ಕಲ್ಪ ಮೀಡಿಯಾ ಹೌಸ್ | ಚಾಮರಾಜನಗರ |
ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕ್ರಾಂತಿಯ ಕಿಚ್ಚು ಹಬ್ಬಿಸಿದ ಶ್ರೇಷ್ಠ ಕ್ರಾಂತಿಕಾರಿ ಭಗತ್ ಸಿಂಗ್ (Bhagat Singh) ಅವರ ತ್ಯಾಗ, ಬಲಿದಾನ, ಸ್ಥೈರ್ಯ ಹಾಗೂ ಸಾಹಸವನ್ನು ಯುವಕರು ಆದರ್ಶವಾಗಿ ಇಟ್ಟುಕೊಂಡಾಗ ರಾಷ್ಟ್ರವನ್ನು ಮುನ್ನಡೆಸಲು ಸಾಧ್ಯ ಎಂದು ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಸಂಸ್ಕೃತಿ ಚಿಂತಕರಾದ ಸುರೇಶ್ ಎನ್. ಋಗ್ವೇದಿ ಹೇಳಿದರು.
ಜೈ ಹಿಂದ್ ಪ್ರತಿಷ್ಠಾನ, ಅಮಚವಾಡಿ ಯುವಕರ ಸಂಘ ಹಾಗೂ ಅಮಚವಾಡಿ ರೆಡ್ ಬುಲ್ಸ್ (Red Bulls) ಕಬಡ್ಡಿ ತಂಡದ ವತಿಯಿಂದ ಕಬಡ್ಡಿ ಮೈದಾನದಲ್ಲಿ ಆಯೋಜಿಸಿದ್ದ ಕ್ರಾಂತಿಕಾರಿ ಭಗತ್ ಸಿಂಗ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
Bhagat Singh: ಬಾಲ್ಯದಲ್ಲೇ ಸ್ವಾತಂತ್ರ್ಯ ಹೋರಾಟದ ಪ್ರಭಾವ
ಭಗತ್ ಸಿಂಗ್ ಬಾಲ್ಯದಲ್ಲಿಯೇ ಬ್ರಿಟಿಷರ ದೌರ್ಜನ್ಯವನ್ನು ಕಣ್ಣಾರೆ ಕಂಡಿದ್ದರು. ಜಲಿಯನ್ ವಾಲಾಬಾಗ್ ದುರಂತದ ಸಾವು-ನೋವುಗಳು ಅವರಲ್ಲಿ ಬ್ರಿಟಿಷರ ವಿರುದ್ಧದ ಆಕ್ರೋಶವನ್ನು ಹೆಚ್ಚಿಸಿದವು. ನಂತರ ಅವರು ಕ್ರಾಂತಿಕಾರಿಯಾಗಿ ರೂಪುಗೊಂಡು ವಿದ್ಯಾರ್ಥಿ ಜೀವನದಲ್ಲಿಯೇ ಕ್ರಾಂತಿಕಾರಿ ಗುಪ್ತ ಸಂಘಗಳೊಂದಿಗೆ ಗುರುತಿಸಿಕೊಂಡು ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾದರು ಎಂದು ಋಗ್ವೇದಿ ವಿವರಿಸಿದರು.
ಕ್ರಾಂತಿಕಾರಿ ಪತ್ರಿಕೆ ‘ಪ್ರತಾಪ್’ನಲ್ಲಿ ಲೇಖನಗಳನ್ನು ಬರೆದು ಯುವಜನರಲ್ಲಿ ದೇಶಪ್ರೇಮ ಹಾಗೂ ಹೋರಾಟದ ಮನೋಭಾವ ಮೂಡಿಸಿದ ಭಗತ್ ಸಿಂಗ್, ಚಂದ್ರಶೇಖರ ಆಜಾದ್ ಹಾಗೂ ಕುಂದನ್ ಲಾಲ್ ಅವರ ಸಂಪರ್ಕಕ್ಕೆ ಬಂದಿದ್ದರು. ಬಳಿಕ ನವಜವಾನ್ ಭಾರತ್ ಸಭಾ ಕ್ರಾಂತಿಕಾರಿ ಸಂಘಟನೆಯಲ್ಲಿಯೂ ಸಕ್ರಿಯರಾಗಿದ್ದರು ಎಂದರು.
ದೇಶಕ್ಕಾಗಿ ಬಂಧನಕ್ಕೂ ಹೆದರದ ಕ್ರಾಂತಿಕಾರಿ
ಪಂಜಾಬಿನ ಸಿಂಹ ಎಂದೇ ಖ್ಯಾತರಾದ ಲಾಲಾ ಲಜಪತ್ ರಾಯ್ ಅವರ ಮೇಲೆ ಬ್ರಿಟಿಷರು ನಡೆಸಿದ ದೌರ್ಜನ್ಯ ಹಾಗೂ ಅವರ ನಿಧನದಿಂದ ನೊಂದ ಭಗತ್ ಸಿಂಗ್ ಬ್ರಿಟಿಷರ ವಿರುದ್ಧ ಹೋರಾಟ ತೀವ್ರಗೊಳಿಸಿದರು. ಬ್ರಿಟಿಷ್ ಅಧಿಕಾರಿ ಸ್ಯಾಂಡರ್ಸ್ ಮೇಲಿನ ದಾಳಿ ಹಾಗೂ ಕೇಂದ್ರ ಶಾಸನಸಭೆಯಲ್ಲಿ ಬಾಂಬ್ ಸ್ಫೋಟದ ಬಳಿಕ ತಪ್ಪಿಸಿಕೊಳ್ಳಲು ಪ್ರಯತ್ನಿಸದೆ ಬಂಧನಕ್ಕೆ ಒಳಗಾದರು ಎಂದು ತಿಳಿಸಿದರು.
ಸೆರೆಮನೆಯಲ್ಲಿ ರಾಜಕೀಯ ಕೈದಿಗಳಿಗೆ ನೀಡಲಾಗುತ್ತಿದ್ದ ಚಿತ್ರಹಿಂಸೆ ಹಾಗೂ ಅವ್ಯವಸ್ಥೆಯ ವಿರುದ್ಧ ಉಪವಾಸ ಸತ್ಯಾಗ್ರಹ ನಡೆಸಿ, ಭಾರತೀಯ ಸ್ವಾತಂತ್ರ್ಯ ಹೋರಾಟಗಾರರಿಗೆ ಭಗತ್ ಸಿಂಗ್ ಸ್ಫೂರ್ತಿಯಾದರು ಎಂದರು.
ಯುವಶಕ್ತಿ ದೇಶದ ಪ್ರಗತಿಗೆ ಬಳಕೆಯಾಗಲಿ
ಭಗತ್ ಸಿಂಗ್, ರಾಜಗುರು ಹಾಗೂ ಸುಖದೇವರನ್ನು ಬ್ರಿಟಿಷರು ಗಲ್ಲಿಗೇರಿಸಿದರೂ, ಅವರ ತ್ಯಾಗದ ಸ್ಫೂರ್ತಿ ಸ್ವಾತಂತ್ರ್ಯ ಚಳವಳಿಗೆ ಮತ್ತಷ್ಟು ಶಕ್ತಿ ನೀಡಿತು ಎಂದು ಋಗ್ವೇದಿ ಹೇಳಿದರು.
ಯುವಕರು ಸದಾ ಕ್ರಿಯಾಶೀಲರಾಗಿದ್ದು, ಶಿಕ್ಷಣ, ಸಂಘಟನೆ, ಸಮಾಜ ಹಾಗೂ ದೇಶದ ಬಗ್ಗೆ ಕಾಳಜಿ ಬೆಳೆಸಿಕೊಳ್ಳಬೇಕು. ಕ್ರೀಡೆಯಲ್ಲಿಯೂ ಹೆಚ್ಚಿನ ಆಸಕ್ತಿ ಹೊಂದಿ ಸಾಧನೆ ಮಾಡಬೇಕು. ವ್ಯಸನಗಳಿಗೆ ಬಲಿಯಾಗದೆ ಕ್ರೀಡಾಮನೋಭಾವ, ಸಾಂಸ್ಕೃತಿಕ ಚಿಂತನೆ ಹಾಗೂ ದೇಶದ ಬಗ್ಗೆ ಗೌರವ ಬೆಳೆಸಿಕೊಂಡು ಸಜ್ಜನರಾಗಿ ಬದುಕಬೇಕು ಎಂದು ಕರೆ ನೀಡಿದರು.
ಕಬಡ್ಡಿ ಸಾಧಕ ಪ್ರಸಾದ್‌ಗೆ ಸನ್ಮಾನ
ಭಗತ್ ಸಿಂಗ್ ಜನ್ಮದಿನದ ಅಂಗವಾಗಿ ಅಮಚವಾಡಿ ರೆಡ್ ಬುಲ್ಸ್ ಕಬಡ್ಡಿ ತಂಡದ ನಾಯಕ ಪ್ರಸಾದ್ ಅವರನ್ನು ಕಬಡ್ಡಿ ಕ್ಷೇತ್ರದಲ್ಲಿನ ಸಾಧನೆಗಾಗಿ ಸುರೇಶ್ ಎನ್. ಋಗ್ವೇದಿ ಗೌರವಿಸಿ ಸನ್ಮಾನಿಸಿದರು.
ದೇಶಭಕ್ತರ ಚಿಂತನೆ ಯುವಕರಿಗೆ ಮಾದರಿಯಾಗಲಿ
ಜಿಲ್ಲಾ ಯುವ ಸಂಘ ಸಂಸ್ಥೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುರೇಶ್ ದೊಡ್ಡಮೋಳೆ ಮಾತನಾಡಿ, ಭಗತ್ ಸಿಂಗ್ ಅವರಂತಹ ದೇಶಭಕ್ತರ ಜನ್ಮದಿನದ ಅಂಗವಾಗಿ ಕ್ರೀಡಾ ಸಾಧಕರನ್ನು ಗೌರವಿಸುತ್ತಿರುವುದು ಹೆಮ್ಮೆಯ ಸಂಗತಿ. ದೇಶಭಕ್ತರ ಚಿಂತನೆಗಳು ಹಾಗೂ ಸಾಧನೆಗಳು ಯುವಕರಿಗೆ ಮಾದರಿಯಾಗಬೇಕು ಎಂದರು.
Also Read>> ಚಿನ್ನದ ಮುಖದ ಚಾಮುಂಡೇಶ್ವರಿ, ಮೂರು ಆನೆಗಳು: ಶಿವಮೊಗ್ಗ ದಸರಾಕ್ಕೆ ಭರ್ಜರಿ ತಯಾರಿ
ದೇಶಕ್ಕಾಗಿ ದುಡಿದ ನೂರಾರು ಯುವಶಕ್ತಿ ಹಾಗೂ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿ ಗೌರವಿಸುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಮಚವಾಡಿ ಕಬಡ್ಡಿ ತಂಡದ ಕುಮಾರ್, ಸಂಜು, ಮಹೇಂದ್ರ, ಪ್ರಸಾದ್, ಗಜೇಂದ್ರ, ಮನು, ಕೆಂಪರಾಜು, ಯುವ ಸಂಘಟನೆಯ ದೊಡ್ಡಮೋಳೆ ಸುರೇಶ್, ಶಿವರಾಂ, ಬಸವಣ್ಣ, ರಮೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











