ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಷ್ಟ್ರೀಯ ಹೆದ್ದಾರಿಯನ್ನು ದಾಟುತ್ತಿದ್ದ ಸುಮಾರು 70 ವರ್ಷದ ವೃದ್ಧರೊಬ್ಬರಿಗೆ ವೇಗವಾಗಿ ಬಂದ ಏರ್ಟಿಗ ಕಾರು ಡಿಕ್ಕಿ ಹೊಡೆದ ಪರಿಣಾಮ ವೃದ್ಧ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಶಿವಮೊಗ್ಗ (Shivamogga) ತಾಲೂಕಿನ ವೀರಣ್ಣಬೆನವಳ್ಳಿ ಕ್ರಾಸ್ ಸಮೀಪ ಇಂದು ಸಂಜೆ ಸಂಭವಿಸಿದೆ.
ಮೃತರನ್ನು ಶಿವಮೊಗ್ಗ ತಾಲೂಕಿನ ಹಾರನಹಳ್ಳಿ ಗ್ರಾಮದ ನಿವಾಸಿ ತಿಪ್ಪೇಶಪ್ಪ (70) ಎಂದು ಗುರುತಿಸಲಾಗಿದೆ. ವೃದ್ಧರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಹಾರನಹಳ್ಳಿ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
ಕೆಲಸ ಮುಗಿಸಿ ವಾಪಸ್ ತೆರಳುವಾಗ ದುರ್ಘಟನೆ
ತಿಪ್ಪೇಶಪ್ಪ ಅವರು ಯಾವುದೋ ವೈಯಕ್ತಿಕ ಕೆಲಸದ ನಿಮಿತ್ತ ಹಾರನಹಳ್ಳಿ ಗ್ರಾಮದಿಂದ ವೀರಣ್ಣಬೆನವಳ್ಳಿಗೆ ಬಂದಿದ್ದರು. ತಮ್ಮ ಕೆಲಸ ಮುಗಿಸಿಕೊಂಡು ಮತ್ತೆ ವಾಪಸ್ ತೆರಳುವ ಉದ್ದೇಶದಿಂದ ವೀರಣ್ಣಬೆನವಳ್ಳಿ ಕ್ರಾಸ್ ಸಮೀಪದ ರಾಷ್ಟ್ರೀಯ ಹೆದ್ದಾರಿಯನ್ನು ದಾಟಲು ಮುಂದಾಗಿದ್ದಾರೆ.
Also Read>> Resplendent Dasara Celebrations at Prasanna Venkateswara Swamy Temple
ಈ ಸಂದರ್ಭದಲ್ಲಿ ಅಯನೂರು ಕಡೆಯಿಂದ ಶಿವಮೊಗ್ಗದತ್ತ ವೇಗವಾಗಿ ಸಂಚರಿಸುತ್ತಿದ್ದ ಏರ್ಟಿಗ ಕಾರು ರಸ್ತೆ ದಾಟುತ್ತಿದ್ದ ತಿಪ್ಪೇಶಪ್ಪ ಅವರಿಗೆ ಬಲವಾಗಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಅವರು ರಸ್ತೆಗೆ ಬಿದ್ದಿದ್ದು, ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಬ್ರೇಕ್ ಹಾಕಿದರೂ ತಪ್ಪದ ಅಪಘಾತ
ವೃದ್ಧರು ರಸ್ತೆ ದಾಟುತ್ತಿರುವುದನ್ನು ಗಮನಿಸಿದ ಕಾರು ಚಾಲಕ ಬ್ರೇಕ್ ಹಾಕಲು ಪ್ರಯತ್ನಿಸಿದ್ದರೂ ಅಪಘಾತವನ್ನು ತಪ್ಪಿಸಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ. ಶಿವಮೊಗ್ಗ ನೋಂದಣಿಯ ಏರ್ಟಿಗ ಕಾರು ಅಪಘಾತದಲ್ಲಿ ಭಾಗಿಯಾಗಿದ್ದು, ಕಾರು ಚಾಲಕನ ಹೆಸರು ಸೇರಿದಂತೆ ಹೆಚ್ಚಿನ ವಿವರಗಳು ಸದ್ಯಕ್ಕೆ ತಿಳಿದುಬಂದಿಲ್ಲ.
Shivamogga : ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ
ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ನಿರಂತರವಾಗಿರುವುದರಿಂದ ವೀರಣ್ಣಬೆನವಳ್ಳಿ ಕ್ರಾಸ್ನಲ್ಲಿ ರಸ್ತೆ ದಾಟುವ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ವೃದ್ಧರ ಸಾವಿನಿಂದ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ತೀವ್ರ ದುಃಖಿತರಾಗಿದ್ದಾರೆ.
ಘಟನೆಯು ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಕ್ರಮ ಕೈಗೊಳ್ಳುತ್ತಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








