1984
ನೋಯ್ಡಾದಲ್ಲಿ ನಡೆದ ಆರುಷಿ ತಲ್ವಾರ್ ಪ್ರಕರಣದಲ್ಲಿ ಆಕೆಯ ತಂದೆ, ತಾಯಿಯೇ ಹಂತಕರು ಎಂಬ ತೀರ್ಪು ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದೆ. ಈ ಪ್ರಕರಣದಲ್ಲಿ ಶಂಕಿತ ಆರೋಪಿ ಎಂದು ಪೊಲೀಸರು ಎಫ್‌ಐಆರ್‌ನಲ್ಲಿ ದಾಖಲಾದ ವ್ಯಕ್ಛ್ತಿಯೇ ಕೊಲೆಯಾಗಿದ್ದ! ದೂರು ನೀಡಿದ ವ್ಯಕ್ತಿಗಳೇ ಈಗ ಅಪರಾಧಿಗಳಾಗಿ ಜೈಲು ಪಾಲಾಗಿದ್ದಾರೆ! ಮೂರನೇ ವ್ಯಕ್ತಿ ಮನೆಯೊಳಗೆ ನುಸುಳಿ ಕೊಲೆ ನಡೆಸಿರುವುದಕ್ಕೆ ಯಾವುದೇ ಪುರಾವೆ ಇಲ್ಲ ಎನ್ನುವುದು ಈ ಪ್ರಕರಣದ ಮುಖ್ಯ ತಿರುಳು. ಆರೋಪಿಗಳು ದೋಷಿಗಳೆಂದು ಸಾರಲು ಪ್ರತ್ಯಕ್ಷದರ್ಶಿ ಸಾಕ್ಷಿಗಳೇ ಬೇಕೆಂದೇನಿಲ್ಲ, ಸಾಂದರ್ಭಿಕ ಸಾಕ್ಷಿಗಳೇ ಸಾಕು ಎನ್ನುವುದನ್ನು ಈ ತೀರ್ಪು ಎತ್ತಿತೋರಿಸಿದೆ. ಇದೇ ಮಾದರಿಯ ಎರಡು ಪ್ರಕರಣಗಳು ಬೆಂಗಳೂರಿನಲ್ಲಿ ನಡೆದಿದ್ದು ನೆನಪಾಗುತ್ತಿದೆ.
ಬೆಂಗಳೂರಿನ ಹೃದಯ ಭಾಗವಾದ ಹಲಸೂರು ಗೇಟ್ ಠಾಣೆ ವ್ಯಾಪ್ತಿಯ ಸುತ್ತಮುತ್ತ ಆಗ ರೇಷ್ಮೆ ಉದ್ಯಮ ಚುರುಕಾಗಿತ್ತು. ಮನೆಮನೆಗಳಲ್ಲಿ ಕೈಮಗ್ಗದ ಸದ್ದು ಕೇಳಿ ಬರುತ್ತಿತ್ತು. ರಾಮನಗರ, ಚನ್ನಪಟ್ಟಣದಿಂದ ರೈತರುಜ ರೇಷ್ಮೆ ಗೂಡುಗಳನ್ನು ನಿತ್ಯ ತಂದು ಮಾರುತ್ತಿದ್ದರು. ಅಲ್ಲಿ ಸುಮಾರು 50 ಮಂದಿ ಕೆಲಸ ಮಾಡುವ ರೇಷ್ಮೆ ಕೈಗಾರಿಕೆಯ ಶೆಡ್‌ವೊಂದರಲ್ಲಿ ಕ್ಯಾಷಿಯರ್ ರೂಮ್ ಇತ್ತು. ಕಬ್ಬಿಣದ ಬಲೆಗಳಿಂದ ಅದು ಸುತ್ತುವರಿದಿತ್ತು. ಸಿಬ್ಬಂದಿಗೆ ಮತ್ತು ರೇಷ್ಮೆ ರೈತರಿಗೆ ಪ್ರತಿ ಶನಿವಾರ ಹಣ ಬಟವಾಡೆ ಮಾಡಲಾಗುತ್ತಿತ್ತು. ಶುಕ್ರವಾರ ರಾತ್ರಿ ಆ ಕ್ಯಾಷಿಯರ್ ರೂಮ್‌ನಲ್ಲಿ ಸುಮಾರು 5 ಲಕ್ಷ ರೂ. ತಂದಿಡಲಾಗಿತ್ತು.
ಅಂದು ಮಧ್ಯರಾತ್ರಿಯೇ ಕ್ಯಾಷಿಯರ್‌ನ ಕೊಲೆಯಾಯಿತು. ರಕ್ತದ ಮಡುವಿನಲ್ಲಿ ಸತ್ತು ಬಿದ್ದಿದ್ದ ಆತನನ್ನು ಮರುದಿನ ಬೆಳಗ್ಗೆ ಕಂಡು ಆ ಘಟಕದ ಮಾಲೀಕರು ಪೊಲೀಸರಿಗೆ ದೂರು ನೀಡಿದರು. ಶ್ವಾನದಳ, ಬೆರಳಚ್ಚು ತಜ್ಞರ ತಂಡದ ಜತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆಭೇಟಿ ನೀಡಿ ಪಂಚನಾಮೆ ಮುಗಿಸಿ, ಕ್ಯಾಷಿಯರ್ ರೂಮ್‌ಗೆ ಬೀಗ ಹಾಕಿ ಹೋದರು. ಆ ಕೈಗಾರಿಕೆಯ ಸೆಕ್ಯೂರಿಟಿ ಗಾರ್ಡ್ ಬಹದ್ದೂರ್ ಎಂಬಾತ ಅಂದು ರಾತ್ರಿಯೇ ನಾಪತ್ತೆಯಾಗಿದ್ದು ಬೆಳಕಿಗೆ ಬಂತು. ಆತನೇ ಕ್ಯಾಷಿಯರ್‌ನನ್ನು ಕೊಂದು ಲಕ್ಷಾಂತರ ರೂ. ಸಮೇತ ನಾಪತ್ತೆಯಾಗಿರುವ ಸಾಧ್ಯತೆ ಇದೆ ಎಂದು ಎಫ್‌ಐಆರ್‌ನಲ್ಲಿ ದಾಖಲಿಸಿ, ಆತನ ಪತ್ತೆಗೆ ತನಿಖಾ ತಂಡ ರಚಿಸಲಾಯಿತು. ಎರಡು ದಿನಗಳ ಬಳಿಕ ಕೈಗಾರಿಕೆ ಮಾಲೀಕ ಠಾಣೆಗೆ ಓಡಿ ಬಂದರು. ಷೆಡ್‌ನಿಂದ ವಿಪರೀತ ವಾಸನೆ ಬರುತ್ತಿದೆ. ದಯವಿಟ್ಟು ಬೀಗ ತೆಗೆದು ಪರಿಶೀಲಿಸಿ ಎಂದು ಅವರು ಮನವಿ ಮಾಡಿದರು. ಪೊಲೀಸರು ಬೀಗ ತೆಗೆದು ನೋಡಿದರು. ಕ್ಯಾಷಿಯರ್ ರೂಮ್ ಒಳಗಿದ್ದ ಪ್ಲಾಸ್ಟಿಕ್ ಡ್ರಮ್‌ಅನ್ನು ನೊಣಗಳು ಮುತ್ತಿಕೊಂಡಿದ್ದವು. ಅದರಲ್ಲಿ ತುಂಬಿದ್ದ ರೇಷ್ಮೆಯ ತ್ಯಾಜ್ಯವನ್ನು ತೆಗೆದು ನೋಡಿದಾಗ ಆಘಾತ ಕಾದಿತ್ತು.
ಸೆಕ್ಯುರಿಟಿ ಗಾರ್ಡ್ ಬಹದ್ದೂರ್‌ನ ಶವ ಅದರೊಳಗಿತ್ತು! ಆರುಷಿ ಪ್ರಕರಣದಲ್ಲೂ ಹೀಗೆಯೇ ಆಗಿತ್ತು. ಆ ಬಾಲಕಿಯ ಶವದ ಮಹಜರು ನಡೆಸಿದ ಪೊಲೀಸರು, ಶ್ವಾನ ದಳದಿಂದ ಪರಿಶೀಲನೆ ನಡೆಸಿ, ಬೆರಳಚ್ಚು ತಜ್ಞರಿಂದ ಸಾಕ್ಷ್ಯ ಸಂಗ್ರಹಿಸಿ ಕೈತೊಳೆದುಕೊಂಡಿದ್ದರು. ತನಿಖೆಯ ವೇಳೆ ಮೈ ಮರೆಯದೆ ಆಮೂಲಾಗ್ರವಾಗಿ ಇಡೀ ಮನೆಯನ್ನು ಇಂಚಿಂಚೂ ಬಿಡದೆ ಶೋಧಿಸಿದರೆ ಅವತ್ತೇ ಕೆಲಸದಾಳು ಹೇಮರಾಜ್‌ನ ಶವ ಟೆರೇಸ್ ಮೇಲೆ ಪತ್ತೆಯಾಗುತ್ತಿತ್ತು. ಆದರೆ ಅಲ್ಲಿಯ ಪೊಲೀಸರ ಬೇಜವಾಬ್ದಾರಿತನದಿಂದ ಹೇಮ ರಾಜ್ ನಾಪತ್ತೆಯಾಗಿದ್ದಾನೆ ಮತ್ತು ಆತನೇ ಶಂಕಿತ ಆರೋಪಿ ಎಂಬ ದಿಕ್ಕಿನಲ್ಲಿ ತನಿಖೆ ಸಾಗುವಂತಾಯಿತು. ಈ ಪ್ರಕರಣದಲ್ಲೂ ಹಾಗೆಯೇ ಆಯಿತು. ಕೊನೆಗೆ ಈ ಜೋಡಿ ಕೊಲೆಯ ನಿಜವಾದ ಅಪರಾಧಿಗಳು ಪತ್ತೆಯಾದರು.
ಯಾವುದೇ ಅಪರಾಧ ಘಟನೆ ನಡೆದ ಸ್ಥಳದಲ್ಲಿ ಪೊಲೀಸರು ಮೊದಲ ಹೆಜ್ಜೆಯನ್ನು ಹುಷಾರಾಗಿ ಇಡಬೇಕಾಗುತ್ತದೆ. ಅತಿ ಸಣ್ಣ ಸಾಕ್ಷ್ಯ ಕೂಡ ನಾಶವಾಗದಂತೆ ಎಚ್ಚರ ವಹಿಸಬೇಕಾಗುತ್ತದೆ. ಕೃತ್ಯ ನಡೆದ ಸ್ಥಳದಲ್ಲಿ ಸಾರ್ವಜನಿಕರು, ಮಾಧ್ಯಮದವರು ಕಾಲಿಡದಂತೆ ಎಚ್ಚರ ವಹಿಸಬೇಕಾಗುತ್ತದೆ. ಎಲ್ಲ ಕೋನಗಳಿಂದ ತನಿಖೆ ನಡೆಸಬೇಕಾಗುತ್ತದೆ. ಪಾತಕಿ ಒಂದಲ್ಲ ಒಂದು ಪುರಾವೆಯನ್ನು ಬಿಟ್ಟೇ ಹೋಗುತ್ತಾನೆ ಎನ್ನುವುದು ಪೊಲೀಸ್ ಜಗತ್ತಿನ ಅಪಾರ ನಂಬಿಕೆ. ಹಾಗಾಗಿ ಸ್ಥಳದಲ್ಲಿ ಸಿಗುವ ಅತೀ ಸೂಕ್ಷ್ಮ ವಸ್ತುಗಳು ಕೂಡ ಮುಂದಿನ ತನಿಖೆಯ ಹಾದಿ ತೋರಿಸಲು ಅತ್ಯಮೂಲ್ಯ, ತನಿಖಾಧಿಕಾರಿಗಳು ಘಟನಾ ಸ್ಥಳವನ್ನು ಕೂಲಂಕುಶವಾಗಿ ಪರಿಶೀಲಿಸದೆ ಕೊಲೆಯಾದ ವ್ಯಕ್ತ್ತಿಯನ್ನೇ ಆರೋಪಿ ಎಂದು ಪ್ರಥಮ ಮಾಹಿತಿ ವರದಿಯಲ್ಲಿ ದಾಖಲಿಸಿದರೆ, ವಾಸ್ತವ ಸಂಗತಿ ಗೊತ್ತಾಗುವಷ್ಟರಲ್ಲಿ ಸಾಕ್ಷ್ಯ ನಾಶವಾಗುವ ಸಾಧ್ಯತೆ ಇರುತ್ತದೆ. ಆರೋಪಿಗಳ ಪರ ವಕೀಲರು ಈ ಅಂಶವನ್ನೇ ಗಟ್ಟಿಯಾಗಿ ಹಿಡಿದುಕೊಂಡು ವಾದಿಸಿ ಗೆಲ್ಲುವ ಸಾಧ್ಯತೆ ಇರುತ್ತದೆ.
ಮನೆಯೊಳಗಿದ್ದವರೇ ಕೊಲೆಗಾರರು ಎಂಬುದು ಆರುಷಿ ಪ್ರಕರಣದ ಕುತೂಹಲಕಾರಿ ಅಂಶ. ಕೋರಮಂಗಲದ ಶ್ರೀಮಂತ ಕುಟುಂಬವೊಂದರಲ್ಲಿ ಇಂಥದ್ದೇ ಘಟನೆ ನಡೆದಿತ್ತು. ತಂದೆ, ತಾಯಿ ಮತ್ತು ಮಗ ಮೂವರೇ ಆ ಮನೆಯಲ್ಲಿರುತ್ತಿದ್ದರು. ಸಹವಾಸ ದೋಷದಿಂದ ಮಗ ಹಾದಿ ತಪ್ಪಿದ್ದ. ಇಸ್ಪೀಟ್ ಆಡುತ್ತಿದ್ದ, ಕುಡಿಯುತ್ತಿದ್ದ, ವೇಶ್ಯೆಯರ ಬಳಿ ಹೋಗಿ ಹಣ ಚೆಲ್ಲುತ್ತಿದ್ದ. ಮನೆಯಲ್ಲಿನ ಒಡವೆಗಳನ್ನು ಕೊಂಡೊಯ್ದು ಮಾರುತ್ತಿದ್ದ. ಮುಂದೆ ಮನೆ ಮಾರಿ ತನ್ನ ಪಾಲಿನ ಹಣ ಕೊಟ್ಟುಬಿಡು ಎಂದು ತಂದೆಯ ಬಳಿ ಜಗಳ ಮಾಡತೊಡಗಿದ. ಕೈಹಿಡಿದ ಗಂಡ ಮತ್ತು ಮುದ್ದಿನ ಮಗನ ಮಮಕಾರದ ನಡುವೆ ತಾಯಿ ಜರ್ಜರಿತಳಾಗಿದ್ದಳು.
ಒಂದು ರಾತ್ರಿ ಆಸ್ತಿ ವಿಚಾರವಾಗಿ ಅಪ್ಪ-ಮಗನ ನಡುವೆ ಗಲಾಟೆ ಶುರುವಾಯಿತು. ದುಷ್ಟ ಮಗ ತಂದೆಯ ತಲೆಗೆ ದೊಣ್ಣೆಯಿಂದ ಬೀಸಿದ. ಅಪ್ಪ ಸ್ಥಳದಲ್ಲೇ ಮೃತಪಟ್ಟ. ಈ ವಿಚಾರ ಯಾರಿಗೂ ಹೇಳದಂತೆ ತಾಯಿಗೆ ಮಗ ಬೆದರಿಕೆ ಹಾಕಿದ. ಗಂಡ ಸತ್ತಿದ್ದಾನೆ, ಮಗನೂ ಜೈಲಿಗೆ ಹೋದರೆ ತನಗ್ಯಾರು ದಿಕ್ಕಿರುವುದಿಲ್ಲ ಎಂಬ ಭಯದಿಂದ ತಾಯಿ ಸುಮ್ಮನಿದ್ದು ಬಿಟ್ಟಳು. ಸ್ವಲ್ಪ ಹೊತ್ತಿನ ಬಳಿಕ ಹೊರಗೆ ಓಡಿ ಬಂದ ಮಗ, ತನ್ನ ತಂದೆಯನ್ನು ಯಾರೋ ಹೊಡೆದು ಸಾಯಿಸಿದ್ದಾರೆ ಎಂದು ಜೋರಾಗಿ ಬೊಬ್ಬೆ ಹೊಡೆಯುವ ನಾಟಕವಾಡಿದ. ಅಕ್ಕಪಕ್ಕದವರೆಲ್ಲ ಓಡಿ ಬಂದು ಆತನಿಗೆ ಸಮಾಧಾನ ಮಾಡತೊಡಗಿದರು. ಯಾರೋ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎಂದೇ ಜನ ಮಾತನಾಡಿಕೊಂಡರು.
ಸರ್ಕಲ್ ಇನ್‌ಸ್ಪೆಕ್ಟರ್ ಕೆ.ಎಸ್. ಉಲ್ಲಾಸ್ ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡರು. ದಕ್ಷ ಪೊಲೀಸ್ ಅಧಿಕಾರಿಯಾಗಿದ್ದ ಅವರು, ಕೊಲೆ ಪ್ರಕರಣದ ತನಿಕೆಯಲ್ಲಿ ಚಾಣಾಕ್ಷರಾಗಿದ್ದರು. ಕೊಲೆಯಾದವನನ್ನು ಹೊರತುಪಡಿಸಿ ಆ ಮನೆಯಲ್ಲಿದ್ದವರು ತಾಯಿ ಮತ್ತು ಮಗ ಮಾತ್ರ. ಮೂರನೇ ವ್ಯಕ್ತಿ ಆ ಮನೆಯೊಳಗೆ ಬಲವಂತವಾಗಿ ಒಳ ನುಗ್ಗಿದ ಯಾವುದೇ ಕುರುಹಿಲ್ಲ ಎಂಬ ದಿಕ್ಕಿನಲ್ಲಿ ಅವರು ಸಾಂದರ್ಭಿಕ ಸಾಕ್ಷ್ಯಗಳನ್ನೆಲ್ಲ ಜಾಣ್ಮೆಯಿಂದ ಪೋಣಿಸಿ ಆರೋಪ ಪಟ್ಟಿ ದಾಖಲಿಸಿದರು. ಮಗನೇ ಕೊಲೆಗಾರ, ಆತನ ಕೃತ್ಯಕ್ಕೆ ತಾಯಿ ನೆರವು ನೀಡಿದ್ದಾಳೆ ಎನ್ನುವುದು ಚಾರ್ಜ್‌ಶೀಟ್‌ನ ಸಾರವಾಗಿತ್ತು. ಪ್ರಖ್ಯಾತ ನ್ಯಾಯವಾದಿಯೊಬ್ಬರು ಆರೋಪಿಗಳ ಪರ ವಾದಿಸಿದರು. ಸರಕಾರಿ ವಕೀಲರು ಮತ್ತು ಆರೋಪಿ ಪರ ವಕೀಲರ ನಡುವಿನ ವಾದ ಕುತೂಹಲಕಾರಿಯಾಗಿ ಸಾಗಿತು. ಕೃತ್ಯ ನಡೆದ ತಕ್ಷಣ ಸ್ಥಳಕ್ಕೆ ಧಾವಿಸಿದ್ದ ಪಕ್ಕದ ಮನೆಯ ಪೊಲೀಸ್ ಅಧಿಕಾರಿಯೊಬ್ಬರ ಕಾರು ಚಾಲಕನೂ ಕೋರ್ಟ್‌ನಲ್ಲಿ ಉಲ್ಟಾ ಸಾಕ್ಷಿ ಹೇಳಿದ. ಆರೋಪಿಗಳಿಗೆ ಶಿಕ್ಷೆಯಾಗಬಹುದು ಎಂಬ ಅಂದಾಜು ಯಾರಿಗೂ ಇರಲಿಲ್ಲ.
‘ಕೆಟ್ಟ ಚಟಗಳ ದಾಸನಾಗಿದ್ದ ಮಗನೇ ತಂದೆಯನ್ನು ಕೊಂದಿರುವುದು ಸಾಂದರ್ಭಿಕ ಸಾಕ್ಷ್ಯಗಳಿಂದ ಸಾಬೀತಾಗಿದೆ. ಹಾಗಾಗಿ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ನಿಸ್ಸಹಾಯಕಳಾಗಿ ಮಗನ ಕೃತ್ಯಕ್ಕೆ ನೆರವು ನೀಡಿದ ತಾಯಿಗೆ ಒಂದು ವರ್ಷದ ಶಿಕ್ಷೆ ನೀಡಲಾಗಿದೆ. ಆದರೆ ಈಗಾಗಲೇ ಕೆಲವು ತಿಂಗಳು ಆಕೆ ಜೈಲಿನಲ್ಲಿ ಕಳೆದಿರುವುದರಿಂದ ಆ ಅವಧಿಯನ್ನುಪರಿಗಣಿಸಲಾಗುತ್ತದೆ’ ಎಂದು ನ್ಯಾಯಾಧೀಶರು ತೀರ್ಪು ಪ್ರಕಟಿಸಿದಾಗ ಕೋರ್ಟ್ ಹಾಲ್ ಅವಾಕ್ಕಾಯಿತು. ಹೊರಗಿನವರು ಮನೆಯೊಳಗೆ ಬಂದು ಕೊಲೆ ಮಾಡಿದ್ದಾರೆ ಎನ್ನುವುದನ್ನು ಆರೋಪಿ ಪರ ವಕೀಲರು ಸಾಬೀತುಪಡಿಸಲು ವಿಫಲರಾಗಿದ್ದಾರೆ, ಸಾಂದರ್ಭಿಕ ಸಾಕ್ಷಿಗಳನ್ನು ಆಧರಿಸಿ ಶಿಕ್ಷೆ ನೀಡಬಹುದೆಂದು ಸುಪ್ರೀಂ ಕೋರ್ಟ್ ಕೂಡ ಹೇಳಿದೆ ಎನ್ನುವುದನ್ನು ನ್ಯಾಯಾಧೀಶರು ಉಲ್ಲೇಖಿಸಿದರು. ಪ್ರತಿಕೂಲ ಪರಿಸ್ಥಿತಿಯ ನಡುವೆಯೂ ಇನ್‌ಸ್ಪೆಕ್ಟರ್ ಉಲ್ಲಾಸ್ ನಿಜವಾದ ಆರೋಪಿಗಳನ್ನು ಗುರುತಿಸಿದ್ದಕ್ಕೆ ನ್ಯಾಯಧೀಶರು ಪ್ರಶಂಸೆ ವ್ಯಕ್ತಪಡಿಸಿದರು.
ಕೋರಮಂಗಲದಲ್ಲಿನ ಕೊಲೆ ಪ್ರಕರಣದ ತೀರ್ಪು ಪ್ರಕಟವಾಗುವ ದಿನ ನಾನೂ ಕೋರ್ಟ್‌ನಲ್ಲಿದ್ದೆ. ಕೃಷ್ಣಪ್ಪ ಎಂಬುವರು ನ್ಯಾಯಧೀಶರಾಗಿದ್ದರು. ಆರೋಪಿಯಂತೂ ಭಾರೀ ಹುರುಪಿನಲ್ಲಿದ್ದ. ತನ್ನ ಬಿಡುಗಡೆ ಗ್ಯಾರಂಟಿ ಎಂದುಕೊಂಡಿದ್ದ. ಆತನ ಪರ ವಕೀಲರು ಎಷ್ಟೊಂದು ಆತ್ಮವಿಶ್ವಾಸದಲ್ಲಿದ್ದರೆಂದರೆ, ಸ್ವೀಟ್ ಪ್ಯಾಕೇಟ್‌ಗಳ ಸಮೇತ ಕಲಾಪಕ್ಕೆ ಹಾಜರಾಗಿದ್ದರು. ನನ್ನ ವಾದಕ್ಕೇ ಗೆಲುವು, ಜಡ್‌ಜ್ಮೆಂಟ್ ಪ್ರಕರವಾಗುತ್ತಿದ್ದಂತೆ ನಿಮಗೆಲ್ಲ ಸಿಹಿ ಹಂಚುತ್ತೇನೆ ಎಂದು ಕಿರಿಯ ವಕೀಲರಲ್ಲಿ ಹೇಳುತ್ತ ಜಾಲಿಯಾಗಿದ್ದರು. ನ್ಯಾಯಾಧೀಶರು ತೀರ್ಪು ಪ್ರಕಟಿಸುತ್ತಿದ್ದಂತೆ ದಿಗ್ಬ್ರಾಂತಿಗೊಳಗಾದ ಆ ವಕೀಲರು ಸ್ವೀಟ್‌ಸ್ ಬಾಕ್‌ಸ್ಗಳನ್ನು ಟೇಬಲ್ ಮೇಲೆಯೇ ಬಿಟ್ಟು ಪೇರಿಕಿತ್ತರು! ಖುಲಾಸೆಯಾಗುವ ವಿಶ್ವಾಸದಲ್ಲಿದ್ದ ಆರೋಪಿ ಅನಿರೀಕ್ಷಿತ ಆಘಾತದಿಂದ ಕಟಕಟೆಯಲ್ಲೇ ಕುಸಿದು ಬಿದ್ದಿದ್ದ.
ನೋಯ್ಡಾದಲ್ಲಿ ನಡೆದ ಆರುಷಿ ತಲ್ವಾರ್ ಪ್ರಕರಣದ ಮಾದರಿಯಲ್ಲೇ ಕೆಲ ವರ್ಷಗಳ ಹಿಂದೆ ಬೆಂಗಳೂರಿನಲ್ಲೂ ಎರಡು ಪ್ರಕರಣಗಳು ನಡೆದಿದ್ದವು. ಒಂದು ಪ್ರಕರಣದಲ್ಲಿ, ಕೊಲೆ ಮಾಡಿದ್ದಾನೆ ಎಂದು ಎಫ್‌ಐಆರ್‌ನಲ್ಲಿ ದಾಖಲಿಸಲಾದ ವ್ಯಕ್ತಿಯೇ ಕೊಲೆಗೀಡಾಗಿದ್ದ. ಮತ್ತೊಂದು ಪ್ರಕರಣದಲ್ಲಿ, ಮನೆಯೊಳಗಿದ್ದವರೇ ತಂದೆಯನ್ನು ಕೊಂಡು ತಪ್ಪಿಸಿಕೊಳ್ಳಲು ನಾಟಕವಾಡಿದ್ದರು. ಸಾಂದರ್ಭಿಕ ಸಾಕ್ಷ್ಯಗಳನ್ನೇ ಆಧರಿಸಿ ಶಿಕ್ಷೆ ವಿಧಿಸಬಹುದು ಎನ್ನುವದಕ್ಕೆ ಈ ಪ್ರಕರಣ ನಿದರ್ಶನವಾಗಿತ್ತು.
Discussion about this post