ಜ್ಯೋತಿ ಪ್ರಕಾಶ್, ಮಾಲತೇಶ್, ಗಣೇಶ್ ಬಿಳಕಿ, ವಿನ್ಸೆಂಟ್ ರೋಡ್ರಿಗಸ್, ಹರೀಶ್, ಸಂತೋಷ್, ರಶ್ಮಿ ಶ್ರೀನಿವಾಸ್, ಸುರೇಖಾ ಮುರಳೀಧರ, ಚಂದ್ರಶೇಖರ್, ಮಂಜುನಾಥ್, ಶ್ರೀನಾಗ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








