ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ತಾಯಿ ಮತ್ತು ಮೂವರು ಮಕ್ಕಳು ರೈಲ್ವೆ ಸೇತುವೆಯಿಂದ (Shivamogga) ಶಿವಮೊಗ್ಗದ ತುಂಗಾ ನದಿಗೆ (Tunga River) ಜಿಗಿದಿದ್ದಾರೆ ಎನ್ನಲಾದ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ಈ ಘಟನೆ ಸಂಬಂಧ ತಾಯಿ ಭವಾನಿ ನೀಡಿರುವ ಹೇಳಿಕೆಯ ಆಧಾರದಲ್ಲಿ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ಮಕ್ಕಳು ರೈಲ್ವೆ ಸೇತುವೆಯ ಮೇಲೆ ಕಾಲು ಜಾರಿ ತುಂಗಾ ನದಿಗೆ ಬಿದ್ದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮಕ್ಕಳನ್ನು ರಕ್ಷಿಸುವ ಪ್ರಯತ್ನದಲ್ಲಿ ತಾನು 11 ತಿಂಗಳ ಮಗುವಿನೊಂದಿಗೆ ನದಿಗೆ ಜಿಗಿದಿದ್ದಾಗಿ ಭವಾನಿ ಹೇಳಿಕೆ ನೀಡಿದ್ದಾರೆ. ನದಿಯಲ್ಲಿ ನೀರಿನ ಸೆಳೆತ ಹೆಚ್ಚಿದ್ದರಿಂದ ಇಬ್ಬರು ಮಕ್ಕಳು ಕೊಚ್ಚಿ ಹೋಗಿದ್ದು, ಈವರೆಗೂ ಅವರ ಸುಳಿವು ಪತ್ತೆಯಾಗಿಲ್ಲ.
ಚಿತ್ರದುರ್ಗದಿಂದ ಶಿವಮೊಗ್ಗಕ್ಕೆ ಆಗಮನ
ಭವಾನಿ ಅವರು ಆ.24ರಂದು ಮಧ್ಯಾಹ್ನ ತಮ್ಮ ಮೂವರು ಮಕ್ಕಳೊಂದಿಗೆ ಚಿತ್ರದುರ್ಗದಿಂದ ಶಿವಮೊಗ್ಗಕ್ಕೆ ಬಂದಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಮಕ್ಕಳನ್ನು ಲಯನ್ ಸಫಾರಿಗೆ ಕರೆದೊಯ್ಯುವ ಉದ್ದೇಶ ಹೊಂದಿದ್ದರು ಎನ್ನಲಾಗಿದೆ.
ಆದರೆ, ಮಕ್ಕಳಿಗೆ ಊಟ ಮಾಡಿಸುವಷ್ಟರಲ್ಲಿ ಸಮಯ ಮೀರಿದ್ದರಿಂದ ಲಯನ್ ಸಫಾರಿಗೆ ತೆರಳಲು ಸಾಧ್ಯವಾಗಿರಲಿಲ್ಲ. ಬಳಿಕ ಮತ್ತೆ ಊರಿಗೆ ಮರಳಲು ಹೊಳೆ ಬಸ್ ನಿಲ್ದಾಣದ ಬಳಿ ಬಸ್ಸಿಗಾಗಿ ಕಾಯುತ್ತಿದ್ದರು ಎಂದು ತಿಳಿದುಬಂದಿದೆ.
Shivamogga : ತುಂಗಾ ನದಿ ನೋಡಲು ರೈಲ್ವೆ ಸೇತುವೆಗೆ ತೆರಳಿದ್ದ ಕುಟುಂಬ
ಬಸ್ಸಿಗಾಗಿ ಕಾಯುತ್ತಿದ್ದ ವೇಳೆ ತುಂಗಾ ನದಿಯಲ್ಲಿ ನೀರನ್ನು ನೋಡಲು ಅರಕೇಶ್ವರ ದೇವಸ್ಥಾನದ ಕಡೆಯಿಂದ ರೈಲ್ವೆ ಸೇತುವೆ ಮೇಲೆ ನಡೆದು ಹೋಗಿದ್ದರು ಎಂದು ಭವಾನಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Also Read>> ವಿಕಸಿತ ಭಾರತಕ್ಕೆ ಯುವಶಕ್ತಿ–ಕ್ರೀಡಾಶಕ್ತಿ ಸಂಯೋಜನೆ: ಕ್ರೀಡೆ ಕೇವಲ ಪದಕಗಳಿಗಲ್ಲ | ಪ್ರಧಾನಿ ಮೋದಿ
ಈ ವೇಳೆ ಮಕ್ಕಳು ಸಾನ್ವಿಕಾ ಮತ್ತು ತಾನ್ವಿಕಾ ರೈಲ್ವೆ ಸೇತುವೆಯ ಮೇಲಿಂದ ಕಾಲು ಜಾರಿ ನದಿಗೆ ಬಿದ್ದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮಕ್ಕಳ ರಕ್ಷಣೆಗೆ ನದಿಗೆ ಜಿಗಿದ ತಾಯಿ
ಇಬ್ಬರು ಮಕ್ಕಳು ನದಿಗೆ ಬಿದ್ದ ತಕ್ಷಣ ಅವರನ್ನು ರಕ್ಷಿಸುವ ಉದ್ದೇಶದಿಂದ, ತನ್ನೊಂದಿಗೆ ಇದ್ದ 11 ತಿಂಗಳ ಮಗು ನಿಶ್ಚಿತೇಜ್‌ನೊಂದಿಗೆ ತಾನೂ ನದಿಗೆ ಜಿಗಿದೆ ಎಂದು ಭವಾನಿ ತಿಳಿಸಿದ್ದಾರೆ.
ಆದರೆ, ನದಿಯಲ್ಲಿ ನೀರಿನ ಸೆಳೆತ ತೀವ್ರವಾಗಿದ್ದರಿಂದ ಸಾನ್ವಿಕಾ ಮತ್ತು ತಾನ್ವಿಕಾ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಸಾರ್ವಜನಿಕರು ಭವಾನಿ ಹಾಗೂ 11 ತಿಂಗಳ ಮಗು ನಿಶ್ಚಿತೇಜ್‌ನನ್ನು ರಕ್ಷಿಸಿದ್ದಾರೆ.
ರಕ್ಷಣೆ ಬಳಿಕ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಭವಾನಿ ಈ ಸಂಬಂಧ ಹೇಳಿಕೆ ನೀಡಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮೂರು ದಿನಗಳ ನಿರಂತರ ಕಾರ್ಯಾಚರಣೆ
ನದಿಗೆ ಬಿದ್ದ ಸಾನ್ವಿಕಾ ಮತ್ತು ತಾನ್ವಿಕಾ ಅವರ ಸುಳಿವು ಇನ್ನೂ ಪತ್ತೆಯಾಗಿಲ್ಲ. ಘಟನೆ ನಡೆದ ದಿನದಿಂದ ಸತತ ಮೂರು ದಿನಗಳ ಕಾಲ ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟ ಕಾರ್ಯಾಚರಣೆ ನಡೆಸಿದ್ದಾರೆ.
ರಬ್ಬರ್ ಬೋಟ್‌ಗಳನ್ನು ಬಳಸಿ ತುಂಗಾ ನದಿಯ ನೀರಿನ ಅಡಿ, ನದಿ ದಂಡೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವ್ಯಾಪಕ ಶೋಧ ಕಾರ್ಯ ನಡೆಸಲಾಗಿದೆ. ಆದರೆ, ಈವರೆಗೂ ಇಬ್ಬರು ಮಕ್ಕಳ ಬಗ್ಗೆ ಯಾವುದೇ ಸುಳಿವು ಲಭ್ಯವಾಗಿಲ್ಲ ಎಂದು ತಿಳಿದುಬಂದಿದೆ.
ತಾಯಿಯ ಹೇಳಿಕೆ ಆಧರಿಸಿ ಪ್ರಕರಣ ದಾಖಲು
ಘಟನೆಗೆ ಸಂಬಂಧಿಸಿದಂತೆ ಭವಾನಿ ನೀಡಿರುವ ಹೇಳಿಕೆಯನ್ನು ಆಧರಿಸಿ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಂದಿನ ತನಿಖೆಯನ್ನು ಪೊಲೀಸರು ಕೈಗೊಂಡಿದ್ದು, ಘಟನೆ ಕುರಿತು ಹೆಚ್ಚಿನ ಮಾಹಿತಿ ಹೊರಬರಬೇಕಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








