ಕಲ್ಪ ಮೀಡಿಯಾ ಹೌಸ್ | ಹಾವೇರಿ/ಹುಬ್ಬಳ್ಳಿ |
ಉತ್ತರಾದಿ ಮಠದ (Uttaradi Matha) ಶ್ರೀ ಸತ್ಯಾತ್ಮ ತೀರ್ಥರು ಪ್ರಯಾಣಿಸುತ್ತಿದ್ದ ಕಾರು ಹಾವೇರಿ (Haveri) ಬಳಿಯಲ್ಲಿ ನಿನ್ನೆ ರಾತ್ರಿ ಅಪಘಾತಕ್ಕೀಡಾಗಿದ್ದು, ಸ್ವಾಮಿಗಳು ಸೇರಿದಂತೆ ಮೂವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. (Hubli) ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಅವರು ಪ್ರಯಾಣಿಸುತ್ತಿದ್ದ ಫಾರ್ಚುನರ್ ಕಾರು ಡಿವೈಡರ್’ಗೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾದ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ತಿಮ್ಮಾಪುರ ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ನಡೆದಿದೆ.
ಬೆಂಗಳೂರಿನ ಬಸವನಗುಡಿಯ ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಅವರು ಧಾರವಾಡದಿಂದ ಸವಣೂರಿನ ಸತ್ಯಬೋಧ ಮಠಕ್ಕೆ ತೆರಳುತ್ತಿದ್ದರು. ಬೆಳಗಿನ ಜಾವ ತಿಮ್ಮಾಪುರ ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಕಾರು ಸಂಚರಿಸುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಡೆಗೋಡೆಗೆ ಡಿಕ್ಕಿ ಹೊಡೆದಿದೆ.
ಅಪಘಾತಕ್ಕೆ ಕಾರಣವೇನು?
ಉತ್ತರಾದಿ ಮಠದ ಅಧಿಕೃತ ಮಾಹಿತಿಯಂತೆ ಹೆದ್ದಾರಿಯಲ್ಲಿ ವಾಹನ ವೇಗವಾಗಿ ಚಲಿಸುತ್ತಿದ್ದ ಸಂದರ್ಭದಲ್ಲಿ ನಾಯಿಯೊಂದು ಏಕಾಏಕಿ ಕಾರಿಗೆ ಅಡ್ಡ ಬಂದಿದೆ. ನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಯತ್ನದಲ್ಲಿ ನಿಯಂತ್ರಣ ತಪ್ಪಿದ ಕಾರು ತಡೆಗೋಡೆಗೆ ಡಿಕ್ಕಿ ಹೊಡೆದಿದೆ ಎಂದು ಸ್ಪಷ್ಟನೆ ನೀಡಲಾಗಿದೆ.
ಡಿಕ್ಕಿಯ ರಭಸಕ್ಕೆ ಕಾರು ಹಾನಿಗೊಳಗಾಗಿದ್ದು, ವಾಹನದಲ್ಲಿದ್ದ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಸೇರಿದಂತೆ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯರು ಹಾಗೂ ಸಂಬಂಧಪಟ್ಟ ಸಿಬ್ಬಂದಿ ನೆರವಿಗೆ ಧಾವಿಸಿದ್ದಾರೆ.
ಗಾಯಗೊಂಡವರನ್ನು ಕೂಡಲೇ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸ್ವಾಮೀಜಿ ಸೇರಿದಂತೆ ಗಾಯಾಳುಗಳಿಗೆ ಅಗತ್ಯ ವೈದ್ಯಕೀಯ ಚಿಕಿತ್ಸೆ ನೀಡಲಾಗಿದ್ದು, ಸದ್ಯ ಯಾವುದೇ ಗಂಭೀರ ಅಪಾಯವಿಲ್ಲ ಎಂದು ತಿಳಿದುಬಂದಿದೆ.
Hubli : ಸ್ವತಃ ಶ್ರೀಗಳು ಹೇಳಿದ್ದೇನು?
ಇನ್ನು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮಠಕ್ಕೆ ಹೊರಡುವ ವೇಳೆ ಮಾತನಾಡಿರುವ ಶ್ರೀ ಸತ್ಯಾತ್ಮತೀರ್ಥರು, ಸೀಮೋಲ್ಲಂಘನ ಮಾಡಿ ಬರುವಾಗ ಸಣ್ಣ ಅಪಘಾತ ಆಗಿದೆ. ನಮ್ಮ ಗುರುಗಳು ಮೂಲರಾಮರ ಹಾಗೂ ವೇದವ್ಯಾಸರ ದಯೆಯಿಂದ ಯಾವುದೇ ಅನಾಹುತ ಆಗಿಲ್ಲ. ಎಲ್ಲವೂ ವಾಸಿಯಾಗಿದೆ. ಯಾವುದೇ ಚಿಂತಾಜನಕವಾದ ಪರಿಸ್ಥಿತಿಯಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಕೆಲವು ದಿನಗಳ ಕಾಲ ವಿಶ್ರಾಂತಿ ಹೇಳಿದ್ದಾರೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ , ಎಲ್ಲರೂ ದೇವರಲ್ಲಿ ಪ್ರಾರ್ಥಿಸಿ ಎಂದು ತಿಳಿಸಿದ್ದಾರೆ.
ಚಿಕಿತ್ಸೆ ಬಳಿಕ ಹುಬ್ಬಳ್ಳಿ ಮಠಕ್ಕೆ ಶ್ರೀಗಳು
ಇನ್ನು, ಚಿಕಿತ್ಸೆ ಬಳಿಕ ಹುಬ್ಬಳ್ಳಿಯಲ್ಲಿನ ಮಠಕ್ಕೆ ಸತ್ಯಾತ್ಮ ಶ್ರೀಗಳು ತೆರಳಿದ್ದು, ಆಶ್ರಮ ಧರ್ಮದಂತೆ ಸಂಸ್ಥಾನ ಪೂಜೆಯಲ್ಲಿ ತೊಡಗಿದ್ದಾರೆ. ವೈದ್ಯರು ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆಯಲು ಸಲಹೆ ನೀಡಿರುವ ಹಿನ್ನೆಲೆಯಲ್ಲಿ ಇನ್ನೂ ಕೆಲವು ದಿನಗಳ ಕಾಲ ಸ್ವಾಮಿಗಳು ಹುಬ್ಬಳ್ಳಿಯಲ್ಲೇ ವಿಶ್ರಾಂತಿ ಪಡೆಯಲಿದ್ದಾರೆ ಎಂದು ಶ್ರೀಮಠ ತಿಳಿಸಿದೆ.
ಹುಬ್ಬಳ್ಳಿಗೆ ಮಂತ್ರಾಲಯ ಶ್ರೀಗಳ ದೌಡು
ಇನ್ನು, ಘಟನೆ ವಿಚಾರ ತಿಳಿದ ಹಿನ್ನೆಲೆಯಲ್ಲಿ ಇಂದಿನ ಪೂಜಾ ಕೈಂಕರ್ಯಗಳನ್ನು ಪೂರೈಸಿದ ಮಂತ್ರಾಲಯ ಮಠದ ಶ್ರೀ ಸುಬುಧೇಂದ್ರ ತೀರ್ಥರು ಹುಬ್ಬಳ್ಳಿಯತ್ತ ಪ್ರಯಾಣ ಬೆಳೆಸಿದ್ದಾರೆ.
ಇಂದು ಸಂಜೆ ವೇಳೆಗೆ ಹುಬ್ಬಳ್ಳಿ ತಲುಪಿ, ಸತ್ಯಾತ್ಮ ಶ್ರೀಗಳನ್ನು ಭೇಟಿಯಾಗಿ ಕುಶಲೋಪರಿ ವಿಚಾರಿಸಲಿದ್ದಾರೆ.
ವದಂತಿಗಳಗೆ ಕಿವಿಗೊಡಬೇಡಿ
ಇನ್ನು, ಸತ್ಯಾತ್ಮ ತೀರ್ಥರ ಕಾರು ಅಪಘಾತ ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಹಲವು ರೀತಿಯ ಊಹಾಪೋಹಗಳನ್ನು ಹರಡಿಸಿ, ಸ್ವಾಸ್ಥ್ಯ ಕಡಿಸುವ ಕೃತ್ಯಗಳನ್ನು ಮಾಡಲಾಗುತ್ತಿದೆ.
ಶ್ರೀಗಳ ಕಾರು ಅಪಘಾತದ ಹಿಂದೆ ಸಂಚು ಇರುವಂತಿದೆ, ಈ ಕುರಿತಂತೆ ತನಿಖೆ ನಡೆದು, ಸತ್ಯ ಹೊರಬರಬೇಕು ಎಂಬ ಪೋಸ್ಟ್’ಗಳನ್ನು ಹಾಕುವ ಮೂಲಕ ಸ್ವಾಸ್ಥ್ಯ ಕೆಡಿಸುವ, ತಮ್ಮ ಬೇಳೆ ಬೇಯಿಸಿಕೊಳ್ಳುವ ಕೃತ್ಯಗಳನ್ನು ಕೆಲವು ಕಿಡಿಗೇಡಿಗಳು ಮಾಡುತ್ತಿದ್ದಾರೆ.
ನಾಯಿ ಅಡ್ಡ ಬಂದಿದ್ದರಿಂದಾಗಿ ಅಪಘಾತ ಸಂಭವಿಸಿದೆ ಎಂದು ಶ್ರೀಮಠ ಸ್ಪಷ್ಟನೆ ನೀಡಿದೆ. ಈ ಹಿನ್ನೆಲೆಯಲ್ಲಿ ಕಿಡಿಗೇಡಿಗಳ ಊಹಾಪೋಹಗಳಿಗೆ ಮಠದ ಭಕ್ತರು ಕಿವಿಗೊಡಬಾರದು ಎಂದು ಕಲ್ಪ ಮೀಡಿಯಾ ಹೌಸ್ ಮನವಿ ಮಾಡುತ್ತದೆ. ಶ್ರೀ ಮಠವೂ ಸಹ ಈ ಕುರಿತಂತೆ ಮನವಿ ಮಾಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











