ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲೆಯಲ್ಲಿ ಅನಧಿಕೃತ ಕಸಾಯಿ ಖಾನೆಗಳು ನಡೆಯುತ್ತಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಹಾಗೂ ಗೋರಕ್ಷಕರ ಮೇಲೆ ನಡೆದ ಮಾರಣಾಂತಿಕ ಹಲ್ಲನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಗೋಪಿ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಅನಧಿಕೃತ ಕಸಾಯಿ ಖಾನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಹಿಂದೂ ಮುಖಂಡರ ಮೇಲೆ ಪದೇ ಪದೇ ನಿರ್ಬಂಧ ಹೇರುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಕಾವಾಸಪುರದಲ್ಲಿ ಗೋಹತ್ಯೆ ಆರೋಪ
ಶಿಕಾರಿಪುರ ತಾಲೂಕಿನ ಕಾವಾಸಪುರ ಗ್ರಾಮದಲ್ಲಿ ಪ್ರತಿ ಮನೆಯಲ್ಲೂ ಗೋವಿನ ವಧೆ ನಡೆಯುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಈ ಕುರಿತು ಜಿಲ್ಲಾಡಳಿತಕ್ಕೆ ಮಾಹಿತಿ ಇದ್ದರೂ ಯಾವುದೇ ಪ್ರಕರಣ ದಾಖಲಿಸದೆ ಆಡಳಿತ ಕಣ್ಮುಚ್ಚಿ ಕುಳಿತಿದೆ ಎಂದು ದೂರಿದರು.
ಜಿಲ್ಲೆಯಲ್ಲಿ ನಿರಂತರವಾಗಿ ಅನಧಿಕೃತ ಗೋಹತ್ಯೆ ಮತ್ತು ಗೋಸಾಗಣೆ ನಡೆಯುತ್ತಿದ್ದರೂ ಕಾನೂನು ಪಾಲನೆಗೆ ಅಗತ್ಯ ಕ್ರಮ ಕೈಗೊಳ್ಳದಿರುವುದು ಜಿಲ್ಲಾಡಳಿತದ ವೈಫಲ್ಯ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಪರವಾನಿಗೆ ಇಲ್ಲದೆ ಕಸಾಯಿ ಖಾನೆ ಕಾರ್ಯಾಚರಣೆ ಆರೋಪ
ಶಿಕಾರಿಪುರ ನಗರ ಸೇರಿದಂತೆ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಯಾವುದೇ ಅಧಿಕೃತ ಪರವಾನಿಗೆ ಇಲ್ಲದೆ ಕಸಾಯಿ ಖಾನೆಗಳು ಬಹಿರಂಗವಾಗಿಯೇ ನಡೆಯುತ್ತಿವೆ ಎಂದು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಮುಖಂಡರು ದೂರಿದರು.
ಇಂತಹ ಅಕ್ರಮ ಚಟುವಟಿಕೆಗಳನ್ನು ಪತ್ತೆಹಚ್ಚಿ ತಡೆಯಬೇಕಾದ ಜಿಲ್ಲಾಡಳಿತ, ಸಂಬಂಧಪಟ್ಟ ಆರೋಗ್ಯ ಪರಿವೀಕ್ಷಕರು ಮತ್ತು ಆರೋಗ್ಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಿದರು.
ಶಿಕಾರಿಪುರ ಬಂದ್ ವೇಳೆ ಭಾಷಣಕಾರರಿಗೆ ನಿರ್ಬಂಧ ಆರೋಪ
ಅನಧಿಕೃತ ಕಸಾಯಿ ಖಾನೆಗಳ ವಿರುದ್ಧ ಈ ಹಿಂದೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿ ಶಿಕಾರಿಪುರ ಬಂದ್‌ಗೆ ಕರೆ ನೀಡಲಾಗಿತ್ತು ಎಂದು ಪ್ರತಿಭಟನಾಕಾರರು ತಿಳಿಸಿದರು. ಸಾರ್ವಜನಿಕ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸುವವರ ಬಗ್ಗೆ ಜಿಲ್ಲಾಡಳಿತಕ್ಕೆ ಮುಂಚಿತವಾಗಿಯೇ ಮಾಹಿತಿ ನೀಡಲಾಗಿತ್ತು ಎಂದರು.
ಆದರೆ ಕೊನೆಯ ಕ್ಷಣದಲ್ಲಿ ಭಾಷಣಕಾರರು ನಗರ ಪ್ರವೇಶಿಸದಂತೆ ತಡೆಯಲಾಗಿದೆ ಎಂದು ಆರೋಪಿಸಿದರು. ಹಿಂದೂ ಮುಖಂಡರ ಮೇಲೆ ಪದೇ ಪದೇ ನಿರ್ಬಂಧ ಹೇರುವ ಕ್ರಮ ಸರಿಯಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
Also Read>> ಸಹಕಾರಿ ಬ್ಯಾಂಕ್ ನಿರ್ದೇಶಕರಿಗೆ 3 ವರ್ಷ ಕೂಲಿಂಗ್ ಪಿರಿಯಡ್: ಆರ್‌ಬಿಐ ಆದೇಶ ಹಿಂಪಡೆಯಲು ಆಗ್ರಹ
ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ
ಅನಧಿಕೃತ ಗೋಸಾಗಣೆ ಮತ್ತು ಗೋಮಾಂಸ ಮಾರಾಟದ ಕುರಿತು ಮಾಹಿತಿ ನೀಡಿದರೂ ಕ್ರಮ ಕೈಗೊಳ್ಳದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಅಕ್ರಮ ಗೋಸಾಗಣೆಗೆ ಬಳಸುವ ವಾಹನಗಳನ್ನು ವಶಪಡಿಸಿಕೊಳ್ಳಬೇಕು. ನಿಯಮ ಉಲ್ಲಂಘಿಸುವ ವಾಹನಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ಅಕ್ರಮ ಚಟುವಟಿಕೆ ನಡೆಯುವ ಸ್ಥಳಗಳಲ್ಲಿ ದಾಳಿ ನಡೆಸಿ ಅಲ್ಲಿರುವ ವಾಹನಗಳು, ವಧಾ ಸಾಮಗ್ರಿಗಳು, ಮಾಂಸ ಸೇರಿದಂತೆ ಸಂಬಂಧಿತ ವಸ್ತುಗಳನ್ನು ವಶಕ್ಕೆ ಪಡೆದು ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಅಪರಾಧಿಗಳಿಗೆ ಶಿಕ್ಷೆಯಾಗುವವರೆಗೆ ಪ್ರಕರಣಗಳ ತನಿಖೆ ಮತ್ತು ಕಾನೂನು ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿ ಮುಂದುವರಿಸಬೇಕು ಎಂದು ಹೇಳಿದರು.
ಹಿಂದೂ ಮುಖಂಡರ ಮೇಲಿನ ನಿರ್ಬಂಧ ಖಂಡನೆ
ಇತ್ತೀಚಿನ ದಿನಗಳಲ್ಲಿ ಹಿಂದೂ ಮುಖಂಡರು ಹಾಗೂ ಹಿಂದೂ ಹಿತಾಸಕ್ತಿಗೆ ಸಂಬಂಧಿಸಿದ ಸಭೆ-ಸಮಾರಂಭಗಳ ಮೇಲೆ ನಿರ್ಬಂಧ ಹೇರುವ ಮತ್ತು ನೋಟಿಸ್ ನೀಡುವ ಮೂಲಕ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಹಿಂದೂ ಮುಖಂಡರ ಸಾಂವಿಧಾನಿಕ ಹಕ್ಕುಗಳಿಗೆ ಧಕ್ಕೆ ತರುವ ಕ್ರಮಗಳನ್ನು ಸರ್ಕಾರ ನಿಲ್ಲಿಸಬೇಕು. ಇದೇ ರೀತಿಯ ಕ್ರಮ ಮುಂದುವರಿದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ರಮೇಶ್ ಬಾಬು, ಆನಂದ್ ರಾವ್, ಸುರೇಶ್ ಬಾಬು, ಅಂಕುಶ್ ಸೇರಿದಂತೆ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಪ್ರಮುಖರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 







