ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ (Shivamogga) ನಗರದ ಸೋಮಿನಕೊಪ್ಪ ಮುಖ್ಯ ರಸ್ತೆಯಲ್ಲಿರುವ ಶ್ರೀಪಂಚಮುಖಿ ಆಂಜನೇಯ ಮತ್ತು ಶ್ರೀಬನಶಂಕರಿ ದೇವಾಲಯದಲ್ಲಿ ಅಕ್ಟೋಬರ್ 11ರಿಂದ ಅಕ್ಟೋಬರ್ 21ರವರೆಗೆ ವಿಜಯದಶಮಿ ಪ್ರಯುಕ್ತ ವಿಜೃಂಭಣೆಯಿಂದ ಶರನ್ನವರಾತ್ರಿ (Sharannavaratri Mahotsava) ಮಹೋತ್ಸವ ನಡೆಯಲಿದೆ.
ವೇದಬ್ರಹ್ಮ ರವೀಂದ್ರ ಭಟ್, ಹರ್ಷ ಭಟ್ ಹಾಗೂ ಜ್ಯೋತಿಷಿ ಫಲ್ಗುಣ ಶರ್ಮ ಅವರ ನೇತೃತ್ವದಲ್ಲಿ ಶರನ್ನವರಾತ್ರಿಯ ವಿಶೇಷ ಪೂಜೆ, ದೇವರ ಅಲಂಕಾರ, ಪಾರಾಯಣ ಹಾಗೂ ಚಂಡಿಕಾ ಹೋಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ.
ಪ್ರತಿದಿನ ಚಂಡಿಕಾ ಹೋಮ
ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಪ್ರತಿದಿನ ಬೆಳಗ್ಗೆ 10 ಗಂಟೆಗೆ ಚಂಡಿಕಾ ಹೋಮ ಆರಂಭವಾಗಲಿದೆ. ಮಧ್ಯಾಹ್ನ 12.30ಕ್ಕೆ ಪೂರ್ಣಾಹುತಿ ನೆರವೇರಲಿದ್ದು, ಮಧ್ಯಾಹ್ನ 1 ಗಂಟೆಗೆ ಮಹಾಮಂಗಳಾರತಿ ನಡೆಯಲಿದೆ.
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ದೇವತಾರಾಧನೆಯಲ್ಲಿ ಪಾಲ್ಗೊಂಡು ದೇವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ದೇವಸ್ಥಾನದ ಸಂಸ್ಥಾಪಕ ಸಂಯೋಜಕರಾದ ವೇದಬ್ರಹ್ಮ ರವೀಂದ್ರ ಭಟ್ ವಿನಂತಿಸಿದ್ದಾರೆ.
ಪೂಜೆಗೆ ಅಕ್ಕಿ, ಬೆಲ್ಲ, ಹಾಲು, ತುಪ್ಪ ಸಮರ್ಪಣೆಗೆ ಅವಕಾಶ
ಶರನ್ನವರಾತ್ರಿ ಪೂಜಾ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಅಕ್ಕಿ, ಬೆಲ್ಲ, ಹಾಲು, ತುಪ್ಪ ಸೇರಿದಂತೆ ಅಗತ್ಯ ಪೂಜಾ ಸಾಮಗ್ರಿಗಳನ್ನು ಸಮರ್ಪಿಸಬಹುದಾಗಿದೆ ಎಂದು ದೇವಸ್ಥಾನದ ಸಲಹೆಗಾರ ಸುರೇಶ್ ಬಾಳೆಗುಂಡಿ ತಿಳಿಸಿದ್ದಾರೆ.
Also Read>> ಹುಬ್ಬಳ್ಳಿ | ತಿನೈಘಾಟ್ ನಿಲ್ದಾಣದಲ್ಲಿ ಕಬ್ಬಿಣದ ಅದಿರು ಸಾಗಣಿಕೆ ಮತ್ತೆ ಆರಂಭ
Shivamogga: ವಿವಿಧ ಧಾರ್ಮಿಕ ಸೇವೆಗಳ ಆಯೋಜನೆ
ಮಹೋತ್ಸವದ ಅವಧಿಯಲ್ಲಿ ಪ್ರತ್ಯೇಕ ಚಂಡಿಕಾ ಹೋಮ, ಹೂವಿನ ಅಲಂಕಾರ, ಅನ್ನದಾನ ಸೇವೆ, ನೈವೇದ್ಯ ಸಹಿತ ಪಾರಾಯಣ, ಮಹಾನೈವೇದ್ಯ, ಸಾಮೂಹಿಕ ಚಂಡಿಕಾ ಹೋಮ ಹಾಗೂ ಸಾಮೂಹಿಕ ನವರಾತ್ರಿ ಪೂಜಾ ಸೇವೆಗಳು ನೆರವೇರಲಿವೆ.
ಈ ಸೇವೆಗಳಲ್ಲಿ ಭಾಗವಹಿಸಲು ಹಾಗೂ ಸೇವೆ ನೀಡಲು ಇಚ್ಛಿಸುವ ಭಕ್ತರು ಮೊಬೈಲ್ ಸಂಖ್ಯೆ 9448126803 ಅನ್ನು ಸಂಪರ್ಕಿಸಬಹುದು ಎಂದು ದೇವಸ್ಥಾನದ ಆಡಳಿತ ಮುಖ್ಯಸ್ಥೆ ದಿವ್ಯ ಕೆ.ಆರ್. ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news














