ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪಶ್ಚಿಮಘಟ್ಟದ (Western Ghat) ಪರಿಸರ ಸೂಕ್ಷ್ಮ ಪ್ರದೇಶ (ESA) ಕುರಿತಂತೆ ಕಸ್ತೂರಿರಂಗನ್ ವರದಿ (Kasturirangan Report) ಕರಡು ಅಧಿಸೂಚನೆಯಲ್ಲಿ ಉಂಟಾಗಿರುವ ಗೊಂದಲಗಳನ್ನು ನಿವಾರಿಸಿ, ಮಲೆನಾಡಿನ (Malnad News) ರೈತರು ಹಾಗೂ ಗ್ರಾಮೀಣ ಜನರ ಹಿತರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿ ಡಿ.ಎಸ್. ಅರುಣ್ (D.S. Arun) ಸರ್ಕಾರವನ್ನು ಒತ್ತಾಯಿಸಿದರು.
ರಾಜ್ಯ ಸರ್ಕಾರ ಕರೆದಿದ್ದ ವಿಶೇಷ ಅಧಿವೇಶನದಲ್ಲಿ ಕಸ್ತೂರಿರಂಗನ್ ವರದಿ ಹಾಗೂ ಪಶ್ಚಿಮಘಟ್ಟದ ಪರಿಸರ ಸೂಕ್ಷ್ಮ ಪ್ರದೇಶದ ಕುರಿತು ಸುದೀರ್ಘವಾಗಿ ಮಾತನಾಡಿದ ಅವರು, ಕರಡು ಅಧಿಸೂಚನೆಯಲ್ಲಿರುವ ವಿವಿಧ ಲೋಪದೋಷಗಳು ಹಾಗೂ ಮಲೆನಾಡಿನ ಜನರು ಎದುರಿಸಬಹುದಾದ ಸಮಸ್ಯೆಗಳ ಕುರಿತು ಅಂಕಿ-ಅಂಶಗಳ ಸಹಿತ ಸರ್ಕಾರದ ಗಮನ ಸೆಳೆದರು.
20,668 ಚ.ಕಿ.ಮೀ ವ್ಯಾಪ್ತಿಯ ಜನರ ಹಿತರಕ್ಷಣೆ
ಕಸ್ತೂರಿರಂಗನ್ ವರದಿಯಡಿ ಮಲೆನಾಡಿನ ಸುಮಾರು 20,668 ಚದರ ಕಿಲೋಮೀಟರ್ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವಾಗಿ ಗುರುತಿಸುವ ಪ್ರಸ್ತಾವನೆ ಇದೆ. ಈ ವ್ಯಾಪ್ತಿಯಲ್ಲಿ ಸುಮಾರು 1,576 ಹಳ್ಳಿಗಳು ಒಳಗೊಂಡಿದ್ದು, ಲಕ್ಷಾಂತರ ಕೃಷಿಕರು, ಸಾಗುವಳಿದಾರರು ಹಾಗೂ ಗ್ರಾಮೀಣ ಜನರು ವಾಸಿಸುತ್ತಿದ್ದಾರೆ ಎಂದು ಡಿ.ಎಸ್. ಅರುಣ್ ಹೇಳಿದರು.
ಈ ಪ್ರದೇಶದಲ್ಲಿ ಹಲವು ವರ್ಷಗಳಿಂದ ಕೃಷಿ ಮತ್ತು ಸಾಗುವಳಿ ಮಾಡಿಕೊಂಡು ಜೀವನ ನಡೆಸುತ್ತಿರುವ ಜನರ ಹಕ್ಕುಪತ್ರ, ಭೂಮಿಯ ಹಕ್ಕು ಹಾಗೂ ಮೂಲಭೂತ ಹಕ್ಕುಗಳಿಗೆ ಯಾವುದೇ ರೀತಿಯ ಧಕ್ಕೆಯಾಗದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
Kasturirangan Report : ‘ಬಫರ್ ಝೋನ್’ ಗೊಂದಲ ನಿವಾರಣೆಗೆ ಒತ್ತಾಯ
ಪರಿಸರ ಸೂಕ್ಷ್ಮ ಪ್ರದೇಶದ ಸುತ್ತಮುತ್ತಲಿನ ‘ಬಫರ್ ಝೋನ್’ ಕುರಿತು ಮಲೆನಾಡಿನ ಜನರಲ್ಲಿ ಉಂಟಾಗಿರುವ ಗೊಂದಲವನ್ನು ಸರ್ಕಾರ ಸ್ಪಷ್ಟವಾಗಿ ನಿವಾರಿಸಬೇಕು ಎಂದು ಡಿ.ಎಸ್. ಅರುಣ್ ಒತ್ತಾಯಿಸಿದರು.
ESA ವ್ಯಾಪ್ತಿಯ ಗಡಿ, ಬಫರ್ ಝೋನ್‌ನ ಸ್ವರೂಪ, ಅದರ ವ್ಯಾಪ್ತಿಗೆ ಒಳಪಡುವ ಗ್ರಾಮಗಳು ಹಾಗೂ ಕೃಷಿ ಪ್ರದೇಶಗಳ ಕುರಿತು ಜನರಿಗೆ ಸ್ಪಷ್ಟ ಮಾಹಿತಿ ನೀಡಬೇಕು. ಯಾವುದೇ ನಿರ್ಧಾರ ಕೈಗೊಳ್ಳುವ ಮೊದಲು ನೆಲಮಟ್ಟದ ವಾಸ್ತವಾಂಶಗಳನ್ನು ಪರಿಗಣಿಸಿ, ಸ್ಥಳೀಯ ಜನರ ಆತಂಕಗಳಿಗೆ ಪರಿಹಾರ ಒದಗಿಸಬೇಕು ಎಂದು ಅವರು ಹೇಳಿದರು.
ಪ್ರಮುಖ ತಾಂತ್ರಿಕ ಹಾಗೂ ವಾಸ್ತವಿಕ ಬೇಡಿಕೆಗಳು
1 ಎಕರೆ ನಿಯಂತ್ರಿತ ಬಫರ್ ಝೋನ್ (Buffer Zone)
ಪ್ರಸ್ತುತ ಕರಡಿನಲ್ಲಿ ‘ಬಫರ್ ಝೋನ್’ ಬಗ್ಗೆ ಯಾವುದೇ ನಿಖರತೆ ಇಲ್ಲದಿರುವುದರಿಂದ ಕೃಷಿ ಭೂಮಿ ಅನಗತ್ಯವಾಗಿ ಅರಣ್ಯ ನಿಯಂತ್ರಣಕ್ಕೆ ಸಿಲುಕುತ್ತಿದೆ. ಪರಿಸರ ಸೂಕ್ಷ್ಮ ಪ್ರದೇಶ (ESA) ಮತ್ತು ಖಾಸಗಿ ಕೃಷಿ ಭೂಮಿಯ ನಡುವೆ “1 ಎಕರೆ ನಿಯಂತ್ರಿತ ಬಫರ್ ಝೋನ್” ಎಂಬ ನಿರ್ದಿಷ್ಟ ತಾಂತ್ರಿಕ ಚೌಕಟ್ಟನ್ನು (Technical Framework) ತಕ್ಷಣವೇ ನಿಗದಿಪಡಿಸಬೇಕು.
ಜಿಐಎಸ್ ಹಾಗೂ ಜಂಟಿ ಸರ್ವೆ (GIS Layering & Joint Survey)
ಉಪಗ್ರಹ ತಂತ್ರಜ್ಞಾನ (GIS Layering / ಉಪಗ್ರಹ ಮ್ಯಾಪಿಂಗ್), ಡ್ರೋನ್ ಸರ್ವೆ ಹಾಗೂ ಕಂದಾಯ-ಅರಣ್ಯ ಇಲಾಖೆಗಳ ಜಂಟಿ ಕ್ಷೇತ್ರ ಪರಿಶೀಲನೆಯ ಮೂಲಕ ಅರಣ್ಯ, ಕಂದಾಯ ಮತ್ತು ಜನವಸತಿ ವಲಯಗಳ ನಡುವೆ ಸ್ಪಷ್ಟ ಭೌಗೋಳಿಕ ಗಡಿರೇಖೆಯನ್ನು (Delineation) ಅಂತಿಮಗೊಳಿಸಬೇಕು. ಪ್ರಸ್ತುತ ಇರುವ ಸ್ಥಿತಿಯನ್ನು ಆಧರಿಸಿ ‘ಫ್ರೀಜ್’ (Freeze) ಮಾಡಿ ಜನಜೀವನಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು.
ಕೇರಳ ಮಾದರಿಯ ಭೌತಿಕ ಸರ್ವೆ (Physical Survey)
ಕೇರಳ ಸರ್ಕಾರವು ತನ್ನ ರಾಜ್ಯದಲ್ಲಿ ಸುಮಾರು 13,000 ಚ.ಕಿ.ಮೀ ವ್ಯಾಪ್ತಿಯಲ್ಲಿ ಜನವಸತಿ ಮತ್ತು ಕೃಷಿ ಭೂಮಿಯನ್ನು ಪ್ರತ್ಯೇಕಿಸಲು ನಡೆಸಿದ ಪ್ರತ್ಯಕ್ಷ ಭೌತಿಕ ಸರ್ವೆಯ ಮಾದರಿಯನ್ನು ಕರ್ನಾಟಕದಲ್ಲೂ ಅಧ್ಯಯನ ಮಾಡಿ ಜಾರಿಗೆ ತರಬೇಕು.
ಕನ್ನಡ ಅನುವಾದ ಹಾಗೂ ವಿಶೇಷ ಗ್ರಾಮಸಭೆ ಕಡ್ಡಾಯ
ಇಂಗ್ಲಿಷ್‌ನಲ್ಲಿರುವ ಈ ಕರಡು ಅಧಿಸೂಚನೆಯು ಸಾಮಾನ್ಯ ರೈತರಿಗೆ ಅರ್ಥವಾಗುತ್ತಿಲ್ಲ. ಆದ್ದರಿಂದ ತಕ್ಷಣವೇ ಇದನ್ನು ಸಂಪೂರ್ಣವಾಗಿ ಕನ್ನಡಕ್ಕೆ ಅನುವಾದಿಸಿ, ಬಾಧಿತವಾಗುವ ಶಿವಮೊಗ್ಗದ 484 ಗ್ರಾಮಗಳು ಸೇರಿದಂತೆ ಪ್ರತಿಯೊಂದು ಗ್ರಾಮ ಪಂಚಾಯತಿಯಲ್ಲಿ ‘ವಿಶೇಷ ಗ್ರಾಮಸಭೆ’ ಕರೆದು ಸಾರ್ವಜನಿಕರ ಹಾಗೂ ರೈತರ ಅಭಿಪ್ರಾಯ ಕ್ರೋಡೀಕರಿಸಬೇಕು.
ಮಲೆನಾಡಿನ ವಾಸ್ತವ ಪರಿಸ್ಥಿತಿ, ಮೂಲಭೂತ ಸಮಸ್ಯೆಗಳು ಹಾಗೂ ಆತಂಕಗಳು
ಬೃಹತ್ ಭೂಭಾಗಕ್ಕೆ ಕುತ್ತು (20,668 sq km ಮತ್ತು 1,576 ಹಳ್ಳಿಗಳು)
ಕಸ್ತೂರಿರಂಗನ್ ವರದಿಯನ್ವಯ ಕರ್ನಾಟಕದ 20,668 ಚ.ಕಿ.ಮೀ ಬೃಹತ್ ಪ್ರದೇಶ ಮತ್ತು 1,576ಕ್ಕೂ ಹೆಚ್ಚು ಗ್ರಾಮಗಳು ಪರಿಸರ ಸೂಕ್ಷ್ಮ ವಲಯಕ್ಕೆ ಸೇರುತ್ತಿವೆ. ಇದರಲ್ಲಿ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ಉಡುಪಿ, ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಅತಿ ಹೆಚ್ಚು ಭಾಗಗಳು ಸೇರಿವೆ.
ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಅತಿ ಹೆಚ್ಚಿನ ಧಕ್ಕೆ
ಉತ್ತರ ಕನ್ನಡದ ನಂತರ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ ಮತ್ತು ಸಾಗರ ಭಾಗದ 484 ಗ್ರಾಮಗಳು ಹಾಗೂ ಕೃಷಿ ಭೂಮಿ ಈ ಕರಡು ವರದಿಯ ವ್ಯಾಪ್ತಿಗೆ ಬರುತ್ತವೆ. ಅರಣ್ಯ ವಿಭಾಗದ ವಿವಿಧ ವರ್ಗೀಕರಣಗಳಾದ ಮೀಸಲು ಅರಣ್ಯ, ಡೀಮ್ಡ್ ಅರಣ್ಯ, ವನ್ಯಜೀವಿ ವಲಯ ಹಾಗೂ ಮಂಗಗಳ ಕಾಟ ಮತ್ತು ಬೆಳೆ ನಷ್ಟದಿಂದ ರೈತರು ಈಗಾಗಲೇ ತೀವ್ರ ಸಂಕಷ್ಟದಲ್ಲಿದ್ದು, ಈ ಕರಡಿನಿಂದಾಗಿ ಅವರ ಬದುಕು ಸಂಪೂರ್ಣ ಅಸ್ತವ್ಯಸ್ತಗೊಳ್ಳುವ ಭೀತಿ ಎದುರಾಗಿದೆ.
ಮುಳುಗಡೆ ಸಂತ್ರಸ್ತರ ದಶಕಗಳ ಆತಂಕ ಹಾಗೂ ಸಾಗುವಳಿ ಚೀಟಿ/ಹಕ್ಕುಪತ್ರ
ಲಿಂಗನಮಕ್ಕಿ ಸೇರಿದಂತೆ ವಿವಿಧ ಜಲಾಶಯಗಳ ನಿರ್ಮಾಣದಿಂದ ಸಂತ್ರಸ್ತರಾದ ಸಾವಿರಾರು ಕುಟುಂಬಗಳಿಗೆ ದಶಕಗಳು ಕಳೆದರೂ ಇನ್ನೂ ಹಕ್ಕುಪತ್ರ (RTC) ಹಾಗೂ ಸಾಗುವಳಿ ಚೀಟಿ ಸಿಗದೆ ಅನಿಶ್ಚಿತತೆಯಲ್ಲಿ ದಿನ ದೂಡುತ್ತಿದ್ದಾರೆ. ವರದಿಯ ಆತಂಕದಿಂದಾಗಿ ರಸ್ತೆ, ಡಾಂಬರೀಕರಣ, ವಿದ್ಯುತ್ ಸಂಪರ್ಕ, ಕುಡಿಯುವ ನೀರು ಹಾಗೂ ಸಾಗುವಳಿ ಚೀಟಿ ಹೊಂದಿರುವ ರೈತರಿಗೆ ಹಕ್ಕುಪತ್ರ ನೀಡುವ ಪ್ರಕ್ರಿಯೆ ಸ್ಥಗಿತಗೊಂಡಿದ್ದು, ಸರ್ಕಾರ ತಕ್ಷಣವೇ ಈ ಮೂಲಭೂತ ಸೌಕರ್ಯ ಕಾಮಗಾರಿಗಳನ್ನು ಹಾಗೂ ಹಕ್ಕುಪತ್ರ ನೀಡುವ ಪ್ರಕ್ರಿಯೆಯನ್ನು ಪುನರಾರಂಭಿಸಬೇಕು.
ಸೊಪ್ಪಿನ ಬೆಟ್ಟ ಮತ್ತು ರೈತರ ಜೀವನೋಪಾಯ
ಮಲೆನಾಡಿನ ಅಡಿಕೆ ಹಾಗೂ ತೋಟಗಾರಿಕೆ ಕೃಷಿಗೆ ಪ್ರಮುಖ ಆಧಾರವಾಗಿರುವ ‘ಸೊಪ್ಪಿನ ಬೆಟ್ಟ’ ವ್ಯವಸ್ಥೆಯನ್ನೇ ನಂಬಿಕೊಂಡಿರುವ ಸುಮಾರು 10,000 ಕುಟುಂಬಗಳ ಹಿತಾಸಕ್ತಿಯನ್ನು ಸರ್ಕಾರ ಕಡ್ಡಾಯವಾಗಿ ಕಾಯಬೇಕು.
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಹಾಗೂ ವೈಜ್ಞಾನಿಕ ಪರಿಶೀಲನೆ
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ವಿರುದ್ಧ ಸ್ಥಳೀಯವಾಗಿ ದೊಡ್ಡ ಮಟ್ಟದ ಹೋರಾಟ ನಡೆಯುತ್ತಿದ್ದು, ವಿಸ್ತೃತ ಯೋಜನಾ ವರದಿ (DPR) ಇಲ್ಲದೆಯೇ ಅಪಾರ ಪ್ರಮಾಣದ ಹಣ ವೆಚ್ಚವಾಗಿರುವ ಬಗ್ಗೆಯೂ ಸರ್ಕಾರ ಗಮನಹರಿಸಬೇಕು.
Also Read>> ಎರಡು ಬೈಕ್’ಗಳ ಭಾರೀ ಡಿಕ್ಕಿ: ಗಂಭೀರ ಗಾಯಗೊಂಡಿದ್ದ ಉಳ್ಳೂರಿನ ವ್ಯಕ್ತಿ ದಾರುಣ ಸಾವು
ತಾಪಮಾನ ಏರಿಕೆ ಹಾಗೂ ಪರಿಸರ-ಜನಜೀವನದ ಸಮತೋಲನ
ಇತ್ತೀಚೆಗೆ ಮಲೆನಾಡಿನಲ್ಲೂ ತಾಪಮಾನ 38°C ದಾಟುತ್ತಿದ್ದು, ಪಶ್ಚಿಮ ಘಟ್ಟದ ಜೀವ ವೈವಿಧ್ಯತೆಯನ್ನು ಕಾಪಾಡುವುದು ಅಗತ್ಯ. ಆದರೆ ಪರಿಸರ ರಕ್ಷಣೆಯ ನೆಪದಲ್ಲಿ ತಲೆತಲಾಂತರದಿಂದ ವಾಸಿಸುತ್ತಿರುವ ಜನರ ದಿನನಿತ್ಯದ ಜೀವನವನ್ನು ದುಸ್ಥಿತಿಗೆ ತಳ್ಳಬಾರದು.
ಸರ್ವಪಕ್ಷ ನಿಯೋಗದಿಂದ ‘ಲೈವ್’ ಗ್ರೌಂಡ್ ರಿಪೋರ್ಟ್ (Live Visit)
ಪ್ರಸ್ತಾವಿತ ಪ್ರದೇಶಗಳಿಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನೊಳಗೊಂಡ ಸರ್ವಪಕ್ಷ ನಿಯೋಗವು ಸ್ವತಃ ಪ್ರತ್ಯಕ್ಷವಾಗಿ (Live Visit) ಭೇಟಿ ನೀಡಿ, ವಾಸ್ತವ ಭೌಗೋಳಿಕ ಪರಿಸ್ಥಿತಿಯನ್ನು ಪರಿಶೀಲಿಸಬೇಕು.
2013ರ ಮೂಲ ಕರಡು ಅಧಿಸೂಚನೆ ಸಂಪೂರ್ಣ ತಿರಸ್ಕಾರ:
2013ರಿಂದ ಇಲ್ಲಿಯವರೆಗೆ 7 ಬಾರಿ ಕರಡು ಅಧಿಸೂಚನೆ ಬಂದಿದ್ದು, ಈ ಹಿಂದೆ ಸಿದ್ದರಾಮಯ್ಯ, ಬಿ.ಎಸ್. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರಗಳು ಪಕ್ಷಾತೀತವಾಗಿ ಇದನ್ನು ತಿರಸ್ಕರಿಸಿದ್ದವು. ಮಲೆನಾಡಿನ ನೆಲದ ವಾಸ್ತವಕ್ಕೆ ತದ್ವಿರುದ್ಧವಾಗಿರುವ ಈ ಮೂಲ ಕರಡು ಅಧಿಸೂಚನೆಯನ್ನು ರಾಜ್ಯ ಸರ್ಕಾರವು ಸಂಪೂರ್ಣವಾಗಿ ತಿರಸ್ಕರಿಸಬೇಕು.
ಸಂಸದರಾದ ಬಿ.ವೈ. ರಾಘವೇಂದ್ರ ಅವರ ಶ್ರಮ
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಬಿ.ವೈ. ರಾಘವೇಂದ್ರ ಅವರು ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಮಲೆನಾಡಿನ ರೈತರ ಹಾಗೂ ಸಾಗುವಳಿದಾರರ ಪರವಾಗಿ ಸೂಕ್ತ ಮತ್ತು ಶಾಶ್ವತ ಪರಿಹಾರ ಕಂಡುಕೊಳ್ಳಲು ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂದು ಡಿ.ಎಸ್. ಅರುಣ್ ತಿಳಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








