ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಈ ಬಾರಿಯ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ವಿಶಿಷ್ಟವಾಗಿ ಮೂಡಿಬಂದಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಆಕರ್ಷಿಸುತ್ತಿರುವುದು ಸಂತಸ ತಂದಿದೆ. ಮುಂದಿನ ವರ್ಷ ಇನ್ನಷ್ಟು ಅದ್ದೂರಿಯಾಗಿ ಸಾಹಿತ್ಯ ಸಮ್ಮೇಳನ (Sahitya Sammelana) ಆಯೋಜಿಸಲು ಅಗತ್ಯ ಸಹಕಾರ ನೀಡಲಾಗುವುದು ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ತಿಳಿಸಿದರು.
ಶಿವಮೊಗ್ಗ (Shivamogga) ನಗರದಲ್ಲಿ ಮಹಾನಗರ ಪಾಲಿಕೆ ವತಿಯಿಂದ ಆಯೋಜಿಸಲಾಗಿದ್ದ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಅರ್ಧ ದಿನದ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಿದರೂ ಅದಕ್ಕೆ ಮಹಾನಗರ ಪಾಲಿಕೆಯಿಂದ ಸೂಕ್ತ ಸಹಕಾರ ನೀಡಲು ಸಿದ್ಧವಿರುವುದಾಗಿ ಹೇಳಿದರು.
ಈ ಬಾರಿಯ ಸಾಹಿತ್ಯ ಸಂಭ್ರಮದಲ್ಲಿ ಲೇಖಕರ ಕೃತಿಗಳ ಬಿಡುಗಡೆ, ಭಜನಾ ಕಾರ್ಯಕ್ರಮ, ಕವಿಗೋಷ್ಠಿ ಹಾಗೂ ಜಾನಪದ ಕಲಾವಿದ ಗುಡ್ಡಪ್ಪ ಜೋಗಿ ಅವರ ಜೋಗಿ ಪದಗಳ ಕಾರ್ಯಕ್ರಮ ಆಯೋಜಿಸಿರುವುದು ವಿಶೇಷವಾಗಿದೆ. ಈ ಎಲ್ಲ ಕಾರ್ಯಕ್ರಮಗಳು ಜನರ ಮನಸ್ಸನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ ಎಂದು ಚನ್ನಬಸಪ್ಪ ಅಭಿಪ್ರಾಯಪಟ್ಟರು.

Shivamogga: ಸಾಹಿತ್ಯ ಸಂಭ್ರಮಕ್ಕೆ ಕವಿ ಡುಂಡಿರಾಜ್ ಚಾಲನೆ
ಸಾಹಿತ್ಯ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಖ್ಯಾತ ಕವಿ ಹಾಗೂ ಸಾಹಿತಿ ಡುಂಡಿರಾಜ್, ಶಿವಮೊಗ್ಗದಲ್ಲಿ ಆಯೋಜಿಸಿರುವ ಸಾಹಿತ್ಯ ಸಂಭ್ರಮದಲ್ಲಿ ಪಾಲ್ಗೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ತಮ್ಮ ಹಾಸ್ಯಭರಿತ ಮಾತುಗಳ ಮೂಲಕ ನೆರೆದಿದ್ದ ಸಾಹಿತ್ಯಪ್ರಿಯರನ್ನು ರಂಜಿಸಿದ ಅವರು, ಸಂದರ್ಭಕ್ಕೆ ತಕ್ಕಂತೆ ಹಲವು ಹನಿಗವನಗಳನ್ನು ಹೇಳಿ ಸಭಿಕರನ್ನು ನಗೆಗಡಲಲ್ಲಿ ತೇಲಿಸಿದರು. ಮಹಾನಗರ ಪಾಲಿಕೆ ಆಯೋಜಿಸಿರುವ ಇಂತಹ ಅಪೂರ್ವ ಹಾಗೂ ವಿಶಿಷ್ಟ ಸಾಹಿತ್ಯ ಸಂಭ್ರಮವು ಶಿವಮೊಗ್ಗದ ಜನತೆಗೆ ನಿಜವಾದ ಸಂಭ್ರಮವನ್ನು ನೀಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮೂರು ಕೃತಿಗಳ ಬಿಡುಗಡೆ
ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಅವರ ‘ನಿಮ್ಮನ್ನೆಲ್ಲೋ ನೋಡಿದ್ದೇನೆ’, ಶ್ರೀನಿವಾಸ ಮೂರ್ತಿ ಅವರ ‘ದೇವಾಲಯಕ್ಕೆ ದಾರಿ’ ಹಾಗೂ ಶುಭ ಕುಸ್ಕೂರ್ ಅವರ ‘ಮನದಾಸೆ’ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.
ಲೇಖಕರು, ಕವಿಗಳು ಹಾಗೂ ಸಾಹಿತ್ಯಾಸಕ್ತರ ಸಮ್ಮುಖದಲ್ಲಿ ನಡೆದ ಕೃತಿ ಬಿಡುಗಡೆ ಕಾರ್ಯಕ್ರಮ ಸಾಹಿತ್ಯ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು.

ಗುಡ್ಡಪ್ಪ ಜೋಗಿ ಅವರ ಜೋಗಿ ಪದಗಳ ಮೋಡಿ
ಖ್ಯಾತ ಜಾನಪದ ಕಲಾವಿದ ಗುಡ್ಡಪ್ಪ ಜೋಗಿ ಮತ್ತು ಸಂಗಡಿಗರಿಂದ ಜೋಗಿ ಪದಗಳ ಕಾರ್ಯಕ್ರಮ ನಡೆಯಿತು. ಜಾನಪದ ಸೊಗಡಿನ ಹಾಡುಗಳು ನೆರೆದಿದ್ದ ಜನರ ಗಮನ ಸೆಳೆದವು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯ ಹಾಗೂ ಕಲಾಸಕ್ತರು ಪಾಲ್ಗೊಂಡಿದ್ದರು.
ಕವಿಗೋಷ್ಠಿಯಲ್ಲಿ 27 ಕವಿಗಳು
ಕವಿ ಡುಂಡಿರಾಜ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ 27 ಕವಿಗಳು ಭಾಗವಹಿಸಿದ್ದರು. ವಿವಿಧ ವಿಷಯಗಳನ್ನು ಒಳಗೊಂಡ ಕವನಗಳನ್ನು ವಾಚಿಸುವ ಮೂಲಕ ಕವಿಗಳು ಸಾಹಿತ್ಯಾಸಕ್ತರ ಮೆಚ್ಚುಗೆಗೆ ಪಾತ್ರರಾದರು.
ಕಾರ್ಯಕ್ರಮ ಆರಂಭಕ್ಕೂ ಮುನ್ನ ರಂಗಾ ಮೆಲೋಡಿಸ್ ತಂಡ ಹಾಗೂ ಸಹನಾ ತಂಡದ ಕಲಾವಿದರಿಂದ ಸುಮಧುರ ಗೀತೆಗಳು ಮತ್ತು ಸುಗಮ ಸಂಗೀತ ಗಾಯನ ಕಾರ್ಯಕ್ರಮ ನಡೆಯಿತು.

‘ಮೈಸೂರು ದಸರಾ ಮೀರಿಸುವಂತಾಗಲಿ ಶಿವಮೊಗ್ಗ ದಸರಾ’
ಕಾರ್ಯಕ್ರಮದ ರೂವಾರಿ ಎಂ.ಎನ್. ಸುಂದರ್ ರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, ಮುಂದಿನ ದಿನಗಳಲ್ಲಿ ಶಿವಮೊಗ್ಗ ದಸರಾ ಮತ್ತಷ್ಟು ಅದ್ದೂರಿಯಾಗಿ ಬೆಳೆದು ಮೈಸೂರು ದಸರಾವನ್ನೂ ಮೀರಿಸುವ ಮಟ್ಟಕ್ಕೆ ತಲುಪಲಿ ಎಂಬ ಆಶಯ ವ್ಯಕ್ತಪಡಿಸಿದರು.
ಇಂತಹ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲು ಸಹಕರಿಸಿದ ಮಹಾನಗರ ಪಾಲಿಕೆಯ ಅಧಿಕಾರಿಗಳು ಹಾಗೂ ಶಾಸಕರನ್ನು ಅವರು ಅಭಿನಂದಿಸಿದರು.
Also Read>> ಜಂತರ್ ಮಂತರ್ ಪ್ರತಿಭಟನೆ: CJP ಇಬ್ಬರು ಪ್ರಮುಖ ನಾಯಕರಿಗೆ 5 ದಿನ ನ್ಯಾಯಾಂಗ ಬಂಧನ
ಗಣ್ಯರಿಗೆ ಸನ್ಮಾನ
ಇದೇ ಸಂದರ್ಭದಲ್ಲಿ ಕವಿ ಡುಂಡಿರಾಜ್, ಜಾನಪದ ಕಲಾವಿದ ಗುಡ್ಡಪ್ಪ ಜೋಗಿ ಹಾಗೂ ಕಾರ್ಯಕ್ರಮದ ರೂವಾರಿ ಎಂ.ಎನ್. ಸುಂದರ್ ರಾಜ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಶಿವಮೊಗ್ಗ ದಸರಾ ಕಾರ್ಯಕ್ರಮದ ಕಾರ್ಯದರ್ಶಿ ಸಿದ್ದಪ್ಪ, ಕಂದಾಯ ಅಧಿಕಾರಿ ವೇಣುಗೋಪಾಲ್, ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಹೆಚ್.ಎಂ. ಮಧು ಸೇರಿದಂತೆ ವಿವಿಧ ಅಧಿಕಾರಿಗಳು ಮತ್ತು ಗಣ್ಯರು ಉಪಸ್ಥಿತರಿದ್ದರು.
ಜಿ. ವಿಜಯಕುಮಾರ್ ಪ್ರಾರ್ಥಿಸಿದರು. ವೇಣುಗೋಪಾಲ್ ಸ್ವಾಗತಿಸಿದರು. ಪ್ರಿಯಾಂಕ ರಾಯ್ಕರ್ ಹಾಗೂ ಚನ್ನಬಸಪ್ಪ ನ್ಯಾಮತಿ ಕಾರ್ಯಕ್ರಮ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news














