ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರೈಲ್ವೆ ನಿಲ್ದಾಣದಿಂದ ಪ್ರಯಾಣಿಸುವ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕಲ್ಪಿಸಿರುವ (Prepaid Auto) ಪ್ರೀ-ಪೇಯ್ಡ್ ಆಟೋ ಸೌಲಭ್ಯವಿದ್ದರೂ, ಕೆಲವು ಆಟೋ ಚಾಲಕರು ನಿಗದಿತ ದರಕ್ಕಿಂತ ಹೆಚ್ಚುವರಿ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ದೂರುಗಳ ಹಿನ್ನೆಲೆಯಲ್ಲಿ (Shivamogga) ಶಿವಮೊಗ್ಗ ಸಂಚಾರ ಪೊಲೀಸರು ಬುಧವಾರ ಬೆಳಗಿನ ಜಾವ ದಿಢೀರ್ ಕಾರ್ಯಾಚರಣೆ ನಡೆಸಿದರು.
ಸಂಚಾರ ಪೊಲೀಸ್ ನಿರೀಕ್ಷಕ ದೇವರಾಜ್ ಟಿ.ವಿ. ನೇತೃತ್ವದಲ್ಲಿ 20ಕ್ಕೂ ಹೆಚ್ಚು ಸಿಬ್ಬಂದಿ ಬೆಳಗಿನ ಜಾವ ಸುಮಾರು 4.30ಕ್ಕೆ ಶಿವಮೊಗ್ಗ ಕೇಂದ್ರ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಅಲ್ಲಿದ್ದ ಆಟೋಗಳನ್ನು ಪರಿಶೀಲಿಸಿದರು. ಪ್ರೀ-ಪೇಯ್ಡ್ ಕೌಂಟರ್ನಿಂದ ಟಿಕೆಟ್ ಪಡೆದು ಪ್ರಯಾಣಿಸುವ ಪ್ರಯಾಣಿಕರಿಂದ ಟಿಕೆಟ್ನಲ್ಲಿ ನಮೂದಿಸಿರುವ ನಿಗದಿತ ದರಕ್ಕಿಂತ ಹೆಚ್ಚುವರಿ ಹಣ ಪಡೆಯುತ್ತಿರುವ ಬಗ್ಗೆ ಪೊಲೀಸರು ಚಾಲಕರಿಗೆ ಎಚ್ಚರಿಕೆ ನೀಡಿದರು.
ರೈಲ್ವೆ ನಿಲ್ದಾಣದಲ್ಲಿ ಪ್ರೀ-ಪೇಯ್ಡ್ ಆಟೋ ವ್ಯವಸ್ಥೆ ಇದ್ದರೂ ಕೆಲವು ಚಾಲಕರು ಪ್ರಯಾಣಿಕರಿಗೆ ಹೆಚ್ಚುವರಿ ಹಣ ನೀಡುವಂತೆ ಒತ್ತಾಯಿಸುತ್ತಿದ್ದಾರೆ ಎಂಬ ದೂರುಗಳು ಪೊಲೀಸರಿಗೆ ಬಂದಿದ್ದವು. ಅದರಂತೆ ಸ್ಥಳಕ್ಕೆ ತೆರಳಿದ ಪೊಲೀಸರು ಆಟೋ ಚಾಲಕರಿಗೆ ನಿಯಮಗಳ ಕುರಿತು ಸ್ಪಷ್ಟ ಸೂಚನೆ ನೀಡಿದರು. ಪ್ರಯಾಣಿಕರು ಪ್ರೀ-ಪೇಯ್ಡ್ ಕೌಂಟರ್ನಲ್ಲಿ ಟಿಕೆಟ್ ಪಡೆದು, ಅದರಲ್ಲಿ ನಿಗದಿಪಡಿಸಿರುವ ದರದಲ್ಲಿಯೇ ಪ್ರಯಾಣಿಸಬೇಕು ಎಂದು ತಿಳಿಸಿದರು.
20 ನಿಮಿಷದಲ್ಲಿ 115 ಪ್ರಯಾಣಿಕರಿಂದ ಪ್ರೀ-ಪೇಯ್ಡ್ ಸೇವೆ
ಪೊಲೀಸರ ಜಾಗೃತಿ ಕಾರ್ಯಾಚರಣೆಯ ಪರಿಣಾಮ ರೈಲ್ವೆ ನಿಲ್ದಾಣದಲ್ಲಿ ಕೆಲವೇ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಪ್ರೀ-ಪೇಯ್ಡ್ ಆಟೋ ಸೇವೆಯನ್ನು ಬಳಸಿಕೊಂಡರು. ಸುಮಾರು 20 ನಿಮಿಷಗಳ ಅವಧಿಯಲ್ಲಿ 115 ಪ್ರಯಾಣಿಕರು ಪ್ರೀ-ಪೇಯ್ಡ್ ಆಟೋ ಸೌಲಭ್ಯ ಪಡೆದುಕೊಂಡರು ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
Also Read>> MRPLನಲ್ಲಿ ಭಾರೀ ಸ್ಫೋಟದ ಸದ್ದು! ಜೋಕಟ್ಟೆ–ಸುರತ್ಕಲ್ವರೆಗೆ ಕಂಪನ | ಮನೆಗಳ ಗೋಡೆಗೆ ಬಿರುಕು
ಬೆಂಗಳೂರು–ತಾಳಗುಪ್ಪ ರೈಲಿನಲ್ಲಿ ಆಗಮಿಸಿದ ಪ್ರಯಾಣಿಕರ ಪೈಕಿ ಒಟ್ಟು 112 ಮಂದಿ ಪ್ರೀ-ಪೇಯ್ಡ್ ಆಟೋ ಟಿಕೆಟ್ ಪಡೆದು ಪ್ರಯಾಣಿಸಿರುವುದು ಕಾರ್ಯಾಚರಣೆ ವೇಳೆ ಗಮನಕ್ಕೆ ಬಂದಿದೆ. ಇದರಿಂದ ರೈಲ್ವೆ ನಿಲ್ದಾಣದಲ್ಲಿ ಪ್ರೀ-ಪೇಯ್ಡ್ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರೆ ಪ್ರಯಾಣಿಕರಿಗೆ ದರದ ವಿಚಾರದಲ್ಲಿ ಪಾರದರ್ಶಕತೆ ಸಿಗಲಿದೆ ಎಂದು ಪೊಲೀಸರು ಹೇಳಿದ್ದಾರೆ.
ಬೆಳಗಿನ ಜಾವ ಹೆಚ್ಚುವರಿ ದರ ವಸೂಲಿಗೂ ಎಚ್ಚರಿಕೆ
ಬೆಳಗಿನ ಜಾವ 5.30ರವರೆಗೆ ಮೀಟರ್ ದರದ ಮೇಲೆ ಒಂದೂವರೆ ಪಟ್ಟು ದರ ಪಡೆಯಲು ಅವಕಾಶವಿದ್ದರೂ, ಕೆಲವು ಆಟೋ ಚಾಲಕರು ಈ ನಿಯಮದ ಹೆಸರಿನಲ್ಲಿ ಪ್ರಯಾಣಿಕರಿಗೆ ತೊಂದರೆ ನೀಡುತ್ತಿದ್ದಾರೆ ಎಂಬ ದೂರುಗಳೂ ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಪೊಲೀಸರು ನಿಯಮಾನುಸಾರವೇ ಪ್ರಯಾಣಿಕರಿಂದ ದರ ಪಡೆಯಬೇಕು ಎಂದು ಚಾಲಕರಿಗೆ ಸೂಚಿಸಿದರು.
ನಿಗದಿತ ದರಕ್ಕಿಂತ ಹೆಚ್ಚುವರಿ ಹಣವನ್ನು ಪ್ರಯಾಣಿಕರಿಂದ ಬಲವಂತವಾಗಿ ಪಡೆಯುವುದು ಅಥವಾ ಪ್ರಯಾಣಿಕರಿಗೆ ಅನಗತ್ಯ ತೊಂದರೆ ನೀಡುವುದು ಕಂಡುಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಚಾಲಕರಿಗೆ ಎಚ್ಚರಿಕೆ ನೀಡಲಾಯಿತು.
ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲೂ ಪ್ರೀ-ಪೇಯ್ಡ್ ವ್ಯವಸ್ಥೆ
ಶಿವಮೊಗ್ಗ ನಗರದ ಕೇಂದ್ರ ರೈಲ್ವೆ ನಿಲ್ದಾಣದ ಜೊತೆಗೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲೂ ಪ್ರೀ-ಪೇಯ್ಡ್ ಆಟೋ ಸೌಲಭ್ಯ ಕಲ್ಪಿಸಲಾಗಿದೆ. ಸಾರ್ವಜನಿಕರು ಈ ವ್ಯವಸ್ಥೆಯನ್ನು ಸದುಪಯೋಗಪಡಿಸಿಕೊಂಡು ನಿಗದಿತ ದರದಲ್ಲಿ ಪ್ರಯಾಣಿಸಬೇಕು ಎಂದು ಸಿಪಿಐ ದೇವರಾಜ್ ಮನವಿ ಮಾಡಿದ್ದಾರೆ.
ಪೊಲೀಸರ ಪ್ರಕಾರ, ಕೇವಲ ಒಂದು ಗಂಟೆಯ ಅವಧಿಯಲ್ಲಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ 168 ಪ್ರಯಾಣಿಕರು ಪ್ರೀ-ಪೇಯ್ಡ್ ಆಟೋ ಸೇವೆ ಬಳಸಿಕೊಂಡಿದ್ದಾರೆ. ರೈಲು ಮತ್ತು ಬಸ್ ನಿಲ್ದಾಣಗಳಿಗೆ ಆಗಮಿಸುವ ಪ್ರಯಾಣಿಕರು ಆಟೋ ಹತ್ತುವ ಮುನ್ನ ಪ್ರೀ-ಪೇಯ್ಡ್ ಕೌಂಟರ್ನಿಂದ ಟಿಕೆಟ್ ಪಡೆದುಕೊಳ್ಳುವಂತೆ ಪೊಲೀಸರು ಜಾಗೃತಿ ಮೂಡಿಸಿದರು.
Shivamogga : ನಿಯಮ ಉಲ್ಲಂಘಿಸಿದರೆ ಪ್ರಕರಣ ದಾಖಲಿಸುವ ಎಚ್ಚರಿಕೆ
ಆಟೋ ಚಾಲಕರು ಕಡ್ಡಾಯವಾಗಿ ನಿಯಮಗಳನ್ನು ಪಾಲಿಸಬೇಕು. ಪ್ರಯಾಣಿಕರಿಂದ ನಿಗದಿತ ದರಕ್ಕಿಂತ ಹೆಚ್ಚುವರಿ ಹಣ ವಸೂಲಿ ಮಾಡುವುದು, ಪ್ರೀ-ಪೇಯ್ಡ್ ಟಿಕೆಟ್ ದರವನ್ನು ನಿರಾಕರಿಸುವುದು ಅಥವಾ ನಿಯಮ ಮೀರಿ ವರ್ತಿಸುವುದು ಕಂಡುಬಂದರೆ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಸಿಪಿಐ ದೇವರಾಜ್ ಚಾಲಕರಿಗೆ ಎಚ್ಚರಿಕೆ ನೀಡಿದ್ದಾರೆ.
ಪ್ರಯಾಣಿಕರ ಹಿತಾಸಕ್ತಿಯೇ ಪೊಲೀಸರ ಪ್ರಮುಖ ಆದ್ಯತೆಯಾಗಿದ್ದು, ರೈಲು ಹಾಗೂ ಬಸ್ ನಿಲ್ದಾಣಗಳಲ್ಲಿ ಪ್ರೀ-ಪೇಯ್ಡ್ ಆಟೋ ವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಉದ್ದೇಶದಿಂದ ತಪಾಸಣೆ ಹಾಗೂ ಜಾಗೃತಿ ಕಾರ್ಯ ಮುಂದುವರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಪೂರ್ವ ಸಂಚಾರ ಪೊಲೀಸ್ ಠಾಣೆಯ ಪಿಎಸ್ಐ ನಾಗರಾಜ್ ಹೆಚ್.ಎನ್. ಸೇರಿದಂತೆ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
ಪೊಲೀಸರ ದಿಢೀರ್ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಪ್ರಯಾಣಿಕರಿಗೆ ಸುರಕ್ಷಿತ ಹಾಗೂ ಪಾರದರ್ಶಕ ಆಟೋ ಸೇವೆ ದೊರೆಯುವಂತಾಗಲು ಇಂತಹ ತಪಾಸಣೆಗಳನ್ನು ನಿರಂತರವಾಗಿ ನಡೆಸಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಪೊಲೀಸರ ಮನವಿ
ರೈಲು ಅಥವಾ ಬಸ್ ನಿಲ್ದಾಣದಿಂದ ಆಟೋದಲ್ಲಿ ಪ್ರಯಾಣಿಸುವ ಸಾರ್ವಜನಿಕರು ಸಾಧ್ಯವಾದಷ್ಟು ಪ್ರೀ-ಪೇಯ್ಡ್ ಕೌಂಟರ್ನಿಂದ ಟಿಕೆಟ್ ಪಡೆದು, ಟಿಕೆಟ್ನಲ್ಲಿ ನಮೂದಿಸಿರುವ ನಿಗದಿತ ದರದಲ್ಲಿಯೇ ಪ್ರಯಾಣಿಸಬೇಕು. ಹೆಚ್ಚುವರಿ ಹಣಕ್ಕೆ ಒತ್ತಾಯಿಸಿದರೆ ಸಂಬಂಧಿಸಿದ ಪೊಲೀಸರಿಗೆ ದೂರು ನೀಡುವಂತೆ ಮನವಿ ಮಾಡಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








