ಕಲ್ಪ ಮೀಡಿಯಾ ಹೌಸ್ | ಶಿರಾಳಕೊಪ್ಪ |
ಶರಣರ ದಾಸೋಹ ಕಲ್ಪನೆಯು ಅತ್ಯಂತ ಶ್ರೇಷ್ಠ ಮತ್ತು ವಿಶಿಷ್ಟವಾದುದು. ದಾಸೋಹ ಎಂದರೆ ಕೇವಲ ದಾನವಲ್ಲ, ಸಮಾಜದಲ್ಲಿ ಸಮಾನತೆ ಮತ್ತು ಪ್ರೀತಿಯನ್ನು ಮೂಡಿಸುವ ಮಾರ್ಗವಾಗಿದೆ ಎಂದು ಶಿಕ್ಷಕ ಪ್ರಶಾಂತ ಕುಬಸದ ಹೇಳಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಶಿರಾಳಕೊಪ್ಪ ಘಟಕದ ವತಿಯಿಂದ ಶರಣೆ ಉಮಾದೇವಿ ವೃಷಭೇಂದ್ರ ಅವರ ನಿವಾಸದಲ್ಲಿ ಏರ್ಪಡಿಸಿದ್ದ ಶ್ರಾವಣ ಮಾಸದ ‘ಶ್ರವಣಾನುಭವ – ನಮ್ಮ ನಡೆ ಶರಣರ ಕಡೆಗೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶರಣರು ತನು, ಮನ ಮತ್ತು ಧನದ ತ್ರಿದಾಸೋಹ ತತ್ವವನ್ನು ಸಮಾಜಕ್ಕೆ ನೀಡಿದ್ದಾರೆ. ಪ್ರಾಮಾಣಿಕವಾಗಿ ಕಾಯಕ ಮಾಡಿ ಬಂದ ಗಳಿಕೆಯಲ್ಲಿ ದಾಸೋಹ ಮಾಡುತ್ತಿದ್ದರು. ತನಗಾಗಿ ಮಾತ್ರ ಬದುಕದೆ, ಸಮಾಜದ ಹಸಿವು ಮತ್ತು ಕಷ್ಟಗಳಿಗೆ ಸ್ಪಂದಿಸುವುದೇ ದಾಸೋಹದ ಮೂಲ ಉದ್ದೇಶವಾಗಿದೆ ಎಂದು ತಿಳಿಸಿದರು.
ಜಾತಿ, ಧರ್ಮ ಮತ್ತು ಲಿಂಗ ಭೇದವಿಲ್ಲದೆ ಎಲ್ಲರಿಗೂ ಸಮಾನವಾಗಿ ಅನ್ನ ಮತ್ತು ಅರಿವು ನೀಡುವುದು ದಾಸೋಹದ ಪರಿಕಲ್ಪನೆಯಾಗಿದೆ. ‘ನನ್ನದು’ ಎಂಬ ಭಾವನೆಯನ್ನು ಬಿಟ್ಟು, ಎಲ್ಲವೂ ಸಮಾಜಕ್ಕೆ ಸೇರಿದ್ದು ಎಂಬ ಮನೋಭಾವ ಬೆಳೆಸುವುದೇ ಶರಣರ ದಾಸೋಹ ತತ್ವದ ಉದ್ದೇಶವಾಗಿದೆ ಎಂದು ಹೇಳಿದರು.
Also read>> ಮಧ್ಯಮ ವರ್ಗದ ಮನೆ ಕನಸಿಗೆ ಹೊಸ ಭರವಸೆ: ಶಿವಮೊಗ್ಗದಲ್ಲಿ ‘ಬ್ರಿಕ್ ಅಂಡ್ ಸ್ಪೇಸ್’ ಶುಭಾರಂಭ
ಧಾರ್ಮಿಕ ಕಾರ್ಯಕ್ರಮಗಳು ನವ ಸಮಾಜ ನಿರ್ಮಾಣಕ್ಕೆ ಪೂರಕ
ಕಾರ್ಯಕ್ರಮವನ್ನು ಉದ್ಘಾಟಿಸಿದ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶರಣ ಶಂಭು ಆರ್.ಕೆ. ಮಾತನಾಡಿ, ಇಂದಿನ ಪೋಷಕರು ಮಕ್ಕಳಿಗೆ ರಾಮಾಯಣ, ಮಹಾಭಾರತ ಮತ್ತು ಭಗವದ್ಗೀತೆಯ ಶ್ಲೋಕಗಳನ್ನು ಕಲಿಸಬೇಕು. ಶಿಕ್ಷಣದ ಜೊತೆಗೆ ಸಂಸ್ಕಾರವನ್ನೂ ನೀಡುವುದು ಅಗತ್ಯ ಎಂದರು.
ರಾಮಾಯಣವು ಕುಟುಂಬದ ಪರಿಕಲ್ಪನೆಯನ್ನು ತಿಳಿಸಿದರೆ, ಮಹಾಭಾರತವು ಸಹೋದರತ್ವ ಹಾಗೂ ಸಂಬಂಧಗಳ ಮಹತ್ವವನ್ನು ತಿಳಿಸುತ್ತದೆ. ಧಾರ್ಮಿಕ ಕಾರ್ಯಕ್ರಮಗಳು ನವ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇಂತಹ ಕಾರ್ಯಕ್ರಮಗಳಲ್ಲಿ ಯುವಜನಾಂಗ ಹೆಚ್ಚಾಗಿ ಭಾಗವಹಿಸಬೇಕು ಎಂದು ತಿಳಿಸಿದರು.
ಮನೆಯೇ ಮೊದಲ ಪಾಠಶಾಲೆ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನ್ಯಾಯವಾದಿ ಶರಣೆ ಉಮಾದೇವಿ ವೃಷಭೇಂದ್ರ ಮಾತನಾಡಿ, “ಮನೆಯೇ ಮೊದಲ ಪಾಠಶಾಲೆ, ಜನನಿಯೇ ಮೊದಲ ಗುರು” ಎಂಬಂತೆ ಬದಲಾವಣೆ ಮೊದಲು ಮನೆಯಿಂದಲೇ ಆರಂಭವಾಗಬೇಕು ಎಂದರು.
ಮಕ್ಕಳಿಗೆ ಮಹಾನ್ ಪುರುಷರ ಕಥೆಗಳು ಮತ್ತು ಶರಣರ ವಚನಗಳನ್ನು ಕಲಿಸಬೇಕು. ಪ್ರತಿದಿನ ವಚನ ಮತ್ತು ಶ್ಲೋಕಗಳನ್ನು ಹೇಳುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಶರಣರ ಕಾಯಕ ತತ್ವ ಮತ್ತು ದಾಸೋಹ ಕಲ್ಪನೆಯು ಇಂದಿನ ಸಮಾಜಕ್ಕೆ ದಾರಿದೀಪಗಳಾಗಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜ್ಯೋತಿ ರಮೇಶ್ ಮಾತನಾಡಿದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಶರಣ ಚಂದ್ರಶೇಖರ್ ಸುರಹೊನ್ನೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬಸವೇಶ್ವರ ಅರ್ಬನ್ ಬ್ಯಾಂಕ್ ಅಧ್ಯಕ್ಷ ನಟರಾಜ್ ಸೂರಣಗಿ, ಪ್ರಭುಲಿಂಗಪ್ಪ ಬಿ., ಶರಣ-ಶರಣೆಯರು ಉಪಸ್ಥಿತರಿದ್ದರು.
ಸಂಗೀತ ಶಿಕ್ಷಕ ಮಲ್ಲಿಕಾರ್ಜುನ ಪ್ರಾರ್ಥಿಸಿದರು. ಅಶೋಕ್ ಸ್ವಾಗತಿಸಿದರು. ಮುರುಗೇಶ್ ಶರಣು ಸಮರ್ಪಣೆ ಮಾಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








