ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕಸ್ತೂರಿ ರಂಗನ್ ವರದಿ ಹಾಗೂ ಅರಣ್ಯ ಅಧಿಸೂಚನೆಯಿಂದ ಜಿಲ್ಲೆಯ ಜನರಲ್ಲಿ ಉಂಟಾಗಿರುವ ಆತಂಕವನ್ನು ಶಾಶ್ವತವಾಗಿ ದೂರ ಮಾಡುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ, ಶಾಸಕ ಆರಗ ಜ್ಞಾನೇಂದ್ರ ಆಗ್ರಹಿಸಿದರು.
ಜನರ ನಡುವೆ ಬಂದು ಅವರ ಆತಂಕವನ್ನು ಆಲಿಸಿ ಪರಿಹಾರ ಕಂಡುಕೊಳ್ಳುವ ಪ್ರಯತ್ನವಾಗಿ ಮುಖ್ಯಮಂತ್ರಿ ಜಿಲ್ಲೆಗೆ ಆಗಮಿಸಿರುವುದು ಸ್ವಾಗತಾರ್ಹ. 2009ರಿಂದ ಕಸ್ತೂರಿ ರಂಗನ್ ಹಾಗೂ ಗಾಡ್ಗಿಲ್ ವರದಿಗಳ ಕುರಿತು ಚರ್ಚೆ ನಡೆಯುತ್ತಿದ್ದು, ಈ ವಿಚಾರದಲ್ಲಿ ಪ್ರಾಮಾಣಿಕ ಹಾಗೂ ಸಮಗ್ರ ಚರ್ಚೆ ನಡೆಯಬೇಕಿದೆ ಎಂದು ಅವರು ಹೇಳಿದರು.
ಕಸ್ತೂರಿ ರಂಗನ್ ವರದಿ ಜಾರಿಗೂ ಮುನ್ನ ಕನಿಷ್ಠ ಒಂದು ವರ್ಷ ಕಾಲಾವಕಾಶ ಪಡೆದು ಸಂಪೂರ್ಣ ಸಮೀಕ್ಷೆ ನಡೆಸಬೇಕು. ಶರಾವತಿ ಮುಳುಗಡೆ ಪ್ರದೇಶದ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪರಸ್ಪರ ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿರುವುದರಿಂದ, ಈ ಅವಕಾಶವನ್ನು ಬಳಸಿಕೊಳ್ಳಬೇಕು ಎಂದರು.
ಅರಣ್ಯ ಪ್ರದೇಶದ ವಿಚಾರದಲ್ಲಿ ಜನರಿಗೆ ಹಲವು ಸಮಸ್ಯೆಗಳಿವೆ. ಶವ ಸಂಸ್ಕಾರ ಮಾಡಲು ಸಹ ಜಾಗದ ಕೊರತೆ ಉಂಟಾಗಿದ್ದು, ಅಂತ್ಯಸಂಸ್ಕಾರಕ್ಕೂ ಅರಣ್ಯ ಇಲಾಖೆ ಅಧಿಕಾರಿಗಳಿಂದ ತೊಂದರೆ ಎದುರಾಗುತ್ತಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಒತ್ತಾಯಿಸಿದರು.
ಹೊಸನಗರ, ತೀರ್ಥಹಳ್ಳಿ ಹಾಗೂ ಸಾಗರ ಭಾಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಡಿಕೆ ಬೆಳೆಗಾರರಿದ್ದು, ಅಡಿಕೆ ಮೇಲಿನ ಯಾವುದೇ ನಿರ್ಬಂಧದಿಂದ ರೈತರಿಗೆ ತೊಂದರೆಯಾಗಬಾರದು. ದೇಶದ ಅಡಿಕೆ ಉತ್ಪಾದನೆಯಲ್ಲಿ ಕರ್ನಾಟಕ ಪ್ರಮುಖ ಸ್ಥಾನದಲ್ಲಿದ್ದು, ಅಡಿಕೆ ಬೆಳೆಗಾರರ ಹಿತ ಕಾಪಾಡಬೇಕು. ಗುಟ್ಕಾ ನಿಷೇಧದ ವಿಚಾರದಲ್ಲಿ ಅಡಿಕೆಯನ್ನು ಪ್ರತ್ಯೇಕವಾಗಿ ಪರಿಗಣಿಸಬೇಕು ಎಂದು ಹೇಳಿದರು.
ತೀರ್ಥಹಳ್ಳಿ ಪಟ್ಟಣದ ಕೊಳಚೆ ನೀರು ನೇರವಾಗಿ ತುಂಗಾ ನದಿಗೆ ಸೇರುತ್ತಿರುವುದನ್ನು ತಡೆಯಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಆರಗ ಜ್ಞಾನೇಂದ್ರ ಆಗ್ರಹಿಸಿದರು.
Also read>> ಐಐಟಿ ಬಾಂಬೆ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ: ಸಂಸ್ಥೆ ವಿರುದ್ಧ FIR ದಾಖಲು; ವಿದ್ಯಾರ್ಥಿಗಳ ಭಾರೀ ಪ್ರತಿಭಟನೆ
ಕಸ್ತೂರಿ ರಂಗನ್ ವರದಿ ಜಾರಿಯಾದರೆ ಜನರ ಬದುಕಿಗೆ ಸಂಕಷ್ಟ: ಆರ್.ಎಂ. ಮಂಜುನಾಥ ಗೌಡ
ಕಸ್ತೂರಿ ರಂಗನ್ ವರದಿ ಜಾರಿಯಾದರೆ ಈಗಾಗಲೇ ಬಿಗಿಯಾಗಿರುವ ಅರಣ್ಯ ಕಾನೂನುಗಳು ಮತ್ತಷ್ಟು ಕಠಿಣವಾಗಿ, ಜಿಲ್ಲೆಯ ಜನರ ಬದುಕು ದುಸ್ತರವಾಗಲಿದೆ ಎಂದು ಆರ್.ಎಂ. ಮಂಜುನಾಥ ಗೌಡ ಹೇಳಿದರು.
ಕಸ್ತೂರಿ ರಂಗನ್ ವರದಿ ಜಾರಿಗೆ ಬರುತ್ತದೆ ಎಂಬ ಆತಂಕ ಜಿಲ್ಲೆಯ ಜನರಲ್ಲಿ ಮೂಡಿದೆ. ಈ ಆತಂಕವನ್ನು ಸರ್ಕಾರ ಬಗೆಹರಿಸಬೇಕು. ಅಂತ್ಯಸಂಸ್ಕಾರಕ್ಕೂ ಅರಣ್ಯ ಇಲಾಖೆ ಅಡ್ಡಿಪಡಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವು ವರ್ಷಗಳಿಂದ ಜನರು ಅನುಭವಿಸುತ್ತಿರುವ ಈ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂದರು.
ಅಡಿಕೆ ನಿಷೇಧದ ಯಾವುದೇ ಕ್ರಮ ಕೈಗೊಳ್ಳಬಾರದು. ನಿಕೋಟಿನ್ ಹಾಗೂ ತಂಬಾಕು ಉತ್ಪನ್ನಗಳ ವಿರುದ್ಧ ಕ್ರಮ ಕೈಗೊಳ್ಳಲಿ, ಆದರೆ ಅಡಿಕೆ ಬೆಳೆಗಾರರಿಗೆ ತೊಂದರೆಯಾಗಬಾರದು ಎಂದು ಹೇಳಿದರು.
ಕಸ್ತೂರಿ ರಂಗನ್ ವರದಿ ಜಾರಿಯಾದರೆ ರೈತರ ಬದುಕು, ಜಲಮೂಲಗಳು ಹಾಗೂ ಗ್ರಾಮೀಣ ಪ್ರವಾಸೋದ್ಯಮದ ಮೇಲೂ ಪರಿಣಾಮ ಬೀರುವ ಆತಂಕವಿದೆ. ಹೋಂಸ್ಟೇ ಹಾಗೂ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಹಿನ್ನಡೆಯಾಗಬಹುದು ಎಂದರು.
ರೈತರ ಪರವಾಗಿ ಧೈರ್ಯದಿಂದ ನಿರ್ಧಾರ ಕೈಗೊಂಡು ಹಾಲಿನ ಬೆಲೆಯನ್ನು ಹೆಚ್ಚಿಸಬೇಕು. ಒಂದು ಲಕ್ಷಕ್ಕೂ ಹೆಚ್ಚು ಹಾಲು ಉತ್ಪಾದಕರ ಬದುಕನ್ನು ರಕ್ಷಿಸಲು ಸರ್ಕಾರ ಗಮನ ಹರಿಸಬೇಕು ಎಂದು ಮನವಿ ಮಾಡಿದರು.
1576 ಗ್ರಾಮಗಳ ಮೇಲೆ ಪರಿಣಾಮದ ಆತಂಕ: ಶಾಸಕ ಚನ್ನಬಸಪ್ಪ
ಕಸ್ತೂರಿ ರಂಗನ್ ವರದಿ ಕುರಿತು ಚರ್ಚಿಸಲು ವಿಶೇಷ ಅಧಿವೇಶನ ಕರೆದಿರುವುದು ಮಹತ್ವದ ಬೆಳವಣಿಗೆ ಎಂದು ಶಿವಮೊಗ್ಗ ಶಾಸಕ ಚನ್ನಬಸಪ್ಪ ಹೇಳಿದರು.
ಮಹಾರಾಷ್ಟ್ರದ ನಂತರ ಕರ್ನಾಟಕದಲ್ಲಿ ಅತಿ ಹೆಚ್ಚು ಪ್ರದೇಶಗಳು ಈ ವಿಚಾರಕ್ಕೆ ಸಂಬಂಧಿಸಿದ್ದು, ಜಿಲ್ಲೆಯ 1,576 ಗ್ರಾಮಗಳು ಒಳಗೊಳ್ಳುವ ಸಾಧ್ಯತೆಯ ಹಿನ್ನೆಲೆಯಲ್ಲಿ ರೈತರ ಬದುಕಿನ ಬಗ್ಗೆ ಆತಂಕವಿದೆ. ಮುಖ್ಯಮಂತ್ರಿ ಗಂಭೀರವಾಗಿ ವಿಚಾರವನ್ನು ಪರಿಗಣಿಸಿ ಪರಿಹಾರ ಕಂಡುಕೊಳ್ಳಲು ಮುಂದಾಗಿರುವುದು ಸ್ವಾಗತಾರ್ಹ ಎಂದರು.
1 ರಿಂದ 7ನೇ ಅಧಿಸೂಚನೆಗಳವರೆಗೆ ಪ್ರಕ್ರಿಯೆ ನಡೆದಿದ್ದು, ಆರನೇ ಕರಡು ಅಧಿಸೂಚನೆ ಬೇಡ ಎಂದು ಹೇಳಿದ ಬಳಿಕ ಏಳನೇ ಅಧಿಸೂಚನೆಗೆ ಒಪ್ಪಿಗೆ ನೀಡಬಾರದು ಎಂದು ಅವರು ಮನವಿ ಮಾಡಿದರು.
ಜನರ ಆತಂಕಕ್ಕೆ ಶಾಶ್ವತ ಪರಿಹಾರ ಸಿಗುವ ನಿರೀಕ್ಷೆ: ಶಾರದಾ ಪೂರ್ಯನಾಯ್ಕ
ಜಿಲ್ಲೆಯ ಜನರ ಅಭಿಪ್ರಾಯವನ್ನು ನೇರವಾಗಿ ಪಡೆಯಲು ಮುಖ್ಯಮಂತ್ರಿ ಜಿಲ್ಲೆಗೆ ಆಗಮಿಸಿರುವುದು ಸಂತಸದ ವಿಚಾರ ಎಂದು ಶಾಸಕಿ ಶಾರದಾ ಪೂರ್ಯನಾಯ್ಕ ಹೇಳಿದರು.
ಕಸ್ತೂರಿ ರಂಗನ್ ವರದಿ ವಿಚಾರಕ್ಕೆ ಒಳ್ಳೆಯ ಅಂತ್ಯ ಸಿಗಲಿದೆ ಎಂಬ ವಿಶ್ವಾಸವಿದೆ. ಹಲವು ವರ್ಷಗಳಿಂದ ನಡೆಯುತ್ತಿರುವ ಹೋರಾಟದ ಹಿನ್ನೆಲೆಯಲ್ಲಿ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ ಎಂದರು.
ಮೂರನೇ ತಲೆಮಾರಿನ ಜನರೂ ಈ ವಿಚಾರದಿಂದ ನೆಮ್ಮದಿಯಿಂದ ಬದುಕಲು ಸಾಧ್ಯವಾಗದಂತಹ ಭಯದ ವಾತಾವರಣ ಎದುರಿಸುತ್ತಿದ್ದಾರೆ. ಜಿಲ್ಲೆಯ ಜನರ ಆತಂಕವನ್ನು ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿ ಉತ್ತಮ ತೀರ್ಮಾನ ಕೈಗೊಳ್ಳುತ್ತಾರೆ ಎಂಬ ನಿರೀಕ್ಷೆ ಇದೆ ಎಂದು ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








