ಕಲ್ಪ ಮೀಡಿಯಾ ಹೌಸ್ | ಚಾಮರಾಜನಗರ |
ಭಾರತೀಯ ಇತಿಹಾಸದ ಕುರಿತು ಆಳವಾದ ಸಂಶೋಧನೆ, ಮೌಲ್ಯಗಳ ಚಿಂತನೆ ಹಾಗೂ ಭಾರತೀಯ ಪರಂಪರೆಯ ನೈಜ ವಿಚಾರಗಳನ್ನು ಸಾಹಿತ್ಯದ ಮೂಲಕ ದಾಖಲಿಸಿದ ವಿಶ್ವದ ಶ್ರೇಷ್ಠ ಸಾಹಿತಿಗಳಲ್ಲಿ ಡಾ. ಎಸ್.ಎಲ್. ಭೈರಪ್ಪ ಅವರು ಪ್ರಮುಖರು. ಆಧುನಿಕ ಯುಗದ ಓದುಗರ ಸಾಹಿತಿಯಾಗಿ ಭೈರಪ್ಪನವರು (Bhyrappa) ಗುರುತಿಸಿಕೊಂಡಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಗೂ ಸಂಸ್ಕೃತಿ ಚಿಂತಕ ಸುರೇಶ್ ಎನ್. ಋಗ್ವೇದಿ ಹೇಳಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಡಾ. ಎಸ್.ಎಲ್. ಭೈರಪ್ಪನವರ ಪುಣ್ಯಸ್ಮರಣೆ ಹಾಗೂ ಸಾಹಿತ್ಯ ಕೊಡುಗೆಗಳ ಕುರಿತ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭೈರಪ್ಪನವರ ಜೀವನ ಮತ್ತು ಸಾಧನೆಗಳು ಎಲ್ಲರಿಗೂ ಮಾದರಿಯಾಗಿವೆ. ಯುವಪೀಳಿಗೆ ಹಾಗೂ ವಿದ್ಯಾರ್ಥಿಗಳು ಅವರ ಸಾಹಿತ್ಯವನ್ನು ಅಧ್ಯಯನ ಮಾಡುವ ಮೂಲಕ ಭಾರತೀಯ ಸಂಸ್ಕೃತಿ, (Indian Culture) ಪರಂಪರೆ ಹಾಗೂ ನೈಜತೆಯ ಕುರಿತ ಚಿಂತನೆಗಳನ್ನು ಆಳವಾಗಿ ಅರಿತುಕೊಳ್ಳಬಹುದು ಎಂದು ಅವರು ಹೇಳಿದರು.
Bhyrappa: 21 ಕಾದಂಬರಿಗಳಲ್ಲಿ ಭಾರತೀಯತೆಯ ಅನಾವರಣ
ಡಾ. ಎಸ್.ಎಲ್. ಭೈರಪ್ಪನವರ 21 ಕಾದಂಬರಿಗಳಲ್ಲಿಯೂ ಭಾರತೀಯ ಸಂಸ್ಕೃತಿ, ಪರಂಪರೆ, ರಾಮಾಯಣ, ಮಹಾಭಾರತ, ಸಾಮಾಜಿಕ ಜೀವನ, ಜೀವನ ಮೌಲ್ಯಗಳು ಹಾಗೂ ಭಾರತೀಯ ತತ್ವಶಾಸ್ತ್ರದ ಕುರಿತು ಆಳವಾದ ಅಧ್ಯಯನ ಮತ್ತು ಸಂಶೋಧನೆಯ ಮೂಲಕ ರೂಪುಗೊಂಡ ಚಿಂತನೆಗಳನ್ನು ಕಾಣಬಹುದು ಎಂದು ಸುರೇಶ್ ಎನ್. ಋಗ್ವೇದಿ ತಿಳಿಸಿದರು.
‘ಪರ್ವ’, ‘ಆವರಣ’, ‘ಮಂದ್ರ’, ‘ಗೃಹಭಂಗ’, ‘ವಂಶವೃಕ್ಷ’, ‘ಸಾರ್ಥ’, ‘ದಾಟು’ ಸೇರಿದಂತೆ ಅವರ ಕೃತಿಗಳು ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಸ್ಥಾನ ಪಡೆದಿವೆ. ಭೈರಪ್ಪನವರ ಕಾದಂಬರಿಗಳು ಬಿಡುಗಡೆಯಾದ ಸಂದರ್ಭದಲ್ಲಿ ಮಾತ್ರವಲ್ಲದೆ, ಬಿಡುಗಡೆಯ ಮುನ್ನವೇ ದಾಖಲೆಯ ಪ್ರಮಾಣದಲ್ಲಿ ಓದುಗರಿಂದ ಖರೀದಿಯಾಗುತ್ತಿರುವುದು ಅವರ ಸಾಹಿತ್ಯದ ಮೇಲಿನ ಅಭಿಮಾನ ಹಾಗೂ ಕುತೂಹಲಕ್ಕೆ ಸಾಕ್ಷಿಯಾಗಿದೆ ಎಂದರು.
Also Read>> ಪೌರಕಾರ್ಮಿಕರ ಸಮವಸ್ತ್ರ ಧರಿಸಿದ ಡಿ.ಕೆ. ಶಿವಕುಮಾರ್!
ಹಲವು ಭಾಷೆಗಳಿಗೆ ಅನುವಾದ
ಭೈರಪ್ಪನವರ ಸಾಹಿತ್ಯ ಹಲವು ಭಾರತೀಯ ಹಾಗೂ ವಿದೇಶಿ ಭಾಷೆಗಳಿಗೆ ಅನುವಾದಗೊಂಡು ವಿಶ್ವದಾದ್ಯಂತ ಓದುಗರನ್ನು ತಲುಪಿದೆ. ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ದಾಖಲೆಯ ಪ್ರಮಾಣದಲ್ಲಿ ಅವರ ಕೃತಿಗಳು ಓದುಗರ ಕೈ ಸೇರುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ ಎಂದು ಋಗ್ವೇದಿ ಹೇಳಿದರು.
ಭೈರಪ್ಪನವರ ಸಾಹಿತ್ಯದ ಕುರಿತು ನಿರಂತರವಾಗಿ ಚರ್ಚೆ, ಸಂವಾದ ಹಾಗೂ ವಿಚಾರ ಸಂಕಿರಣಗಳು ನಡೆಯುತ್ತಿವೆ. ಅವರ ಕೃತಿಗಳಲ್ಲಿರುವ ವಿವಿಧ ಸಾಹಿತ್ಯಿಕ ಹಾಗೂ ಸಾಮಾಜಿಕ ದೃಷ್ಟಿಕೋನಗಳ ಕುರಿತು ಚಿಂತನ-ಮಂಥನ ನಡೆಯುತ್ತಿರುವುದೇ ಅವರ ಸಾಹಿತ್ಯದ ಪ್ರಭಾವಕ್ಕೆ ಸಾಕ್ಷಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಮಹಾಕಾವ್ಯಗಳ ಪಾತ್ರಗಳ ಪರಿಚಯ
ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕ ರವಿಚಂದ್ರನ್ ಪ್ರಸಾದ್ ಅವರು ಡಾ. ಎಸ್.ಎಲ್. ಭೈರಪ್ಪನವರ ಜೀವನ ಹಾಗೂ ಸಾಹಿತ್ಯ ಸಾಧನೆಗಳ ಪರಿಚಯ ಮಾಡಿಕೊಟ್ಟರು.
ಭಾರತೀಯ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತದ ವಿವಿಧ ಪಾತ್ರಗಳನ್ನು ಭೈರಪ್ಪನವರು ತಮ್ಮ ಸಾಹಿತ್ಯದ ಮೂಲಕ ಓದುಗರಿಗೆ ವಿವರವಾಗಿ ಪರಿಚಯಿಸಿದ್ದಾರೆ. ಅವರ ಸಾಹಿತ್ಯದ ಕುರಿತು ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯಕ್ರಮ ಆಯೋಜಿಸಿ ಗೌರವ ಸಲ್ಲಿಸಿರುವುದು ಹೆಮ್ಮೆಯ ಸಂಗತಿ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಶಿವಲಿಂಗಮೂರ್ತಿ, ಬಿ.ಕೆ. ಆರಾಧ್ಯ, ಪದ್ಮ ಪುರುಷೋತ್ತಮ, ಕಾಗಲವಾಡಿ ರಂಗಸ್ವಾಮಿ, ನಾಗೇಶ್, ಶಿಕ್ಷಕಿ ಮಾಲಿನಿ, ಆಲೂರು ಮರಿಸ್ವಾಮಿ ಹಾಗೂ ಶ್ರೀಮತಿ ಆರತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











